ಎನ್​ಸಿಪಿಯವರು ಬೆನ್ನಿಗೆ ಚೂರಿ ಹಾಕುತ್ತಾರೆ ಎಂದಿದ್ದ ಕಾಂಗ್ರೆಸ್ ನಾಯಕ ಯೂ-ಟರ್ನ್  
ದೇಶ

ಶರದ್ ಪವಾರ್​ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತೇನೆ! ಎನ್​ಸಿಪಿಯವರು ಬೆನ್ನಿಗೆ ಚೂರಿ ಹಾಕುತ್ತಾರೆ ಎಂದಿದ್ದ ಕಾಂಗ್ರೆಸ್ ನಾಯಕ ಯೂ-ಟರ್ನ್ | Vijay Wadettiwar

ಮುಂಬೈ: ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡಿದ್ದಕ್ಕಾಗಿ ಹಿರಿಯ ರಾಜಕಾರಣಿ ಶರದ್ ಪವಾರ್ ಅವರನ್ನು ಬೆನ್ನಿಗೆ ಚೂರಿ ಹಾಕುವವರು ಎಂದು ಕರೆದಿದ್ದ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ (Vijay Wadettiwar), ಭಾನುವಾರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ಮುಂದಾಗಿದ್ದಾರೆ.

ದೇಶದ ಹಿರಿಯ ನಾಯಕರಾಗಿರುವ ಶರದ್ ಪವಾರ್ ಅವರು ಮಸೂದೆಗೆ ನೀಡಿರುವ ಬೆಂಬಲವನ್ನು ಹಿಂಪಡೆದರೆ, ಅವರ ಪಾದಗಳಿಗೆ ತಲೆಯಿಟ್ಟು ಕ್ಷಮೆಯಾಚಿಸುತ್ತೇನೆ ಮತ್ತು ಅವರು ಕೇಳಿದರೆ ರಾಜಕೀಯವನ್ನೇ ತ್ಯಜಿಸುತ್ತೇನೆ ಎಂದು ವಡೆಟ್ಟಿವಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರು ಬಾರಿಯ ಶಾಸಕರೂ ಆಗಿರುವ ವಿಜಯ್ ವಡೆಟ್ಟಿವಾರ್, ಪವಾರ್ ಸಾಹೇಬರು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಬೆಂಬಲಿಸದಿದ್ದರೆ ತಾವು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ತಮ್ಮ ಹಿಂದಿನ ಹೇಳಿಕೆಯು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಪವಾರ್ ಅವರ ಜಾತ್ಯತೀತ ಸಿದ್ಧಾಂತದ ಚಿತ್ರಣವು ಯಾವಾಗಲೂ ತಮ್ಮ ಹೃದಯದಲ್ಲಿ ಉಳಿಯುತ್ತದೆ ಎಂದಿದ್ದಾರೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ಮಿತ್ರಪಕ್ಷಗಳಾಗಿದ್ದು, ಪವಾರ್ ಸಾಹೇಬರು ಹೇಳಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುವುದಾಗಿ ವಡೆಟ್ಟಿವಾರ್ ತಿಳಿಸಿದ್ದಾರೆ.

ಏನಿದು ವಿವಾದ!

ನಿನ್ನೆ (ಶನಿವಾರ) ಮಾತನಾಡಿದ್ದ ವಡೆಟ್ಟಿವಾರ್, ಶರದ್ ಪವಾರ್ ಅವರಿಗೆ ಜನರ ಬೆನ್ನಿಗೆ ಚೂರಿ ಹಾಕುವ ಇತಿಹಾಸವಿದೆ ಎಂದು ಆರೋಪಿಸಿದ್ದರು. ಇದಷ್ಟೆ ಅಲ್ಲದೇ, ಅಧಿಕಾರವಿಲ್ಲದೆ ಎನ್​ಸಿಪಿಗೆ ಪಕ್ಷಕ್ಕೆ ಬದುಕಲು ಸಾಧ್ಯವಿಲ್ಲ, ಅವರೊಂದು ರೀತಿ ನೀರಿನಿಂದ ಹೊರ ಬಿದ್ದಿರುವ ಮೀನಿದ್ದಂತೆ. ಅವರಿಗೆ ಯಾವುದೇ ಸಿದ್ಧಾಂತವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಟೀಕಿಸಿದ್ದರು.

ಮುಂದುವರೆದು ಮಾತನಾಡಿದ ವಡೆಟ್ಟಿವಾರ್, ಕಾಂಗ್ರೆಸ್ ಬೆಂಬಲದಿಂದ ಅವರನ್ನು ರಾಜ್ಯಸಭೆಗೆ ಕಳುಹಿಸಲಾಗಿತ್ತು, ಆದರೆ ಪ್ರಜಾಪ್ರಭುತ್ವದ ನಾಶಕ್ಕೆ ಕಾರಣರಾದವರ ಇತಿಹಾಸ ಬರೆದಾಗ ಪವಾರ್ ಹೆಸರು ಖಂಡಿತವಾಗಿಯೂ ಆ ಪಟ್ಟಿಯಲ್ಲಿರುತ್ತದೆ, ಎನ್​​ಸಿಪಿ ನಾಯಕರ ಈ ನಡೆ ಅತ್ಯಂತ ದುರದೃಷ್ಟಕರ ಮತ್ತು ತಪ್ಪು ಎಂದು ಅವರು ಕಿಡಿಕಾರಿದ್ದರು.

ಪವಾರ್, ಸ್ಟಾಲಿನ್​ ಭೇಟಿಗೆ ಕೈ ನಿಯೋಗ!

ಏತನ್ಮಧ್ಯೆ, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶರದ್ ಪವಾರ್ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಉನ್ನತ ನಾಯಕರು ಭಾನುವಾರ ಸಂಜೆ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಇದೇ ನಿಯೋಗವು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಬೆಂಬಲಿಸಿರುವ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಅವರನ್ನೂ ಭೇಟಿಯಾಗಿ ಮನವೊಲಿಸಲು ಈಗಾಗಲೇ ಪ್ರಯತ್ನಿಸುತ್ತಿದೆ.

ಕಳೆದ ಏಪ್ರಿಲ್‌ನಲ್ಲಿ ಅಗತ್ಯ ಬೆಂಬಲ ಕ್ರೋಢೀಕರಿಸಲು ವಿಫಲವಾಗಿದ್ದ ಕೇಂದ್ರ ಸರ್ಕಾರ, ಸೋಮವಾರ ಲೋಕಸಭೆಯಲ್ಲಿ ಹೊಸದಾಗಿ ಸಂವಿಧಾನ (132ನೇ ತಿದ್ದುಪಡಿ) ಮಸೂದೆಯನ್ನು ಮಂಡಿಸಲು ಸಜ್ಜಾಗಿದೆ. ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭೆ ಹಾಗೂ ವಿಧಾನಸಭಾ ಸ್ಥಾನಗಳನ್ನು ಶೇ. 50 ರಷ್ಟು ಹೆಚ್ಚಿಸಿ, ಪರಿಷ್ಕೃತ ಸ್ಥಾನ ಹಂಚಿಕೆ ಮತ್ತು ಕ್ಷೇತ್ರಗಳ ಗಡಿಗಳನ್ನು 2051 ರವರೆಗೆ ಸ್ಥಿರವಾಗಿರಿಸಲು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದರನ್ವಯ ಲೋಕಸಭೆಯ ಗರಿಷ್ಠ ಸದಸ್ಯ ಬಲವನ್ನು 543 ರಿಂದ 850ಕ್ಕೆ (ರಾಜ್ಯಗಳಿಂದ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35) ಹಾಗೂ ರಾಜ್ಯ ವಿಧಾನಸಭೆಗಳ ಗರಿಷ್ಠ ಮಿತಿಯನ್ನು 500 ರಿಂದ 650ಕ್ಕೆ ಏರಿಸಲು ಉದ್ದೇಶಿಸಲಾಗಿದೆ. ಆದರೆ, ಈ ಮಸೂದೆಯು ಪ್ರಜಾಪ್ರಭುತ್ವವನ್ನು ಮುಗಿಸಲಿದ್ದು, ಬಿಜೆಪಿಯು ತನ್ನ ರಾಜಕೀಯ ಲಾಭಕ್ಕಾಗಿ ಸಂವಿಧಾನವನ್ನು ಮರುರೂಪಿಸಲು ಇದನ್ನು ಬಳಸಿಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ(ಏಜೆನ್ಸೀಸ್​).