ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
- ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮತ್ತಷ್ಟು ಕುಸಿತ
- ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಯಾವಾಗ?
- ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಿಷ್ಟು
ನವದೆಹಲಿ: ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿದ್ದ ಕಚ್ಚಾ ತೈಲ ಬೆಲೆಗಳಿಂದ ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು (Petrol Diesel Price) ಹೆಚ್ಚಿನ ನಷ್ಟ ಅನುಭವಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಪ್ರಸ್ತುತ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಇಳಿಕೆಯಾಗಿರುವ ಕಾರಣ, ದೇಶದಲ್ಲಿ ಈಗಾಗಲೇ 110 ರೂ. ಆಗಿರುವ ಲೀ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಯಾವಾಗ ಇಳಿಸುತ್ತೀರಾ ಎಂಬ ಜನತೆಯ ಪ್ರಶ್ನೆ ಕೇಂದ್ರ ಸರ್ಕಾರದ ಬಾಗಿಲನ್ನು ಬಡಿಯುತ್ತಿದೆ. ಇದಕ್ಕೆ ಕಡೆಗೂ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, ಏಪ್ರಿಲ್ನಿಂದ ಜೂನ್ 30ರ ವರೆಗೆ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಮಾರಾಟದಲ್ಲಿ ಒಟ್ಟು 74,781 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿದರು.
ಏಪ್ರಿಲ್ ಮತ್ತು ಜೂನ್ ನಡುವೆ ಪೆಟ್ರೋಲ್‌ನಲ್ಲಿ 19,905 ಕೋಟಿ ರೂ., ಡೀಸೆಲ್‌ನಲ್ಲಿ 1.44 ಲಕ್ಷ ಕೋಟಿ ರೂ. ಮತ್ತು ಎಲ್‌ಪಿಜಿ ಗ್ಯಾಸ್ನಲ್ಲಿ 24,148 ಕೋಟಿ ರೂ.ಗಳ ಕೊಂಚ ಚೇತರಿಕೆ ಕಂಡುಬಂದಿದೆ. ಈ ಮೂರರ ಒಟ್ಟು ಮೊತ್ತ 1.88 ಲಕ್ಷ ಕೋಟಿ ರೂ. ಆಗಿದೆ. ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯ ಉಂಟಾದರೂ ಭಾರತದಲ್ಲಿ ಮಾತ್ರ ಇಂಧನ ಪೂರೈಕೆಯಲ್ಲಿ ಯಾವುದೇ ಅಡಚಣೆ ಎದುರಾಗಲಿಲ್ಲ ಎಂದು ಒತ್ತಿ ಹೇಳಿದರು. ವಿವಿಧ ದೇಶಗಳಿಂದ ಕಚ್ಚಾ ತೈಲ, ಪೆಟ್ರೋಲ್-ಡೀಸೆಲ್ ಮತ್ತು ಎಲ್‌ಪಿಜಿ ಅನಿಲವನ್ನು ಮುಂಚಿತವಾಗಿಯೇ ಶೇಖರಣೆ ಮಾಡಿಟ್ಟುಕೊಂಡಿದ್ದರಿಂದ ಪೂರೈಕೆ ನಿರಂತರವಾಗಿ ನಡೆಯುತ್ತಿದೆ ಎಂದರು.
ಇಂಧನ ಬೆಲೆಯಲ್ಲಿ ಶೀಘ್ರ ಇಳಿಕೆ?
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಸಾಧ್ಯತೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಪ್ರಸ್ತುತ ಸಂಸ್ಕರಿಸಲಾಗುತ್ತಿರುವ ಕಚ್ಚಾ ತೈಲವನ್ನು ಎರಡು ತಿಂಗಳ ಹಿಂದೆ ದುಪ್ಟಟ್ಟು ಬೆಲೆಗೆ ಖರೀದಿ ಮಾಡಲಾಗಿದೆ. ಕಾರಣ, ಆ ಸಮಯದಲ್ಲಿ ಅಂತಾರಾಷ್ಟ್ರೀಯ ತೈಲ ಬೆಲೆ ಮತ್ತು ಸಾರಿಗೆ ವೆಚ್ಚಗಳು ಗಗನಕ್ಕೇರಿದ್ದವು ಮತ್ತು ಈಗಲೂ ಅದರ ಎಫೆಕ್ಟ್ ಮುಂದುವರೆದಿದೆ. ಮುಂದಿನ ಎರಡು ವಾರಗಳು ಹೀಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಕುಸಿದರೆ, ದೇಶದಲ್ಲಿನ ಇಂಧನ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಪರೋಕ್ಷವಾಗಿ ಇಳಿಸುವ ಮುನ್ಸೂಚನೆಯನ್ನು ನೀಡಿದ್ದಾರೆ,(ಏಜೆನ್ಸೀಸ್).