Nitish Kumars son  
ದೇಶ

Nitish Kumars son | ನಿತೀಶ್​ ಕುಮಾರ ಪುತ್ರನ ರಾಜಕೀಯ ಪ್ರವೇಶ..? ಮಹತ್ವದ ಸುಳಿವು ನೀಡಿದ ಜೆಡಿಯು ನಾಯಕ

ಪಟನಾ: ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಕುಟುಂಬ ರಾಜಕಾರಣ ಎನ್ನುವುದು ಸರ್ವೆ ಸಾಮಾನ್ಯವಾಗಿದೆ, ಇದಕ್ಕೆ ಯಾವ ಪಕ್ಷವೂ ಹೊರತಾಗಿಲ್ಲ. ಈಗ ಬಿಹಾರದ ಜೆಡಿಯು ನಾಯಕರೊಬ್ಬರು ನೀಡಿರುವ ಹೇಳಿಕೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಪುತ್ರ ನಿಶಾಂತ್​ ರಾಜಕೀಯ ಪ್ರವೇಶದ ಬಗೆಗಿನ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಪಟನಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಕುಮಾರ್ ಝಾ, ಸಿಎಂ ಪುತ್ರನ ರಾಜಕೀಯ ಪ್ರವೇಶದ ಬಗೆಗಿನ ಊಹಾಪೋಹಗಳಿಗೆ ಇಂಬು ನೀಡುವ ಹೇಳಿಕೆಯನ್ನು ನೀಡಿದ್ದು, ನಿಶಾಂತ್ ರಾಜಕೀಯ ಪ್ರವೇಶಿಸಲು ಮತ್ತು ಪಕ್ಷದೊಳಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸ್ವಾಗತ ಎಂದರು. ರಾಜಕೀಯ ಸೇರ್ಪಡೆಯ ಬಗ್ಗೆ ಪಕ್ಷದ ಹಿತೈಷಿಗಳು, ಬೆಂಬಲಿಗರು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದ್ದಾರೆ, ನಾವೆಲ್ಲರೂ ಕೂಡ ಅದನ್ನು ಬಯಸುತ್ತೇವೆ, ಅಂತಿಮ ನಿರ್ಧಾರ ನಿಶಾಂತ್ ಅವರಿಗೆ ಬಿಡಲಾಗಿದೆ ಎಂದು ಹೇಳಿದರು.
ಈ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಿಶಾಂತ್, ಇದೆಲ್ಲವೂ ಜನರ ಆಶೀರ್ವಾದ. ಅವರು ಮತ್ತೊಮ್ಮೆ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ನನ್ನ ತಂದೆ ರಾಜ್ಯದ ಜನರ ಭರವಸೆಗಳನ್ನು ಈಡೇರಿಸಿದ್ದಾರೆ ಮತ್ತು ಈ ಬಾರಿಯೂ ಪೂರೈಸುತ್ತಾರೆ ಎಂದು ಹೇಳಿದರು.

ನಿಶಾಂತ್ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹ...

ನಿಶಾಂತ್ ರಾಜಕೀಯ ಪ್ರವೇಶದ ಬಗ್ಗೆ ತುಂಬಾ ದಿನಗಳಿಂದ ಚರ್ಚೆ ನಡೆಯುತ್ತಿದ್ದು, ನಿತೀಶ್​ ಕುಮಾರ್​ ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ಹಲವಾರು ಜೆಡಿಯು ನಾಯಕರು, ಈಗ ಉತ್ತರಾಧಿಕಾರಿಯಾಗಲು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದರು. ಆ ಸಮಯದಲ್ಲಿ ಮಾತನಾಡಿದ್ದ ಝಾ, ಇದು ನಿತೀಶ್ ಕುಮಾರ್ ಸ್ಥಾಪಿಸಿರುವ ಪಕ್ಷ. ಈ ಚುನಾವಣೆಯ ಬಳಿಕ ನಿಶಾಂತ್ ಸೇರ್ಪಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಇದಕ್ಕೆ ನಿತೀಶ್ ಕುಮಾರ್ ಒಪ್ಪಿಗೆ ಅಗತ್ಯವಿದ್ದು, ಇಡೀ ಪಕ್ಷವು ಅವರ ನಿರ್ಧಾರವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದರು.

ಬಿಹಾರ ಚುನಾವಣೆಯಲ್ಲಿ ಗೆಲುವು...

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಎನ್​ಡಿಎ ಮೈತ್ರಿಕೂಟ 202 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ತಲಾ 101 ಸ್ಥಾನದಲ್ಲಿ ಕಣಕ್ಕಿಳಿದಿದ್ದ ಭಾರತೀಯ ಜನತಾ ಪಕ್ಷ 89, ಜೆಡಿಯು 85 ರಲ್ಲಿ ಜಯ ಗಳಿಸಿದ್ದವು(ಏಜೆನ್ಸೀಸ್​).