Assam Election | ಚಹಾ ತೋಟದ ಕಾರ್ಮಿಕರು
ದಿಸ್ಪೂರ್: ಅಸ್ಸಾಂ ವಿಧಾನಸಭಾ ಚುನಾವಣೆಯ (Assam Election) ಹೊಸ್ತಿಲಲ್ಲಿ ರಾಜ್ಯದ ಚಹಾ ತೋಟದ ಕಾರ್ಮಿಕರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಘೋಷಿಸಿರುವ ಎರಡು ಪ್ರಮುಖ ನಿರ್ಧಾರಗಳು ಕಮಲದ ಹಾದಿಯನ್ನು ಸುಗಮಗೊಳಿಸುವ ಮುನ್ಸೂಚನೆ ನೀಡುತ್ತಿವೆ.
ಅಪ್ಪರ್ ಅಸ್ಸಾಂನ ಸುಮಾರು 35 ವಿಧಾನಸಭಾ ಕ್ಷೇತ್ರಗಳ ಮೇಲೆ ನೇರ ಪ್ರಭಾವ ಬೀರುವ ಈ ಕಾರ್ಮಿಕ ಸಮೂಹವನ್ನು ಸೆಳೆಯಲು ಸರ್ಕಾರವು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ದಿನಗೂಲಿಯನ್ನು 250 ರೂ.ಗಳಿಂದ 280 ರೂ.ಗಳಿಗೆ ಏರಿಕೆ ಮಾಡಿದೆ. ಏಪ್ರಿಲ್ 9 ರಂದು ಮತದಾನ ನಡೆಯುವ ಮುನ್ನವೇ ಈ 30 ರೂಪಾಯಿಗಳ ಹೆಚ್ಚಳವು ಕಾರ್ಮಿಕರ ಕೈಸೇರಲಿದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಕಾರ್ಮಿಕರು 500 ರೂ. ದಿನಗೂಲಿಗೆ ಬೇಡಿಕೆ ಇಟ್ಟಿದ್ದರೂ, ಸದ್ಯದ ಈ ಏರಿಕೆಯು ಅವರಲ್ಲಿ ಸಮಾಧಾನ ತಂದಿದೆ. ವೇತನ ಹೆಚ್ಚಳಕ್ಕಿಂತಲೂ ಮಿಗಿಲಾಗಿ ಮಿಷನ್ ಬಸುಂಧರಾ ಅಡಿಯಲ್ಲಿ ಚಹಾ ತೋಟದ ಕಾರ್ಮಿಕರನ್ನು ದಶಕಗಳಿಂದ ವಾಸಿಸುತ್ತಿದ್ದ ಭೂಮಿಯ ಮಾಲೀಕರನ್ನಾಗಿ ಮಾಡಿರುವುದು ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿದ್ದು, ಸುಮಾರು 3.5 ಲಕ್ಷ ಕುಟುಂಬಗಳಿಗೆ ಭೂ ಗುತ್ತಿಗೆ ಹಕ್ಕುಗಳನ್ನು ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಇದೇ ತಿಂಗಳು ಪ್ರಧಾನಿ ನರೇಂದ್ರ ಮೋದಿ ಆನ್ಲೈನ್ ಮೂಲಕ ಹಕ್ಕುಪತ್ರಗಳನ್ನು ವಿತರಿಸಿದ್ದರು.
ಗೋಲಾಘಾಟ್ ಜಿಲ್ಲೆಯ ಚಹಾ ತೋಟಗಳಲ್ಲಿ ಇದರ ಪ್ರತಿಧ್ವನಿ ಸ್ಪಷ್ಟವಾಗಿ ಕೇಳಿಬರುತ್ತಿದ್ದು, 200 ವರ್ಷಗಳ ಬಳಿಕ ನಮಗೆ ಭೂಮಿಯ ಹಕ್ಕು ಸಿಕ್ಕಿದೆ ಎಂಬುದು ಕಾರ್ಮಿಕರ ಘನತೆಯನ್ನು ಹೆಚ್ಚಿಸಿದೆ ಎಂದು ಬಿಜೋಯ್ ಮಿರ್ಧಾ ಎನ್ನುವರು ಹರ್ಷ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ದಾಖಲೆಗಳನ್ನು ತೋರಿಸುತ್ತಾ ಜೋಗೋಡು ದುಸಾದ್ ತಾನು ಭೂಮಾಲೀಕನಾದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
2016 ರಿಂದ ಬಿಜೆಪಿ ಸರ್ಕಾರವು ಚಹಾ ತೋಟ ಪ್ರದೇಶಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಭೂ ಗುತ್ತಿಗೆಯ ನಿರ್ಧಾರವು ಪಕ್ಷದ ನೆಲೆಯನ್ನು ಭದ್ರಪಡಿಸಿದೆ ಎಂದು ಭಾರತೀಯ ಚಹಾ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಕೆ. ಬೆಜ್ಬರುವಾ ಅಭಿಪ್ರಾಯಪಟ್ಟಿದ್ದಾರೆ. ಸುಮಾರು 200 ವರ್ಷಗಳ ಹಿಂದೆ ಬ್ರಿಟಿಷರಿಂದ ಚಹಾ ಕೃಷಿಗಾಗಿ ಕರೆತರಲ್ಪಟ್ಟ ಈ ಕಾರ್ಮಿಕರ ಪೂರ್ವಜರ ಕನಸು ಈಗ ನನಸಾಗುತ್ತಿದೆ.
ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಈ ಜನರ ದಶಕಗಳ ಬೇಡಿಕೆ ಇನ್ನೂ ಬಾಕಿ ಉಳಿದಿದ್ದು, ಕಾಂಗ್ರೆಸ್ ಇದನ್ನು ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸುತ್ತಿದೆ. ಆದರೆ, ಪ್ರಸ್ತುತ ತೋಟಗಳಲ್ಲಿನ ವಾತಾವರಣವು ಕಮಲದ ಬೆಳೆ ಹುಲುಸಾಗಿ ಬೆಳೆಯುತ್ತಿರುವುದನ್ನು ಸೂಚಿಸುತ್ತಿದ್ದು, ಈ ಕಾರ್ಮಿಕರನ್ನು ಮತ್ತೆ ತನ್ನತ್ತ ಸೆಳೆಯಲು ಕಾಂಗ್ರೆಸ್ ಭಾರಿ ಕಸರತ್ತು ನಡೆಸದೇ ಬೇರೆ ದಾರಿ ಇಲ್ಲ (ಏಜೆನ್ಸೀಸ್).