ಕಮ್ಯುನಿಸ್ಟ್ ಮುಕ್ತವಾಗುತ್ತಾ ಭಾರತ?
ತಿರುವನಂತಪುರ: ಭಾರತದ ರಾಜಕಾರಣದಲ್ಲಿ ಒಂದು ಕಾಲದಲ್ಲಿ ಅಬ್ಬರಿಸುತ್ತಿದ್ದ ಕೆಂಪು ಬಾವುಟ ಈಗ ತನ್ನ ಅಸ್ತಿತ್ವಕ್ಕಾಗಿ (Communist Free India) ಹೋರಾಡಬೇಕಾದ ಪರಿಸ್ಥಿತಿಗೆ ತಲುಪಿದೆ.
ಸೋಮವಾರ (ಮೇ.4) ಮಧ್ಯಾಹ್ನದ ಕೇರಳ ಚುನಾವಣಾ ಫಲಿತಾಂಶದ ಟ್ರೆಂಡ್‌ಗಳನ್ನು ನೋಡಿದರೆ, ದಶಕಗಳ ಕಾಲ ಭಾರತೀಯ ರಾಜಕೀಯದ ದಿಕ್ಸೂಚಿಯಾಗಿದ್ದ ಕಮ್ಯುನಿಸ್ಟ್ ಚಳವಳಿ ಈಗ ದಿವಾಳಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. 1970ರ ನಂತರ ಇದೇ ಮೊದಲ ಬಾರಿಗೆ ಭಾರತದ ಯಾವುದೇ ರಾಜ್ಯದಲ್ಲಿ ಎಡಪಕ್ಷಗಳ ಸರ್ಕಾರ ಇಲ್ಲದಂತಾಗುವ ಭೀತಿ ಎದುರಾಗಿದೆ.
ಪಿಣರಾಯಿ ವಿಜಯನ್ ಆಡಳಿತಕ್ಕೆ ಮತದಾರನ ಬ್ರೇಕ್
ಕೇರಳದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಸಂಪ್ರದಾಯವಿತ್ತು. ಆದರೆ 2021ರಲ್ಲಿ ಪಿಣರಾಯಿ ವಿಜಯನ್ ಈ ಸಂಪ್ರದಾಯ ಮುರಿದು ಸತತ ಎರಡನೇ ಬಾರಿ ಅಧಿಕಾರ ಹಿಡಿದು ಇತಿಹಾಸ ನಿರ್ಮಿಸಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಉಲ್ಟಾ ಹೊಡೆದಿದೆ.
ಒಟ್ಟು 140 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ ಎಲ್ಡಿಎಫ್ (LDF) ಕೇವಲ 35 ಸ್ಥಾನಗಳಿಗೆ ಕುಸಿದಿದೆ. ಇದು ಕೇವಲ ಒಂದು ರಾಜ್ಯದ ಸೋಲಲ್ಲ, ಬದಲಿಗೆ ಭಾರತದಲ್ಲಿ ಎಡಪಂಥೀಯ ಸಿದ್ಧಾಂತದ ಆಡಳಿತಕ್ಕೆ ಬಿದ್ದ ದೊಡ್ಡ ಹೊಡೆತ ಎಂದರೆ ತಪ್ಪಾಗದು.
ಮೊದಲ ಚುನಾವಣೆಯಲ್ಲೇ ಮಿಂಚಿದ್ದ ಲಾಲ್ ಸಲಾಮ್
ಭಾರತೀಯ ರಾಜಕಾರಣವನ್ನು ಹಿಂತಿರುಗಿ ನೋಡಿದರೆ ಕಮ್ಯುನಿಸ್ಟರ ಇತಿಹಾಸ ರೋಚಕವಾಗಿದೆ. 1951-52ರಲ್ಲಿ ದೇಶದ ಮೊದಲ ಚುನಾವಣೆ ನಡೆದಾಗ ಲೋಕಸಭೆಯಲ್ಲಿ ಕಾಂಗ್ರೆಸ್ ನಂತರ ಅತಿ ಹೆಚ್ಚು ಸ್ಥಾನವನ್ನು ಇದೇ ಕಮ್ಯುನಿಸ್ಟ್ ಪಕ್ಷ ಗೆದ್ದಿಕೊಂಡಿತು. 1957ರಲ್ಲಿ ಕೇರಳದಲ್ಲಿ ಇಎಂಎಸ್ ನಂಬೂದಿರಿಪಾಡ್ ನೇತೃತ್ವದಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಮ್ಯುನಿಸ್ಟ್ ಸರ್ಕಾರ ರಚನೆಯಾಗಿತ್ತು.
ಪಶ್ಚಿಮ ಬಂಗಾಳ ಮತ್ತು ತ್ರಿಪುರ: ವೈಭವದ ದಿನಗಳಿಂದ ಅವನತಿಯತ್ತ
ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯರ ಅವನತಿ ಅತ್ಯಂತ ನಾಟಕೀಯವಾಗಿದೆ. 1977 ರಿಂದ 2011 ರವರೆಗೆ ಸತತ 34 ವರ್ಷಗಳ ಕಾಲ ಜ್ಯೋತಿ ಬಸು ಮತ್ತು ಬುದ್ಧದೇವ್ ಭಟ್ಟಾಚಾರ್ಜಿಯಂತಹ ನಾಯಕರ ನೇತೃತ್ವದಲ್ಲಿ ಆಳ್ವಿಕೆ ನಡೆಸಿದ್ದ ಎಡಪಕ್ಷಗಳು, ಮಮತಾ ಬ್ಯಾನರ್ಜಿ ಉದಯದೊಂದಿಗೆ ತಮ್ಮ ಪ್ರಾಬಲ್ಯ ಕಳೆದುಕೊಂಡವು. ಪ್ರಸ್ತುತ ಅಲ್ಲಿ ಬಿಜೆಪಿಯು ಪ್ರಮುಖ ವಿರೋಧ ಪಕ್ಷವಾಗಿ ಬೆಳೆಯುತ್ತಿದ್ದು, ಎಡಪಕ್ಷಗಳು ರಾಜ್ಯ ರಾಜಕೀಯದಿಂದ ಬಹುತೇಕ ಕಣ್ಮರೆಯಾಗಿವೆ. ಸಮೀಕ್ಷೆಗಳ ಪ್ರಕಾರ ಈ ಬಾರಿ ಅವು ಒಂದೇ ಒಂದು ಸ್ಥಾನ ಗೆಲ್ಲಲು ಸಹ ಹೆಣಗಾಡುತ್ತಿವೆ.
ತ್ರಿಪುರಾದಲ್ಲೂ ಇದೇ ಕಥೆ ನಡೆದಿದೆ. ಮಾಣಿಕ್ ಸರ್ಕಾರ್ ನೇತೃತ್ವದಲ್ಲಿ 25 ವರ್ಷಗಳ ಕಾಲ ನಿರಂತರ ಆಡಳಿತ ನಡೆಸಿದ ಎಡಪಕ್ಷಗಳು 2018 ರಲ್ಲಿ ಅಧಿಕಾರ ಕಳೆದುಕೊಂಡವು. ಇಂದು ಅಲ್ಲಿ ಅವು ಬುಡಕಟ್ಟು ಸಮುದಾಯಗಳು ಮತ್ತು ಕಾರ್ಮಿಕರಲ್ಲಿ ತನ್ನ ನೆಲೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿವೆ.
ಐತಿಹಾಸಿಕ ಪ್ರಮಾದ ಮತ್ತು ಅವನತಿಯ ಹಾದಿ
1996ರಲ್ಲಿ ಭಾರತದ ಪ್ರಧಾನಿಯಾಗುವ ಸುವರ್ಣಾವಕಾಶ ಜ್ಯೋತಿ ಬಸು ಅವರಿಗೆ ಹುಡುಕಿಕೊಂಡು ಬಂದಿತ್ತು. ಆದರೆ ಅವರದೇ ಪಕ್ಷದ ಪಾಲಿಟ್‌ಬ್ಯೂರೊ ಅದಕ್ಕೆ ತಡೆ ನೀಡಿತು. ನಂತರ ಸ್ವತಃ ಜ್ಯೋತಿ ಬಸು ಅವರೇ ಇದನ್ನು ಐತಿಹಾಸಿಕ ಪ್ರಮಾದ ಎಂದು ಕರೆದಿದ್ದರು.
2008ರಲ್ಲಿ ಅಣು ಒಪ್ಪಂದದ ವಿಷಯದಲ್ಲಿ ಮನಮೋಹನ್ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎಡಪಕ್ಷಗಳು ವಾಪಸ್ ಪಡೆದವು. ಆ ಸಮಯದಲ್ಲಿ ಅವರ ಬಳಿ 60 ಸಂಸದರಿದ್ದರು. ಆದರೆ ಅಲ್ಲಿಂದ ಶುರುವಾದ ಅವರ ಪತನ ಇಂದು ಇಲ್ಲಿಗೆ ಬಂದು ನಿಂತಿದೆ.
ರಾಜ್ಯಗಳ ಮೇಲಿನ ಹಿಡಿತ ತಪ್ಪಿದ್ದು ಎಲ್ಲಿ?
2011ರಲ್ಲಿ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ 'ಪೋರಿಬೋರ್ಟನ್' ಅಲೆಗೆ ಕೆಂಪು ಕೋಟೆ ಕುಸಿದುಬಿತ್ತು. 2018ರಲ್ಲಿ ಬಿಜೆಪಿ ಅಲೆಗೆ ತ್ರಿಪುರಾ ಕೂಡ ಕೈತಪ್ಪಿತು. ಈಗ ಕಮ್ಯುನಿಸ್ಟರ ಕೊನೆಯ ಭರವಸೆಯಾಗಿದ್ದ ಕೇರಳದಲ್ಲೂ ಜನ ಬದಲಾವಣೆ ಬಯಸಿದ್ದಾರೆ.
ಬಂಗಾಳ ಮತ್ತು ತ್ರಿಪುರಾದಲ್ಲಿ ನೆಲಕಚ್ಚಿದ ನಂತರ ಎಡಪಂಥೀಯರಿಗೆ ಸಮಾಧಾನ ನೀಡಿದ್ದು ಕೇರಳ ಮಾತ್ರ. ಆದರೆ ಈಗಿನ ಟ್ರೆಂಡ್ ಗಮನಿಸಿದರೆ ಅಲ್ಲಿಯೂ ಯುಡಿಎಫ್ ಭರ್ಜರಿ ಮುನ್ನಡೆ ಸಾಧಿಸಿ ಕಾಂಗ್ರೆಸ್‌ಗೆ ಬಲ ತುಂಬಿದೆ.
ಮುಂದೇನು?
ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ, ಕೇರಳ ಮತ್ತು ತ್ರಿಪುರಾವನ್ನು ಆಳುತ್ತಿದ್ದ ಕೆಂಪು ಪಡೆ, ಈಗ ಭಾರತದ ಆಡಳಿತದ ಭೂಪಟದಿಂದ ಮರೆಯಾಗುವ ಹಂತದಲ್ಲಿದೆ. ಮತದಾರರು ಬಲಪಂಥೀಯ ಮತ್ತು ಪ್ರಾದೇಶಿಕ ಪಕ್ಷಗಳತ್ತ ಹೆಚ್ಚು ವಾಲುವುದರ ಜೊತೆಗೆ, ಎಡಪಕ್ಷಗಳು ಜನರ ನಾಡಿಮಿಡಿತ ಅರಿಯುವಲ್ಲಿ ವಿಫಲವಾಗುತ್ತಿವೆಯೇ ಎಂಬ ಪ್ರಶ್ನೆ ಎದ್ದಿದೆ,(ಏಜನ್ಸೀಸ್).