Abhishek Banerjee | ಟಿಎಂಸಿ ಕಚೇರಿ ಮೇಲಿನ ದಾಳಿಗೆ ಗರಂ ಆದ ಸಂಸದ ಅಭಿಷೇಕ್ ಬ್ಯಾನರ್ಜಿ! 
ದೇಶ

ಇದು ಪ್ರಜಾಪ್ರಭುತ್ವವಲ್ಲ, ರಾಜಕೀಯ ಗೂಂಡಾಗಿರಿ: ಟಿಎಂಸಿ ಕಚೇರಿ ಮೇಲಿನ ದಾಳಿಗೆ ಗರಂ ಆದ ಸಂಸದ ಅಭಿಷೇಕ್ ಬ್ಯಾನರ್ಜಿ! | Abhishek Banerjee

ಕೋಲ್ಕತ್ತಾ: ಇಲ್ಲಿನ ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ಗುರುವಾರ ಮುಂಜಾನೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಆರೋಪಿಸಿದ್ದು, ಬಿಜೆಪಿಯವರು, ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ದೂರಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬ್ಯಾನರ್ಜಿ, ಮಾರಕ ಆಯುಧಗಳನ್ನು ಹಿಡಿದಿದ್ದ ಬಿಜೆಪಿ ಕಾರ್ಯಕರ್ತರ ಗುಂಪು ಬೆಳಗಿನ ಜಾವ ಸುಮಾರು 4:30 ಕ್ಕೆ ಕೆಮ್ಯಾಕ್ ಸ್ಟ್ರೀಟ್‌ನಲ್ಲಿರುವ ಟಿಎಂಸಿ ಕಚೇರಿಗೆ ಅಕ್ರಮವಾಗಿ ನುಗ್ಗಿ, ಅಲ್ಲಿದ್ದ ಜನರ ಮೇಲೆ ಹಲ್ಲೆ ನಡೆಸಿ, ಅವರ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು, ಆವರಣವನ್ನು ಧ್ವಂಸಗೊಳಿಸಿದ್ದಾರೆ.
ಟಿಎಂಸಿ ಕಾರ್ಯಕರ್ತರು ಎರಡು ಗಂಟೆಗಳ ಕಾಲ ಸತತವಾಗಿ ಕರೆ ಹಾಗೂ ಇಮೇಲ್ ಮಾಡಿದರೂ ಕೋಲ್ಕತ್ತಾ ಪೊಲೀಸರು ಸ್ಪಂದಿಸಿಲ್ಲ, ಪೊಲೀಸರ ಈ ನಿಷ್ಕ್ರಿಯತೆಯನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಟಿಎಂಸಿ ಸಂಸದ, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಅಭಿಷೇಕ್ ಬ್ಯಾನರ್ಜಿ, ಪಶ್ಚಿಮ ಬಂಗಾಳದ ರಾಜ್ಯಪಾಲರು, ಕೇಂದ್ರ ಗೃಹ ಸಚಿವರು ಮತ್ತು ಪ್ರಧಾನಮಂತ್ರಿಯವರು ಈ ದಾಳಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೋ ಅಥವಾ ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೋ ಎಂದು ಪ್ರಶ್ನಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಎತ್ತಿಹಿಡಿಯಲು ಪ್ರಸ್ತುತ ನಡೆಯುತ್ತಿರುವ ಘಟನೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಕೋಲ್ಕತ್ತಾ ಹೈಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ. ಇದರೊಂದಿಗೆ, ಕಚೇರಿ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದಾರೆನ್ನಲಾದ ಪ್ರತಿಯೊಬ್ಬ ಆರೋಪಿಯನ್ನೂ ತಕ್ಷಣವೇ ಬಂಧಿಸಬೇಕೆಂದು ಟಿಎಂಸಿ ನಾಯಕ ಒತ್ತಾಯಿಸಿದ್ದಾರೆ.
ಈ ದಾಳಿಯನ್ನು ಯಾರು ಯೋಜಿಸಿದರು, ಸಂಘಟಿಸಿದರು ಮತ್ತು ನಿರ್ದೇಶಿಸಿದರು ಎಂಬುದರ ಕುರಿತು ತನಿಖೆ ನಡೆಸಬೇಕು ಎಂದಿರುವ ಬ್ಯಾನರ್ಜಿ, ಈಗಲೇ ಸಾಕಷ್ಟಾಯಿತು, ಇನ್ನು ಸಾಕು. ಅಪರಾಧಿಗಳನ್ನು ಬಂಧಿಸಿ. ಹೊಣೆಗಾರಿಕೆಯನ್ನು ನಿಗದಿಪಡಿಸಿ ಕ್ರಮ ಕೈಗೊಳ್ಳಿ ಎಂದು ಅವರು ಬರೆದುಕೊಂಡಿದ್ದಾರೆ.

ಸಿಎಂ ಸುವೇಂದು ಅಧಿಕಾರಿ ವಿರುದ್ಧ ಅಭಿಷೇಕ್ ವಾಗ್ದಾಳಿ!...

ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅಭಿಷೇಕ್ ಬ್ಯಾನರ್ಜಿ, ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ನಿಮಗೆ ತೃಣಮೂಲ ಕಾಂಗ್ರೆಸ್ ಮತ್ತು ನನ್ನನ್ನು ಕಂಡರೆ ಎಷ್ಟು ಭಯವಿದೆ ಎಂಬ ಕಾರಣಕ್ಕೆ ಇಂತಹ ಬೆದರಿಕೆ ತಂತ್ರಗಳಿಗೆ ಮೊರೆ ಹೋಗುತ್ತಿದ್ದೀರಾ..? ಎಂದು ಅವರು ಪ್ರಶ್ನಿಸಿದ್ದಾರೆ. ವಿರೋಧ ಪಕ್ಷಗಳನ್ನು ಹಿಂಸಾಚಾರ, ದಾಳಿ ಮತ್ತು ಬೆದರಿಕೆಗಳ ಮೂಲಕ ಹತ್ತಿಕ್ಕುವುದಾದರೆ, ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ. ಅವರು ತಕ್ಷಣ ರಾಜೀನಾಮೆ ನೀಡಬೇಕು. ಇದು ಪ್ರಜಾಪ್ರಭುತ್ವವಲ್ಲ, ಸಂಪೂರ್ಣ ರಾಜಕೀಯ ಗೂಂಡಾಗಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
9, ಕೆಮ್ಯಾಕ್ ಸ್ಟ್ರೀಟ್‌ನಲ್ಲಿರುವ ಅಕ್ರಮ ಹೊರ್ಡಿಂಗ್ ತೆರವುಗೊಳಿಸುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ತಡೆ ಒಡ್ಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಅಭಿಷೇಕ್ ಬ್ಯಾನರ್ಜಿ, ಟಿಎಂಸಿ ಸಂಸದ ಡೆರೆಕ್ ಒಬ್ರೇನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಈ ಹೊಸ ಆರೋಪಗಳು ಕೇಳಿಬಂದಿವೆ. ಬ್ಯಾನರ್ಜಿ ಅವರ ಕಚೇರಿ ಇರುವ ಕಟ್ಟಡದಿಂದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಎಂಬ ಬರಹವಿದ್ದ ನಾಮಫಲಕವನ್ನು ಕೋಲ್ಕತ್ತಾ ಪಾಲಿಕೆ ಹಾಗೂ ಕೋಲ್ಕತ್ತಾ ಪೊಲೀಸರು ತೆರವುಗೊಳಿಸಿದ ನಂತರ ಈ ವಿವಾದ ಪ್ರಾರಂಭವಾಗಿತ್ತು(ಏಜೆನ್ಸೀಸ್).