Sunil Sharma | ಜಮ್ಮು ಮತ್ತು ಕಾಶ್ಮೀರದ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ
ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಶಾಸಕರು ಉಚಿತವಾಗಿ ಪಕ್ಷಾಂತರಗೊಳ್ಳಲು ಸಿದ್ಧರಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ (Sunil Sharma) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶರ್ಮಾ, ಉಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವನ್ನು ಉರುಳಿಸುವ ಅಥವಾ ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ಮತದಾರರ ಸ್ಪಷ್ಟ ಜನಾದೇಶವನ್ನು ಪಡೆದ ನಂತರವೇ ಬಿಜೆಪಿ ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರವನ್ನು ರಚಿಸಲಿದೆ ಎಂದಿದ್ದಾರೆ.
ಎನ್‌ಸಿ ಶಾಸಕರು ಪಕ್ಷಾಂತರಕ್ಕೆ ರೆಡಿ!...
ಪ್ರತಿಯೊಬ್ಬ ಎನ್‌ಸಿ ಶಾಸಕರೂ ಯಾವುದೇ ಆಮಿಷವಿಲ್ಲದೆ ಪಕ್ಷ ಬದಲಾಯಿಸಲು ಸಿದ್ಧರಿದ್ದಾರೆ ಎಂದು ಶರ್ಮಾ ಆರೋಪಿಸಿದ್ದು, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿಗೆ ಯಾವುದೇ ಆಸಕ್ತಿಯಿಲ್ಲ ಎಂದು ಅವರು ಹೇಳಿದ್ದಾರೆ. ಅಧಿಕಾರಕ್ಕೆ ಬರಲು ಬಿಜೆಪಿ ಪ್ರಸ್ತುತ ಸರ್ಕಾರವನ್ನು ಬೀಳಿಸಲು ಯತ್ನಿಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರು ಪುನರುಚ್ಛರಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಕುರಿತು ಕೇಂದ್ರ ಸರ್ಕಾರದ ಹಲವು ಪ್ರಮುಖ ನಿಲುವುಗಳನ್ನು ಪ್ರಸ್ತುತ ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ ಎಂದು ವಾದಿಸಿದ್ದಾರೆ.
ಆರ್ಟಿಕಲ್ 370 ರದ್ದುಗೊಳಿಸಿದ್ದು, ಆರ್ಟಿಕಲ್ 35A ತೆಗೆದುಹಾಕಿದ್ದು, ರಾಜ್ಯದರ್ಜೆ ಮರುಸ್ಥಾಪಿಸುವ ಭರವಸೆ ಹಾಗೂ ಜಮಾತ್-ಎ-ಇಸ್ಲಾಮಿ ಮತ್ತು ಹುರಿಯತ್‌ನಂತಹ ಸಂಸ್ಥೆಗಳ ಮೇಲಿನ ನಿಷೇಧವನ್ನು ಅವರು ಉದಾಹರಣೆಯಾಗಿ ನೀಡಿದ್ದು, ಪ್ರಸ್ತುತ ಸರ್ಕಾರದ ನಿಲುವು ಈಗ ಬಿಜೆಪಿಯ ನಿಲುವಿಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.
ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲ್ಲ ಎಂದ ಬಿಜೆಪಿ
ಉಮರ್ ಅಬ್ದುಲ್ಲಾ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಜುಲೈ 20 ರಂದು ಆಯೋಜಿಸಲಾಗಿರುವ ಪ್ರತಿಭಟನೆಯನ್ನು ಸುನಿಲ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ. ಈ ಪ್ರತಿಭಟನೆಯು ಜಮ್ಮು ಮತ್ತು ಕಾಶ್ಮೀರದ ರಾಜಕೀಯದಲ್ಲಿ ಒಂದು ಪ್ರಮುಖ ಕ್ಷಣವಾಗಲಿದೆ. ಪ್ರಸ್ತುತ ಸರ್ಕಾರವು ಯುವಕರ ಹಕ್ಕುಗಳನ್ನು ಕಸಿಯುತ್ತಿದೆ, ಹೊರಗುತ್ತಿಗೆ ನೇಮಕಾತಿಯಲ್ಲಿ ತನ್ನ ಬೆಂಬಲಿಗರಿಗೆ ಆದ್ಯತೆ ನೀಡುತ್ತಿದೆ, ಭ್ರಷ್ಟಾಚಾರ ಹೆಚ್ಚಾಗಲು ಅವಕಾಶ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಎಂ ಅಬ್ದುಲ್ಲಾ ಹೇಳಿದ್ದೇನು..?
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶನಿವಾರ ಬಿಜೆಪಿ ವಿರುದ್ಧ ಆಪರೇಷನ್ ಕಮಲದ ಗಂಭೀರ ಆರೋಪ ಮಾಡಿದ್ದು, ತಮ್ಮ ಶಾಸಕರಿಗೆ ಹಣದ ಆಮಿಷ ಒಡ್ಡಿ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ದೂರಿದ್ದಾರೆ. ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ಲಾ, ಬಿಜೆಪಿಗೆ ನಂಟು ಹೊಂದಿರುವ ಸುಪ್ರೀಂ ಕೋರ್ಟ್ ವಕೀಲರೊಬ್ಬರು ತಮ್ಮ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ನ್ಯಾಷನಲ್ ಕಾನ್ಫರೆನ್ಸ್ ಪಕ್ಷವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಹಣ ಮತ್ತು ಸಚಿವ ಸ್ಥಾನದ ಆಮಿಷಗಳು ಕೆಲಸ ಮಾಡದಿದ್ದಾಗ, ಬಿಜೆಪಿ ನಾಯಕರು ಬಾಗಿಲ ಹಿಂದೆ ನಿಂತು ನನ್ನ ಶಾಸಕರಿಗೆ ನಮ್ಮೊಂದಿಗೆ ಬನ್ನಿ, ನಾವು ನಿಮಗೆ ರಾಜ್ಯದ ಸ್ಥಾನಮಾನ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಜಮ್ಮುವಿನ ನಮ್ಮ ಶಾಸಕರೊಬ್ಬರು ನನಗೆ ತಿಳಿಸಿದ ವಿಷಯಕ್ಕೆ ದೇವರೇ ಸಾಕ್ಷಿ, ಸುಪ್ರೀಂ ಕೋರ್ಟ್ ವಕೀಲರೂ ಆಗಿರುವ ಬಿಜೆಪಿಯ ಪದಾಧಿಕಾರಿಯೊಬ್ಬರು ಅವರಿಗೆ 20 ರಿಂದ 30 ಕೋಟಿ ರೂಪಾಯಿ, ಮಂತ್ರಿ ಸ್ಥಾನ ಮತ್ತು ರಾಜ್ಯದ ದರ್ಜೆ ಕೊಡುವುದಾಗಿ ಹೇಳಿ ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ ಎಂದು ಅಬ್ದುಲ್ಲಾ ಹೇಳಿದರು.(ಏಜೆನ್ಸೀಸ್).