Will frame you in drug case Mumbai cop removed
- ಸಿಜೆಪಿ ಪ್ರತಿಭಟನಾಕಾರರಿಗೆ ಮುಂಬೈ ಪೊಲೀಸ್ ಬೆದರಿಕೆ, ಅಮಾನತು
- ಮತ್ತೆ ನನ್ನ ಕಣ್ಣಿಗೆ ಕಾಣಿಸಿಕೊಂಡರೆ, ಜೇಬಿನಲ್ಲಿ ಡ್ರಗ್ ಇಟ್ಟು ಕೇಸ್ ಹಾಕ್ಬಿಡ್ತೀನಿ ಹುಷಾರ್ ಎಂದು ಎಚ್ಚರ
- ಗೂಂಡಾ ಭಾಷೆ ಬಳಸಿ ಹೆದರಿಸುವ ಪೊಲೀಸ್ ಅಮಾನತುಗೊಳಿಸುವಂತೆ ಮುಂಬೈ ಕಾಂಗ್ರೆಸ್ ಒತ್ತಾಯ
ಮುಂಬೈ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗಾಗಿ ಮುಂಬೈ, ಗುಜರಾತ್, ದೆಹಲಿಯಲ್ಲಿ ಪ್ರತಿಭಟನೆಗಳು ಮುಂದುವರೆದಿದೆ. ಈ ಮಧ್ಯೆ ಮುಂಬೈ ಪೊಲೀಸರು ವಿದ್ಯಾರ್ಥಿಗಳನ್ನು ಪ್ರತಿಭಟನೆಯಿಂದ ದೂರವಿಡಲು ಡ್ರಗ್ ಕೇಸ್ ಹಾಕಿ(Will frame you in drug case Mumbai cop removed), ಜೈಲಲ್ಲಿ ಕೂರುವ ಹಾಗೆ ಮಾಡಿ ಬಿಡ್ತೇವೆ ಎಂದು ಬೆದರಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆ ಬೆನ್ನಲ್ಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಶಿವಾಜಿ ಪಾರ್ಕ್, ಚೆಂಬೂರು ಮತ್ತು ಆಜಾದ್ ಮೈದಾನ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಪೊಲೀಸ್ ಬೆದರಿಕೆ ಹಾಕಿದ ಆರೋಪದ ಮೇರೆಗೆ ಅವರನ್ನು ಕೆಲಸದಿಂದ ವಜಾಗೊಳಿಸಿದ್ದು, ವಿಡಿಯೋ ಬಗ್ಗೆ ತೀವ್ರ ತನಿಖೆ ನಡೆಸಲು ಆದೇಶಿಸಲಾಗಿದೆ.
ನೀಟ್ ಪೇಪರ್ ಸೋರಿಕೆ ಹಾಗೂ ಪರೀಕ್ಷೆಗಳಲ್ಲಾದ ಲೋಪ ದೋಷದ ಹೊಣೆ ಹೊತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ನ್ಯಾಯಯುತವಾಗಿ, ಶಾಂತಿಯಿಂದ ಕೇಳುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸ್ ವ್ಯಾನ್ನಲ್ಲಿ ಕುಳ್ಳರಿಸಿಕೊಂಡು. 50-50 ಗ್ರಾಂ ಡ್ರಗ್ ಇಟ್ಟು ಕೇಸ್ ಹಾಕ್ತೀವಿ. ನಿಮಗೆ ಜಾಮೀನು ಸಿಗುವುದಿಲ್ಲ. ನನ್ನಷ್ಟು ಕೆಟ್ಟ ವ್ಯಕ್ತಿ ಬೇರೆ ಯಾರೂ ಇಲ್ಲ. ನೀವು ಮತ್ತೆ ಇಲ್ಲಿ ಮತ್ತೆ ಕಾಣಿಸಿಕೊಂಡರೆ ನಿಮ್ಮ ಜೀವನ ನರಕವನ್ನಾಗಿಸುತ್ತೇನೆ ಎಂದು ಗೂಂಡಾಗಳಂತೆ ಮಾತನಾಡಿರುವುದು ವಿಡಿಯೋದಲ್ಲಿ ಇದೆ.
ಮುಂಬೈ ಕಾಂಗ್ರೆಸ್ ಪೋಸ್ಟ್
ಪೊಲೀಸ್ ಬೆದರಿಕೆ ಹಾಕಿರುವ ವಿಡಿಯೋವನ್ನು ಮುಂಬೈ ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಜೇಬಿನಲ್ಲಿ ಡ್ರಗ್ ಪೌಡರ್ ಇಟ್ಟು ಕೇಸ್ ದಾಖಲಿಸುವುದಾಗಿ ವಿದ್ಯಾರ್ಥಿಗಳಿಗೆ ಪೊಲೀಸ್ ಬೆದರಿಕೆ ಹಾಕಿದ್ದಾರೆ. ಇದು ಮುಂಬೈ ಪೊಲೀಸರು ಮತ್ತು ಎನ್ಸಿಬಿ ಅಧಿಕಾರಿಗಳ ಕಾರ್ಯ ವಿಧಾನವೇ. ಎನ್ಸಿಬಿ ಈ ರೀತಿಯೇ ಇಲ್ಲಿಯವರೆಗೂ ಪ್ರಕರಣ ದಾಖಲಿಸಿಕೊಂಡಿದೆಯೇ ಎಂದು ಕಿಡಿಕಾರಿದೆ.
ಯಾವ ದೇಶದ ಗೃಹಸಚಿವರೇ ಗಡಿಪಾರಾಗಿದ್ದರೋ, ಅಂತಹ ವ್ಯವಸ್ಥೆಯಲ್ಲಿ ಕೆಲವು ಪೊಲೀಸರು ಕಾನೂನಿಗಿಂತ ಭಯ ಹುಟ್ಟಿಸುವುದರಲ್ಲಿ ಪ್ರಬಲರಾಗಿದ್ದಾರೆ. ಈ ರೀತಿಯ ಮನಸ್ಥಿತಿಯ ಪೊಲೀಸ್ ಇಡೀ ಪೊಲೀಸ್ ಪಡೆಗೇ ಕಪ್ಪುಚುಕ್ಕೆ. ಈ ಪೊಲೀಸ್ ತನ್ನ ಅಧಿಕಾರಾವಧಿಯಲ್ಲಿ ಇಂತಹ ಬೆದರಿಕೆಗಳನ್ನು ಹಾಕಿ ಎಷ್ಟು ನಿರಪರಾಧಿ ಯುವಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ್ದಾನೆ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆತನನ್ನು ತಕ್ಷಣವೇ ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಂಬೈ ಕಾಂಗ್ರೆಸ್ ಬೇಡಿಕೆ ಇಟ್ಟಿತ್ತು, (ಏಜೆನ್ಸೀಸ್).