ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್
ಮುಂಬೈ: ವೆನಿಜುವೆಲಾ ಮೇಲೆ ದಾಳಿ ಮಾಡಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೋರನ್ನು ಅಪಹರಿಸಿದ ರೀತಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಮ್ಮ ಪ್ರಧಾನಿ ಮೋದಿಯನ್ನು ಅಪಹರಿಸುತ್ತಾರೆಯೇ? ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚವ್ಹಾಣ್(Ex CM Prithviraj Chavan) ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪ್ರಶ್ನಿಸಿದ್ದಾರೆ.
ರಷ್ಯಾ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತದ ಮೇಲೆ ಮತ್ತೆ ಅಮೆರಿಕಾ ಸುಂಕ ವಿಧಿಸುವ ಬೆದರಿಕೆ ಮತ್ತು ಮುಂದಿನ ನಡೆ ಕುರಿತು ಸುದ್ದಿ ಮಾಧ್ಯಮ ಐಎಎನ್ಎಸ್ ಜೊತೆ ಮಾತನಾಡುತ್ತಿರುವಾಗ ಚವ್ಹಾಣ್ ಈ ಹೇಳಿಕೆ ನೀಡಿದ್ದಾರೆ.
ಭಾರತ ಅಮೆರಿಕಾ ಹೇಳಿದಂತೆ ನಡೆದುಕೊಳ್ಳಲಲ್ಲ ಅಂದ್ರೆ, ಮುಂದೆ ಏನಾಗುತ್ತದೆ. ವೆನಿಜುವೆಲಾದ ರೀತಿ ನಮ್ಮ ಭಾರತದಲ್ಲೂ ಆಗುತ್ತದೆಯೇ? ಟ್ರಂಪ್ ನಮ್ಮ ಪ್ರಧಾನಿಯನ್ನು ಅಪಹರಣ ಮಾಡುತ್ತಾರೆಯೇ?. ಅವರು ನೇರವಾಗಿ ವ್ಯಾಪಾರ ನಿಲ್ಲಿಸಲು ಸಾಧ್ಯವಾಗದ ಕಾರಣ ದೇಶದ ಮೇಲೆ ಸುಂಕ ಹೆಚ್ಚಳ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತೀಯ ರಫ್ತಿನ ಮೇಲೆ ಅಮೆರಿಕ ಈಗಾಗಲೇ ಶೇ.50 ರಷ್ಟು ಸುಂಕ ವಿಧಿಸಿದ್ದಾರೆ. ಇದು ಭಾರತೀಯ ವ್ಯಾಪಾರಿಗಳಿಗೆ ಹಾನಿಯನ್ನುಂಟು ಮಾಡಿದೆ. ಶೇ.50 ರಷ್ಟು ಸುಂಕದಿಂದ ವ್ಯವಹಾರ ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ ಇದು ಭಾರತದಿಂದ ಅಮೆರಿಕಕ್ಕೆ ರಫ್ತಿಗೆ ಅಡ್ಡಿಯಾಗುತ್ತದೆ. ನೇರವಾಗಿ ವ್ಯಾಪಾರಕ್ಕೆ ನಿಷೇಧ ಹೇರಲು ಸಾಧ್ಯವಾಗದ ಕಾರಣ ವ್ಯಾಪಾರವನ್ನು ನಿಲ್ಲಿಸಲು ಸುಂಕಗಳನ್ನು ಒಂದು ಸಾಧನವಾಗಿ ಬಳಸಲಾಗುತ್ತದೆ. ಭಾರತ ಇನ್ನೂ ಭರಿಸಬೇಕಾಗುತ್ತಿದೆ ಎಂದು ತಿಳಿಸಿದ್ದಾರೆ.
ಚವ್ಹಾಣ್ ಹೇಳಿಕೆ ವಿರುದ್ಧ ಬಿಜೆಪಿ ವಾಗ್ದಾಳಿ
ವೆನಿಜುವೆಲಾದಲ್ಲಿ ಮಾಡಿದ ರೀತಿಯಲ್ಲಿ ಭಾರತದಲ್ಲಿ ನಡೆಸಲಾಗುತ್ತದೆಯೇ ಎಂಬ ಚವ್ಹಾಣ್ ಹೇಳಿಕೆಗೆ ಆಡಳಿತರೂಢ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಾಗತಿಕ ವೇದಿಕೆಯಲ್ಲಿ ದೇಶದ ಸಾರ್ವಭೌಮತ್ವ & ಪ್ರತಿಷ್ಠೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಕೆಲಸ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಭಾರತವನ್ನು ವೆನಿಜುವೆಲಾದೊಂದಿಗೆ ಹೋಲಿಸುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ನ ರಾಷ್ಟ್ರವಿರೋಧಿ ನಿಲುವು ಮತ್ತೊಮ್ಮೆ ಸ್ಪಷ್ಟವಾಗಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ಕಾಂಗ್ರೆಸ್ ಬಯಸುತ್ತಿದೆ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).