West Asia Crisis | ಪ್ರಧಾನಿ ನರೇಂದ್ರ ಮೋದಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಚರ್ಚೆ
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (WestAsiaCrisis) ದಿನ ಕಳೆದಂತೆ ಹೆಚ್ಚುತ್ತಿರುವ ಅಸ್ಥಿರತೆ ಮತ್ತು ಸಂಘರ್ಷದ ನಡುವೆ, ಪ್ರಧಾನಿ ನರೇಂದ್ರ ಮೋದಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಹತ್ವದ ಚರ್ಚೆ ನಡೆಸಿದ್ದಾರೆ.
ಈ ಸಂಭಾಷಣೆಯ ವೇಳೆ ಪ್ರಾದೇಶಿಕ ಭದ್ರತೆ, ಹೋರ್ಮುಜ್ ಜಲಸಂಧಿಯ ಸುರಕ್ಷತೆ ಮತ್ತು ಯುಎಇ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ಗಂಭೀರ ವಿಚಾರ ವಿನಿಮಯ ನಡೆಯಿತು ಎನ್ನಲಾಗಿದೆ.
ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ರೊಂದಿಗೆ ಮಾತನಾಡಿದೆ. ಯುಎಇ ಮೇಲೆ ನಡೆದ ದಾಳಿಗಳು ಖಂಡನೀಯ. ಭಯೋತ್ಪಾದನೆ ಮತ್ತು ನಾಗರಿಕರನ್ನು ಗುರಿಯಾಗಿಸುವ ಕೃತ್ಯಗಳನ್ನು ಭಾರತ ಸಹಿಸುವುದಿಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಯುಎಇ ಜನರಿಗೆ ಈದ್ ಶುಭಾಶಯಗಳನ್ನು ತಿಳಿಸಿದ್ದಾರೆ.
ಹೋರ್ಮುಜ್ ಜಲಸಂಧಿ ಜಾಗತಿಕ ವ್ಯಾಪಾರದ ಜೀವನಾಡಿ
ಜಾಗತಿಕ ತೈಲ ಪೂರೈಕೆ ಮತ್ತು ವ್ಯಾಪಾರದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಹೋರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚರಣೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಪ್ರದೇಶದಲ್ಲಿನ ಅಡಚಣೆಯು ಜಾಗತಿಕ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗಾಗಿ ಭಾರತ ಮತ್ತು ಯುಎಇ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿವೆ.
ಭಾರತೀಯರ ಸುರಕ್ಷತೆಯೇ ಮೊದಲ ಆದ್ಯತೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿರುವಂತೆ, ಪಶ್ಚಿಮ ಏಷ್ಯಾದಲ್ಲಿರುವ ಲಕ್ಷಾಂತರ ಭಾರತೀಯರ ಸುರಕ್ಷತೆಯೇ ಸರ್ಕಾರದ ಮೊದಲ ಕಾಳಜಿಯಾಗಿದೆ, ನಿಯಂತ್ರಣ ಕೊಠಡಿ, ಸಂತ್ರಸ್ತ ಭಾರತೀಯರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ವಿಶೇಷ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ.
ಈ ಪ್ರದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಹಗಲಿರುಳು ಕೆಲಸ ಮಾಡುತ್ತಿದ್ದು, ಸ್ಥಳೀಯ ಸಮುದಾಯ ಗುಂಪುಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ. ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಯುಎಇ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಆದಾಗ್ಯೂ, ಈಗ ಪರಿಸ್ಥಿತಿ ಸುಧಾರಿಸುತ್ತಿದ್ದು, ವಿಮಾನ ಸೇವೆಗಳು ಪುನರಾರಂಭಗೊಂಡಿವೆ.
ಮಾರ್ಚ್ 16 ರಂದು ಸುಮಾರು 55 ವಿಮಾನಗಳು ಕಾರ್ಯನಿರ್ವಹಿಸಿದ್ದು, ಇಂದು ಅವುಗಳ ಸಂಖ್ಯೆ 70 ಕ್ಕೆ ಏರುವ ನಿರೀಕ್ಷೆಯಿದೆ. ಸಿಲುಕಿಕೊಂಡಿರುವ ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ವೀಸಾ ಮತ್ತು ಪ್ರಯಾಣಕ್ಕೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳು ಪೂರ್ಣ ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ(ಏಜೆನ್ಸೀಸ್).