P T Selvakumar | ನಟ ವಿಜಯ್​ರ ಮಾಜಿ ಮ್ಯಾನೇಜರ್ ಪಿಟಿ ಸೆಲ್ವಕುಮಾರ್ 
ದೇಶ

ವಿಜಯ್ ವಿರುದ್ಧ ಸ್ಪರ್ಧಿಸಲು ಸಿದ್ಧ, ಆದರೆ...ಸೆಲ್ವಕುಮಾರ್ ಕಾಯುತ್ತಿರೋ ಆ 'ಗ್ರೀನ್ ಸಿಗ್ನಲ್' ಯಾರದ್ದು..? | P T Selvakumar

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದ್ದು, ನಟ ವಿಜಯ್ ಜೊತೆ ದಶಕಗಳ ಕಾಲ ಕೆಲಸ ಮಾಡಿದ್ದ ಮಾಜಿ ಮ್ಯಾನೇಜರ್ ಪಿಟಿ ಸೆಲ್ವಕುಮಾರ್, ಟಿವಿಕೆ ಮುಖ್ಯಸ್ಥರ ವಿರುದ್ಧವೇ ಸ್ಪರ್ಧಿಸಲು ಸಿದ್ಧ ಎಂದು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಶುಕ್ರವಾರ ಚೆನ್ನೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೆಲ್ವಕುಮಾರ್, ನಾನು ಡಿಎಂಕೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸಿಎಂ ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ನಾಯಕತ್ವದಲ್ಲಿ ನನಗೆ ನಂಬಿಕೆ ಇದೆ. ಪಕ್ಷದ ಹೈಕಮಾಂಡ್ ಸೂಚಿಸಿದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ವಿರುದ್ಧವೇ ಸ್ಪರ್ಧಿಸಲು ನಾನು ತಯಾರಿದ್ದೇನೆ ಎಂದು ಘೋಷಿಸಿದರು.
ನನ್ನ ಅನುಭವದ ಪ್ರಕಾರ, ವಿಜಯ್ ಸ್ಪರ್ಧಿಸಿದರೆ ಒಳ್ಳೆಯದು. ಆದರೆ ಅವರು ಗೆಲುವು ಅಥವಾ ಸೋಲನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತಾರೆಂದು ನನಗೆ ಖಚಿತವಿಲ್ಲ. ಅವರು ಸಾಮಾನ್ಯವಾಗಿ ಸೋಲುಗಳನ್ನು ಸ್ವೀಕರಿಸುವ ರೀತಿಯೇ ಬೇರೆ, ರಾಜಕೀಯವು ಸಿನಿಮಾ ತರಹ ಅಲ್ಲ, ಇದು ಬೇರೆಯದ್ದೇ ತರ, ಇಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಹೇಳಿದರು.
ವಿಜಯ್​ಗೆ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸವಿಲ್ಲ, ಅದರಲ್ಲೂ ಬೇಸಿಗೆ ಸಮೀಪಿಸುತ್ತಿರುವುದರಿಂದ, ಅವರು ಎಷ್ಟು ಸಮಯದವರೆಗೆ ಜನರೊಂದಿಗೆ ಇರುತ್ತಾರೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ, ವಿಜಯ್​ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ, ಕ್ಯಾರವಾನ್‌ಗಳಲ್ಲಿ ಇರುತ್ತಾರೆ ಮತ್ತು ಆರಾಮದಾಯಕ ಜೀವನ ಶೈಲಿಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಸೆಲ್ವಕುಮಾರ್​ ಹೇಳಿದರು.
ವಿಜಯ್ ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಸಮಯ ಕಳೆಯುವುದು ಕಡಿಮೆ, ಜನರಿಗಾಗಿ ನಿರಂತರ ಕೆಲಸಕ್ಕಾಗಿ ಬೇಕಾದ ವೇಗ ಮತ್ತು ಉತ್ಸಾಹ ಅವರಲ್ಲಿ ಇರುವುದಿಲ್ಲ, ಆದರೆ ತಮ್ಮನ್ನು ಪ್ರತಿನಿಧಿಸಲು ಯಾರು ಸಮರ್ಥರು ಎನ್ನುವುದನ್ನು ಅಂತಿಮವಾಗಿ ಮತದಾರರು ನಿರ್ಧರಿಸುತ್ತಾರೆ ಎಂದರು.
ಕರೂರ್ ಸೇರಿದಂತೆ ಇತರ ಯಾವುದೇ ಸಭೆ- ಸಮಾರಂಭವಾಗಲಿ 30 ನಿಮಿಷಗಳಿಗಿಂತ ಹೆಚ್ಚು ಸಮಯ ಅವರು ಕಳೆಯುವುದಿಲ್ಲ ಎಂದಿರುವ ವಿಜಯ್​ರ ಮಾಜಿ ಮ್ಯಾನೇಜರ್​, ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಜನರ ಬಗ್ಗೆ ಆಳವಾದ ಕಾಳಜಿ ಇರುವವರು ಮಾತ್ರ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಬೇಕು ಎಂದು ಹೇಳಿದರು. ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧಿಸಲು ಸೆಲ್ವಕುಮಾರ್ ಇಂದು ಅರ್ಜಿ ಸಲ್ಲಿಸಿದ್ದಾರೆ.

ಡಿಎಂಕೆ ತಂತ್ರಗಾರಿಕೆ

ದಳಪತಿ ವಿಜಯ್​ರ ಟಿವಿಕೆ ಪಕ್ಷ ಯುವಕರನ್ನು ಆಕರ್ಷಿಸುತ್ತಿದ್ದು, ಇದನ್ನು ತಡೆಯಲು ಡಿಎಂಕೆ ವಿಜಯ್ ಆಪ್ತರನ್ನೇ ಬಳಸಿಕೊಂಡು ತಿರುಗೇಟು ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

ಯಾರು ಈ ಸೆಲ್ವಕುಮಾರ್​

ವಿಜಯ್​ರ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ 25 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಸೆಲ್ವಕುಮಾರ್, ಡಿಸೆಂಬರ್ 2025 ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಮ್ಮುಖದಲ್ಲಿ ಡಿಎಂಕೆ ಸೇರ್ಪಡೆಗೊಂಡರು. ಅಂದಿನಿಂದ, ಅವರು ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ(ಏಜೆನ್ಸೀಸ್​​).