ಶಿವಶೇನಾ(ಯುಬಿಟಿ) ನಾಯಕ ಸಂಜಯ್ ರಾವತ್
ಮುಂಬೈ: ಪ್ರಸ್ತಾವಿತ ಡಿಲಿಮಿಟೇಶನ್ ಮಸೂದೆಯನ್ನು ಎಲ್ಲಾ ವಿರೋಧ ಪಕ್ಷಗಳು ವಿರೋಧಿಸುತ್ತಿದ್ದು, ಕೇಂದ್ರ ಸರ್ಕಾರ ಒಂದು ವೇಳೆ ವಿಪಕ್ಷಗಳು ಸೂಚಿಸಿದ ತಿದ್ದುಪಡಿಗಳನ್ನು ಮಸೂದೆಯಲ್ಲಿ ಸೇರಿಸಿದ್ರೆ ಬೆಂಬಲದ ಬಗ್ಗೆ ಮರು ಪರಿಶೀಲನೆ ಮಾಡಬಹುದು ಎಂದು ಗುರುವಾರ(ಜು. 16) ಶಿವಶೇನಾ(ಯುಬಿಟಿ) ನಾಯಕ ಸಂಜಯ್ ರಾವತ್(Sanjay Raut) ಹೇಳಿದ್ದಾರೆ.
ಪಕ್ಷದ 'ರಾಮ ರಕ್ಷಾ ಆಂದೋಲನ'ಕ್ಕೂ ಮುನ್ನ ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 20ರಿಂದ ಪ್ರಾರಂಭವಾಗುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲಾಗುವ ಮಸೂದೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳಲ್ಲಿ ಶೇ. 50ರಷ್ಟು ಹೆಚ್ಚಳ ಸ್ವೀಕಾರಾರ್ಹ ಎಂಬ ಎನ್‌ಸಿಪಿ(ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾವತ್, ಶಾಸನವನ್ನು ಪರಿಚಯಿಸಿದ ನಂತರ ಇಂಡಿಯಾ ಒಕ್ಕೂಟ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಮಸೂದೆ ಅಧಿವೇಶನದಲ್ಲಿ ಬರಲಿ, ನಾವೆಲ್ಲರೂ ಕುಳಿತು ನಿರ್ಧರಿಸುತ್ತೇವೆ ಮತ್ತು ಏನು ಮಾಡಬೇಕೆಂಬುದರ ಬಗ್ಗೆ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇನ್ನೂ ಎನ್‌ಸಿಪಿ-ಎಸ್‌ಪಿ ವಿಭಜನೆಯಾಗುತ್ತದೆ ಮತ್ತು ಶಾಸಕರು ಮತ್ತು ಸಂಸದರನ್ನು ತಮ್ಮ ಬಹುಮತವನ್ನು ತೋರಿಸಲು ಬೇಟೆಯಾಡಲಾಗುತ್ತದೆ ಮತ್ತು ಅಂತಹ ವಿಷಯಗಳಿಗೆ ಯಾವುದೇ ಆಧಾರವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಮತ್ತೊಮ್ಮೆ ಡಿಲಿಮಿಟೇಶನ್ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ಮಸೂದೆಯನ್ನು ಅದರ ಪ್ರಸ್ತುತ ರೂಪದಲ್ಲಿ ವಿರೋಧಿಸುತ್ತೇವೆ. ವಿಪಕ್ಷಗಳು ಸೂಚಿಸಿದಂತೆ ಸರ್ಕಾರ ಅದಕ್ಕೆ ಅಗತ್ಯವಾದ ತಿದ್ದುಪಡಿಗಳನ್ನು ಮಾಡಿದರೆ ಬೆಂಬಲದ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದಾರೆ.
ಲೋಕಸಭೆಯ ಬಲವನ್ನು 850 ಸ್ಥಾನಗಳಿಗೆ ಹೆಚ್ಚಿಸಲು ಮತ್ತು ಹೊಸ ಸೀಮಾ ನಿರ್ಣಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕೇಂದ್ರವು ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯನ್ನು ಈ ಅಧಿವೇಶನದಲ್ಲೂ ಮಂಡಿಸಲು ಮುಂದಾಗಿದೆ. ಕಳೆದ ಅಧಿವೇಶನದಲ್ಲಿ ವಿಪಕ್ಷಗಳಿಂದ ಮಸೂದೆಗೆ ಸೋಲಾಗಿತ್ತು (ಏಜೆನ್ಸೀಸ್).