West Bengal Elections | ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ 
ದೇಶ

ಬಂಗಾಳದಲ್ಲಿ ಜಿದ್ದಾಜಿದ್ದಿನ ಹೋರಾಟವೋ ಅಥವಾ ಏಕಪಕ್ಷೀಯ ಗೆಲುವೋ? ಕಳೆದ ಎರಡು ಚುನಾವಣೆಗಳ ಅಂಕಿಅಂಶ ಹೇಳುವುದೇನು..? | West Bengal Elections

ಕೊಲ್ಕತ್ತಾ: ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎರಡು ಹಂತದ ಮತದಾನದಲ್ಲಿ ಏಳು ಕೋಟಿಗೂ ಹೆಚ್ಚು ಮತದಾರರು ರಾಜ್ಯದ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಕಳೆದ ದಶಕದ ಚುನಾವಣಾ ದತ್ತಾಂಶಗಳನ್ನು ವಿಶ್ಲೇಷಿಸಿದಾಗ, ಬಂಗಾಳದ ರಾಜಕಾರಣವು ಕೇವಲ ಪೈಪೋಟಿಯತ್ತ ಸಾಗದೆ, ನಿರ್ಣಾಯಕ ಮತ್ತು ಸ್ಪಷ್ಟ ಜನಾದೇಶದತ್ತ ಹೊರಳುತ್ತಿರುವುದು ಕಂಡುಬಂದಿದೆ.
2016 ಮತ್ತು 2021ರ ಚುನಾವಣಾ ಫಲಿತಾಂಶಗಳನ್ನು ಹೋಲಿಕೆ ಮಾಡಿದಾಗ, ಗೆಲುವಿನ ಅಂತರದಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದು, 2016ರಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವಿನ ಅಂತರವು 5,000 ರಿಂದ 25,000 ಮತಗಳ ನಡುವೆ ಇತ್ತು. ಅಂದರೆ ಸುಮಾರು 219 ಸ್ಥಾನಗಳಲ್ಲಿ ಉತ್ತಮ ಪೈಪೋಟಿ ಕಂಡುಬಂದಿತ್ತು. ಆದರೆ 2021ರ ವೇಳೆಗೆ ಈ ಚಿತ್ರಣ ಬದಲಾಗಿದ್ದು, 25,000ಕ್ಕೂ ಅಧಿಕ ಮತಗಳ ಬೃಹತ್ ಅಂತರದಿಂದ ಗೆದ್ದ ಅಭ್ಯರ್ಥಿಗಳ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಇದು ಮತದಾರರು ಒಂದು ನಿರ್ದಿಷ್ಟ ಪಕ್ಷದ ಪರವಾಗಿ ಬಲವಾದ ಮತ್ತು ಸ್ಪಷ್ಟವಾದ ನಿಲುವು ತಳೆಯುತ್ತಿರುವುದನ್ನು ಸೂಚಿಸುತ್ತದೆ.
ಈ ಬದಲಾವಣೆಯ ಲಾಭವು ಪ್ರಮುಖವಾಗಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಾಲಾಗಿದೆ ಎನ್ನಲಾಗಿದ್ದು, 2021ರ ಚುನಾವಣೆಯಲ್ಲಿ ಟಿಎಂಸಿ ಸುಮಾರು 118 ಸ್ಥಾನಗಳನ್ನು 25,000ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದುಕೊಂಡರೆ, ಬಿಜೆಪಿ ಈ ವಿಭಾಗದಲ್ಲಿ ಕೇವಲ 13 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಬಿಜೆಪಿ 10,000ಕ್ಕಿಂತ ಕಡಿಮೆ ಮತಗಳ ಅಂತರವಿರುವ ಕ್ಷೇತ್ರಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರಾಜ್ಯದಲ್ಲಿ ದೊಡ್ಡ ಅಂತರದ ಗೆಲುವುಗಳ ಟ್ರೆಂಡ್ ಇದ್ದರೂ, ಕೆಲವು ಕ್ಷೇತ್ರಗಳಲ್ಲಿ ಇಂದಿಗೂ ತೀವ್ರ ಪೈಪೋಟಿ ಮುಂದುವರಿದಿದೆ. 2021ರಲ್ಲಿ ಬಲರಾಂಪುರ್, ದಂತನ್ ಮತ್ತು ತಮ್ಲುಕ್ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಗೆಲುವಿನ ಅಂತರವು 1,000 ಮತಗಳಿಗಿಂತಲೂ ಕಡಿಮೆಯಿತ್ತು. ಅದರಲ್ಲೂ ತಮ್ಲುಕ್ ಕ್ಷೇತ್ರವು 1962ರಿಂದಲೂ ಅತಿ ಕಡಿಮೆ ಅಂತರದ ಗೆಲುವುಗಳಿಗೆ ಸಾಕ್ಷಿಯಾಗುತ್ತಾ ಬಂದಿರುವ ಇತಿಹಾಸ ಹೊಂದಿದೆ. ಬಲರಾಂಪುರದಲ್ಲಿ ಕೇವಲ 423 ಮತಗಳ ಅಂತರದ ರೋಚಕ ಹೋರಾಟ ನಡೆದಿತ್ತು.
2026ರ ಚುನಾವಣೆ ಸಮೀಪಿಸುತ್ತಿದ್ದು, ಬಂಗಾಳದ ಮತದಾರರು ಮತ್ತೊಮ್ಮೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ಎರಡು ಚುನಾವಣೆಗಳ ನಿರ್ಣಾಯಕ ಜನಾದೇಶದ ಪ್ರವೃತ್ತಿ ಈ ಬಾರಿಯೂ ಮುಂದುವರಿಯುತ್ತದೆಯೇ ಅಥವಾ ಮತ್ತೆ ನಿಕಟ ಸ್ಪರ್ಧೆಗಳು ಏರ್ಪಡುತ್ತವೆಯೇ ಎಂಬುದು ಸದ್ಯದ ಕುತೂಹಲ(ಏಜೆನ್ಸೀಸ್​).