ಉದ್ಯಮಿ ಅನಿಲ್ ಅಂಬಾನಿ, ಸುಪ್ರೀಂ ಕೋರ್ಟ್
- ಅನಿಲ್ ಅಂಬಾನಿ ಬ್ಯಾಂಕ್ವೊಂದಕ್ಕೆ ಭಾರಿ ವಂಚನೆ ಮಾಡಿದ್ದಾರೆ ಎಂಬ ಆರೋಪ
- ಅನಿಲ್ ಅಂಬಾನಿ ದೇಶ ಬಿಟ್ಟು ಓಡಿದಿರೇ ಏನು ಮಾಡುವುದು ಎಂಬ ಪ್ರಶ್ನೆ ಎತ್ತಿದ ಸರ್ಕಾರಿ ವಕೀಲ
- ಅನಿಲ್ ಅಂಬಾನಿ ದೇಸ ಬೀಡುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿರುವ ಅಂಬಾನಿ ಪರ ವಕೀಲ
ನವದೆಹಲಿ: ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ಉದ್ಯಮಿ ಅನಿಲ್ ಅಂಬಾನಿ (Anil Ambani) ವಿರುದ್ಧ ಕೇಳಿ ಬಂದಿರುವ ಭಾರೀ ಪ್ರಮಾಣದ ಬ್ಯಾಂಕ್ ವಂಚನೆ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.
ಇಡಿ, ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಿ, ಪ್ರಸ್ತುತ ನಡೆಯುತ್ತಿರುವ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವಂತೆ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುವಂತೆ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅವರ ನ್ಯಾಯಪೀಠ ತಿಳಿಸಿದೆ.
ತನಿಖೆ ಪೂರ್ಣಗೊಳ್ಳುವ ಮೊದಲು ಅನಿಲ್ ಅಂಬಾನಿ ದೇಶದಿಂದ ಪಲಾಯನ ಮಾಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ, ಅನಿಲ್ ಅಂಬಾನಿ ದೇಶ ತೊರೆಯುವುದಿಲ್ಲ ಎಂಬುದಾಗಿ ಅವರ ವಕೀಲರು ನೀಡಿದ ಭರವಸೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ತನಿಖೆಗೆ ಯಾವುದೇ ಅಡ್ಡಿ ಉಂಟಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಾಲಯದ ಅನುಮತಿಯಿಲ್ಲದೆ ಅವರು ದೇಶ ತೊರೆಯುವುದಿಲ್ಲ, ಎಂದು ಅನಿಲ್ ಅಂಬಾನಿಯ ಪರ ವಕೀಲ ಮುಕುಲ್ ರೋಹಟ್ಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.
ನಿಮ್ಮ ಹೇಳಿಕೆ ಮೇಲಿ ನಂಬಿಕೆಯಿಲ್ಲ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರೋಹಟ್ಗಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಈ ಹಿಂದೆ ತಮ್ಮ ಕಕ್ಷಿದಾರರೊಬ್ಬರ ಪರವಾಗಿ ಇಂಥದ್ದೇ ಭರವಸೆ ನೀಡಿದ್ದರು. ಆದರೆ ಅವರ ಕಕ್ಷಿದಾರ ದೇಶ ತೊರದಿದ್ದರು ಎಂದು ಆರೋಪಿಸಿದರು. ಅದಕ್ಕೆ ಉತ್ತರಿಸಿದ ರೋಹಟ್ಗಿ, ಆದರೆ ಅವರು ನಂತರ ಹಿಂದಿರುಗಿ ಸರ್ಕಾರಕ್ಕೆ 5000 ಕೋಟಿ ಪಾವತಿಸಿದ್ದಾರೆ, ಎಂದು ಹೇಳಿದರು.
ಆಗ ಅರ್ಜಿದಾರ ಇಎಎಸ್ ಶರ್ಮಾ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಒಮ್ಮೆ ಅವರು ದೇಶದ ಹೊರಗೆ ಹೋದರೆ, ಇಂತಹ ಹೇಳಿಕೆಯ ಪ್ರಯೋಜನವೇನು? ಎಂದು ಪ್ರಶ್ನಿಸಿದರು. ಹಾಗಾದರೆ ಯಾರ ಮೇಲೂ ನಂಬಿಕೆ ಇಡುವಂತೆಯೇ ಇಲ್ಲ. ಯಾವುದಕ್ಕೂ ಹೇಳಿಕೆ ದಾಖಲಿಸುವ ಅಗತ್ಯವೇ ಇರುವುದಿಲ್ಲ, ಎಂದು ರೋಹಟ್ಗಿ ತಿರುಗೇಟು ನೀಡಿದರು.
ವಿಚಾರಣೆಯ ಕೊನೆಗೆ ನ್ಯಾಯಾಲಯ ತನಿಖೆಗೆ ಅಡ್ಡಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಾಲಿಸಿಟರ್ ಜನರಲ್ ಭರವಸೆ ನೀಡಿದ್ದಾರೆ. ಹಾಗೆಯೇ, ನ್ಯಾಯಾಲಯದ ಅನುಮತಿಯಿಲ್ಲದೆ ತಮ್ಮ ಕಕ್ಷಿದಾರರು ದೇಶ ತೊರೆಯುವುದಿಲ್ಲ ಎಂದು ರೋಹಟ್ಗಿ ಭರವಸೆ ನೀಡಿದ್ದಾರೆ, ಎಂಬ ವಿಚಾರವನ್ನು ದಾಖಲಿಸಿಕೊಂಡಿದ್ದಾರೆ,(ಏಜನ್ಸೀಸ್).