ಅಸ್ಸಾಂನ ಗೋಲಾಘಾಟ್‌ನಲ್ಲಿ ಕಾಡಾನೆಯ ಕುತ್ತಿಗೆಗೆ ಸಿಕ್ಕಿಕೊಂಡಿದ್ದ ಟೈರ್ ಅನ್ನು ರಕ್ಷಿಸುತ್ತಿರುವ ದೃಶ್ಯ 
ದೇಶ

ಕುತ್ತಿಗೆಗೆ ಸಿಕ್ಕಿಕೊಂಡಿದ್ದ ಟೈರ್‌... ಉಸಿರಿಗಾಗಿ ಹೋರಾಡಿದ ಕಾಡಾನೆ; ಸಾಹಸದಿಂದ ರಕ್ಷಿಸಿದ ಸಿಬ್ಬಂದಿ! Wild Elephant Rescue

ಗೋಲಾಘಾಟ್: ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಕುತ್ತಿಗೆಗೆ ಟ್ರಾಕ್ಟರ್ ಟೈರ್ ಸಿಕ್ಕಿಹಾಕಿಕೊಂಡು ನರಳುತ್ತಿದ್ದ ಕಾಡಾನೆ (Wild Elephant Rescue) ಯೊಂದನ್ನು ಅರಣ್ಯ ಸಿಬ್ಬಂದಿ ಹಾಗೂ ತಜ್ಞರು ಅತ್ಯಂತ ಸಾಹಸದಿಂದ ರಕ್ಷಿಸಿದ್ದಾರೆ. ಮಾನವನ ನಿರ್ಲಕ್ಷ್ಯ ಮತ್ತು ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯಗಳು ಮೂಕ ಪ್ರಾಣಿಗಳಿಗೆ ಎಷ್ಟು ದೊಡ್ಡ ಕಂಟಕವಾಗಿ ಪರಿಣಮಿಸುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಆನೆಯ ಕುತ್ತಿಗೆಗೆ ಟೈರ್ ಬಿಗಿಯಾಗಿ ಸಿಕ್ಕಿಹಾಕಿಕೊಂಡಿದ್ದರಿಂದ ಅದಕ್ಕೆ ಉಸಿರಾಡಲು ಪರದಾಡುತ್ತಿತ್ತು. ತೀವ್ರ ಸಂಕಷ್ಟದಲ್ಲಿದ್ದ ಆನೆಯನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಪ್ರಾಣಾಪಾಯದ ಪರಿಸ್ಥಿತಿಯನ್ನು ನಿಭಾಯಿಸಲು ಕಾಜಿರಂಗದ ಪ್ರಸಿದ್ಧ ಸೆಂಟರ್ ಫಾರ್ ವೈಲ್ಡ್‌ಲೈಫ್ ರಿಹ್ಯಾಬಿಲಿಟೇಶನ್ ಅಂಡ್ ಕನ್ಸರ್ವೇಶನ್ (CWRC) ತಂಡವು ಗೋಲಾಘಾಟ್ ಅರಣ್ಯ ವಿಭಾಗದ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಕೈಜೋಡಿಸಿ ಕಾರ್ಯಾಚರಣೆಗೆ ಇಳಿಯಿತು.
ಎಲ್ಲರ ಒಗ್ಗಟ್ಟಿನ ಶ್ರಮದಿಂದ ಆನೆಯ ಕುತ್ತಿಗೆಯಲ್ಲಿದ್ದ ಟೈರ್ ಅನ್ನು ಯಶಸ್ವಿಯಾಗಿ ಕತ್ತರಿಸಿ ಹೊರತೆಗೆಯಲಾಗಿದೆ. ಇದರಿಂದಾಗಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಆನೆಗೆ ಜೀವ ಮರಳಿದಂತಾಗಿದೆ. ಟೈರ್ ಆನೆಯ ಕುತ್ತಿಗೆಗೆ ಹೇಗೆ ಬಂದು ಬಿತ್ತು ಎಂಬುದು ನಿಖರವಾಗಿ ತಿಳಿದುಬಂದಿಲ್ಲವಾದರೂ, ಕಾಡಿನಂಚಿನ ಪ್ರದೇಶಗಳಲ್ಲಿ ಮಾನವರು ಎಸೆಯುವ ತ್ಯಾಜ್ಯಗಳು ಮೂಕ ಜೀವಿಗಳ ಪಾಲಿಗೆ ಮೃತ್ಯುವಿನ ಕೂಪವಾಗುತ್ತಿವೆ ಎನ್ನುವುದಕ್ಕೆ ಈ ಘಟನೆ ಸ್ಪಷ್ಟ ಎಚ್ಚರಿಕೆಯಾಗಿದೆ.
ಕಾಡುಗಳ ಅಂಚಿನಲ್ಲಿ ಮತ್ತು ವನ್ಯಜೀವಿ ಆವಾಸಸ್ಥಾನಗಳಲ್ಲಿ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಡೆಯಬೇಕಿದೆ. ಅರಣ್ಯ ಅಧಿಕಾರಿಗಳು, ವನ್ಯಜೀವಿ ರಕ್ಷಕರು ಮತ್ತು ಸ್ಥಳೀಯರ ನಡುವೆ ಉತ್ತಮ ಸಮನ್ವಯವಿದ್ದರೆ ಮಾತ್ರ ಇಂತಹ ಪ್ರಾಣಿಗಳನ್ನು ರಕ್ಷಿಸಲು ಸಾಧ್ಯ ಎಂಬುದನ್ನು ಈ ಕಾರ್ಯಾಚರಣೆ ಮತ್ತೊಮ್ಮೆ ಸಾಬೀತುಪಡಿಸಿದೆ. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಹೆಚ್ಚಿನ ಜವಾಬ್ದಾರಿ ವಹಿಸಬೇಕಾದ ತುರ್ತು ಅಗತ್ಯವನ್ನು ಈ ಘಟನೆ ನೆನಪಿಸಿದೆ, (ಏಜನ್ಸೀಸ್​).