ವಿಜಯವಾಡ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದ್ದು, ಪತ್ನಿಯ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟವನ್ನು ತಾಳದೇ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷ ನೀಡಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ ಎಂದು ಸೋಮವಾರ(ಜೂ. 22) ವರದಿಯಾಗಿದೆ.
ಚಿತ್ತೂರು ಜಿಲ್ಲೆಯ ದಿಗುಮಸಪಲ್ಲೆ ಪಂಚಾಯತ್‌ನ ಬಂಗಾರರೆಡ್ಡಿಪಲ್ಲಿ ಘಟನೆ ನಡೆದಿದೆ. ಮೃತರನ್ನು ದಾಮೋದರಮ್(30), ಪತ್ನಿ ನಿರ್ಮಲಾ(25) ಹಾಗೂ ಮಕ್ಕಳು ರಾಜೇಶ್ ಮತ್ತು ಶ್ರೀವಿದ್ಯಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಪತ್ನಿ ನಿರ್ಮಲಾಗೆ ಮೆದುಳು ಪಾರ್ಶ್ವವಾಯು ಬಂದಿದೆ ಎನ್ನಲಾಗಿದೆ.
ಚಿಕಿತ್ಸೆ ಬಳಿಕವೂ ಪತ್ನಿಯ ಆರೋಗ್ಯ ದಿನೇ-ದಿನೇ ಹದಗೆಡುತ್ತಿದ್ದಂತೆ ಆರ್ಥಿಕ ಪರಿಸ್ಥಿತಿಯೂ ಕಷ್ಟಕರವಾದ ಹಿನ್ನೆಲೆ ಪತಿ ದಾಮೋದರಮ್ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ವಿಷ ನೀಡಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಘಟನೆ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಅದರಲ್ಲಿ ಮೃತ ದಾಮೋದರ್ ತನ್ನ ಬ್ಯಾಂಕ್ ಎಟಿಎಂ ಮತ್ತು ಅದರ ಪಿನ್ ಸಂಖ್ಯೆ ಮತ್ತು ಫೋನ್‌ಪೇ ಸಂಖ್ಯೆಯನ್ನು ಬರೆದಿದ್ದು, ತಮ್ಮ ಅಂತ್ಯಕ್ರಿಯೆಗೆ ತಮ್ಮ ಖಾತೆಯಿಂದ ಹಣವನ್ನು ಬಳಸುವಂತೆ ವಿನಂತಿಸಿದ್ದಾನೆ ಎಂದು ತಿಳಿದು ಬಂದಿದೆ (ಏಜೆನ್ಸೀಸ್).