ಹೆಂಡತಿಯ ವಾಟ್ಸ್​ಆ್ಯಪ್​ ಚೆಕ್​ ಮಾಡಿ ಉಳಿಸಿಕೊಂಡ ಪ್ರಾಣ  
ದೇಶ

ಲವ್ವರ್​, ಪತ್ನಿಯ ಕೊಲೆ ಸಂಚಿಗೆ ಬಲಿ ಆಗಲಿಲ್ಲ ಈತ! ಹೆಂಡತಿಯ ವಾಟ್ಸ್​ಆ್ಯಪ್​ ಚೆಕ್​ ಮಾಡಿ ಉಳಿಸಿಕೊಂಡ ಪ್ರಾಣ

ಪ್ರಮುಖ ಮುಖ್ಯಾಂಶಗಳು

  • ಪ್ರಿಯಕರನ ಜತೆಗೂಡಿ ಗಂಡನನ್ನೇ ಕೊಲ್ಲಲು ಸ್ಕೆಚ್​ ಹಾಕಿದ್ದಳು ಹೆಂಡತಿ
  • ಪತ್ನಿಯ ಮುಖಭಾವಗಳನ್ನು ಶಂಕಿಸಿ ಆಕೆಯ ವ್ಯಾಟ್ಸ್​ಆ್ಯಪ್​ ನೋಡಿದ ಪತಿರಾಯ
  • ವ್ಯಾಟ್ಸ್​ಆ್ಯಪ್​ ಚಾಟ್​ನಲ್ಲಿ ಬಯಲಾಯ್ತು ತನ್ನ ಸಾವಿಗೆ ಹೂಡಿರುವ ಸಂಚು
ತೆಲಂಗಾಣ: ಮಹಬೂಬಾಬಾದ್: ದೇಶದಲ್ಲಿ ಕೊಲೆ ಪ್ರಕರಣಗಳು ಅದ್ಯಾಕೋ ವಿಚ್ಛೇದನ ಕೇಸ್​ಗಳಂತೆ ವಿಪರೀತ ಹೆಚ್ಚುತ್ತಿದೆ. ಅದರಲ್ಲೂ, ಮದುವೆಯಾಗುವ ಮುನ್ನವೇ ಜೋಡಿಗಳು ಪರಸ್ಪರ ಒಳ ಸಂಚು ರೂಪಿಸಿ (Murder Plot), ಭೀಕರ, ಬರ್ಬರವಾಗಿ ಕೊಲೆಗೈದರೆ, ಇನ್ನೂ ಕೆಲವರಂತು ಸದ್ದಿಲ್ಲದಂತೆ ಕೆಲಸ ಮುಗಿಸಿ ತಮಗೇನೂ ಗೊತ್ತಿಲ್ಲದಂತೆ ಖಾಕಿ ಮುಂದೆ ನಾಟಕವಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದಕ್ಕೆ, ಇತ್ತೀಚಿನ ಹನಿಮೂನ್​ ಮರ್ಡರ್​, ಕೇತನ್​ ಅಗರ್ವಾಲ್​ ಕೇಸ್​ಗಳೇ ಜ್ವಲಂತ ಸಾಕ್ಷಿ. ಇಷ್ಟೆಲ್ಲ ಕೇಸ್​ಗಳಲ್ಲಿ ಮೃತಪಟ್ಟಿರುವುದು ಯುವಕರೇ ಜಾಸ್ತಿ. ಮದುವೆ ಆಗಿದ್ದರೆ ಗಂಡಂದಿರೇ ಹೆಚ್ಚು.
ರಾಷ್ಟ್ರದಲ್ಲಿ ಕೊಲೆ ಮಾಡಿದವರು ಕಾನೂನು ಕಣ್ಣಿನಿಂದ ತಪ್ಪಿಸಿಕೊಂಡಿದ್ದೇ ಇಲ್ಲ. ಹೀಗಿರುವಾಗ, ಇದೆಲ್ಲ ಗೊತ್ತಿದ್ದರೂ ಸಹ ಕೊಲೆಗೆ ಮುಂದಾಗುವ ಕ್ರಿಮಿನಲ್​ಗಳ ಭಂಡ ಧೈರ್ಯ ಎಂತದ್ದು ಎನ್ನುವುದೇ ಅರ್ಥವಾಗದು. ತನ್ನ ಗಂಡನನ್ನು ಕೊಲೆಗೈದು, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸುವಂತೆ ಪ್ರಿಯರಕನಿಗೆ ಹೆಂಡತಿ ತಿಳಿಸಿದ ಮಾಸ್ಟರ್​ಪ್ಲ್ಯಾನ್​ ಅನ್ನು ಬಯಲಿಗೆಳೆಯುವ ಮೂಲಕ ಪತಿಯೊಬ್ಬ ಸಾವಿನಿಂದ ಬಚಾವ್ ಆದ ಘಟನೆ ತೆಲಂಗಾಣದ ಮಹಬೂಬಾಬಾದ್​ನಲ್ಲಿ ವರದಿಯಾಗಿದೆ.
ಗದೆ ರಾಜೇಶ್ವರ ರಾವ್ ಎಂಬ ವ್ಯಕ್ತಿ, ಪತ್ನಿ ಭವಾನಿ ಮತ್ತು ಆಕೆಯ ಪ್ರಿಯಕರ ಸೈದುಲು ಸೇರಿ ತನ್ನ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, ಪತ್ನಿಯು ತನ್ನನ್ನು ಮುಗಿಸಲು ಲವ್ವರ್​ಗೆ ವಾಟ್ಸ್​ಆ್ಯಪ್​ ಮತ್ತು ಇನ್‌ಸ್ಟಾಗ್ರಾಮ್​ ಮೆಸೇಜ್​ಗಳ ಮುಖಾಂತರ ಒತ್ತಾಯಿಸಿದ್ದಾಳೆ. ಮೊದಲು ಉಸಿರು ನಿಲ್ಲಿಸಿ, ಆಮೇಲೆ ಅದನ್ನು ಆ್ಯಕ್ಸಿಡೆಂಟ್​ ಎಂದು ಬಿಂಬಿಸುವಂತೆ ಹೇಳಿರುವ ಸಂದೇಶಗಳನ್ನು ಉಲ್ಲೇಖಿಸಿ, ಇಂಥವರಿಗೆ ತಕ್ಕ ಶಿಕ್ಷೆ ಕೊಡಿಸಿ ಎಂದು ಪೊಲೀಸ್​ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಾಜೇಶ್ವರ ರಾವ್ ಮತ್ತು ಭವಾನಿ ಜೋಡಿ, 2016ರಲ್ಲಿ ವಿವಾಹವಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೀಗಿರುವಾಗ, ಖಮ್ಮಮ್ ಮೂಲದ ಕೊರಿಯರ್ ಏಜೆಂಟ್ ಸೈದುಲು ಎಂಬ ಯುವಕನೊಂದಿಗೆ ಭವಾನಿ ಅನೈತಿಕ ಸಂಬಂಧ ಹೊಂದಿದ್ದಳು. ಪತ್ನಿಯ ನಡವಳಿಕೆಯನ್ನು ಶಂಕಿಸಿದ ರಾವ್​, ಜು.27ರಂದು ಆಕೆಯ ಫೋನ್​ನಲ್ಲಿ ವ್ಯಾಟ್ಸ್​ಆ್ಯಪ್​ ಚೆಕ್​ ಮಾಡಿದಾಗ ತನಗೆ ಗುಂಡಿ ತೋಡಿರುವ ಸಂಪೂರ್ಣ ಸಂಚು ಬಯಲಾಗಿದೆ.
ಭವಾನಿ, ಪತಿಯನ್ನು ಮನೆಯೊಳಗೆ ಕೊಂದರೆ ಸ್ಥಳೀಯರಿಗೆ ಅಥವಾ ಪೊಲೀಸರಿಗೆ ಅನುಮಾನ ಬರಬಹುದು. ಹೀಗಾಗಿ, ನೀನು ಹೊರಗೆ ಹತ್ಯೆಗೈದು, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸುವಂತೆ ಪ್ರಿಯರಕನಿಗೆ ಮಾಡಿದ ಚಾಟ್​ಗಳಲ್ಲಿ ತಿಳಿಸಿದ್ದಾಳೆ. ನೀನು ಅವನನ್ನು ಸಾಯಿಸದಿದ್ದರೆ, ನಾನೇ ಕೊಲ್ಲುವುದಾಗಿ ಭವಾನಿ ಮೆಸೇಜ್​ ಮಾಡಿದ್ದಾಳೆ. ಇದರ ಸ್ಕ್ರೀನ್​ಶಾಟ್​ಗಳನ್ನು ದೂರಿಗೆ ಪೂರಕವಾಗುವಂತೆ ಬಳಸಿಕೊಂಡಿರುವ ಪೊಲೀಸರು, ತಲೆಮರಿಸಿಕೊಂಡಿರುವ ಮಹಿಳೆ ಮತ್ತು ಆಕೆಯ ಪ್ರಿಯಕರನ ಶೋಧ ಕಾರ್ಯಚರಣೆಯನ್ನು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).