ಸೂಪರ್ ಸ್ಟಾರ್ ದಳಪತಿ ವಿಜಯ್
ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ (Vijay-Thrisha) ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿದೆ. ಈ ನಡುವೆ ಮೊದಲ ಬಾರಿಗೆ ಈ ಕುರಿತು ಮೌನ ಮುರಿದಿರುವ ವಿಜಯ್, ಈ ಬಗ್ಗೆ ಚಿಂತೆ ಮಾಡಬೇಡಿ ಎಂದು ಅಭಿಮಾನಿಗಳು ಮತ್ತು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.
ಚೆನ್ನೈನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ(ಮಾ. 07) ಮಾತನಾಡಿರುವ ಅವರು, ಇತ್ತೀಚೆಗೆ ಹಲವಾರು ಸಮಸ್ಯೆಗಳು ಹೊರಹೊಮ್ಮಿವೆ, ಇದು ಅವರ ಬೆಂಬಲಿಗರಲ್ಲಿ ಕಳವಳವನ್ನುಂಟುಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವಾಗ ಯಾರನ್ನು ನೋಯಿಸದಂತೆ ಮತ್ತು ಆತ್ಮವಿಶ್ವಾಸದಿಂದ ಇರಲು ತಮ್ಮ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.
ಮುಂದುವರೆದು, ಈ ವಿಷಯವು ಪಕ್ಷದ ಬೆಂಬಲಿಗರನ್ನು ಚಿಂತೆಗೀಡು ಮಾಡಬಾರದು ಮತ್ತು ಅದನ್ನು ನಾನೇ ನಿಭಾಯಿಸುತ್ತೇನೆ. ನೀವು ನನಗಾಗಿ ಹೋರಾಡುತ್ತಿದ್ದೀರಿ ಮತ್ತು ನೋಯಿಸಿಕೊಳ್ಳುತ್ತಿದ್ದೀರಿ. ಅದನ್ನು ನೋಡುವುದು ನನಗೆ ನೋವುಂಟುಮಾಡುತ್ತದೆ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ. ದುಃಖಿಸಬೇಡಿ ಅಥವಾ ಚಿಂತಿಸಬೇಡಿ. ನನಗೆ ದುಃಖವಿಲ್ಲ. ಒಳ್ಳೆಯದು ಮಾತ್ರ ಸಂಭವಿಸುತ್ತದೆ ಎಂದಿದ್ದಾರೆ.
ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಅವರು ತಮ್ಮ ವಿವಾಹ ವಿಚ್ಚೇದನ ಕೋರಿ ಫೆ. 28ರಂದು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮ ಪತಿ ಇತರೆ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಈ ಕಾರಣಕ್ಕೆ ನಮ್ಮ ನಡುವೆ ಹೊಂದಾಣಿಕೆ ಆಗದ ಹಿನ್ನೆಲೆ ವಿಚ್ಚೇದನ ನೀಡುವಂತೆ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಬೆಳವಣಿಗೆ ನಡುವೆ ನಟ ವಿಜಯ್, ಮಾರ್ಚ್ 5ರಂದು ಚೆನ್ನೈನಲ್ಲಿ ನಡೆದ ವಿವಾಹವೊಂದರಲ್ಲಿ ನಟಿ ತ್ರಿಷಾ ಕೃಷ್ಣನ್ ಜೊತೆ ಒಂದೇ ಕಾರಿನಲ್ಲಿ ಬಂದು ಕಾಣಿಸಿಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ (ಏಜೆನ್ಸೀಸ್).