Chicken Sambar 
ದೇಶ

ಚಿಕನ್ ಸಾಂಬಾರ್‌ಗಾಗಿ ಶುರುವಾದ ಜಗಳದಲ್ಲಿ ಪತಿಯನ್ನೇ ಕೊಡಲಿಯಿಂದ ಕಚ್ಚಿ ಕೊಂದ ಪತ್ನಿ! | Chicken Sambar

ಹೈದರಾಬಾದ್: ಸಣ್ಣ ವಿಷಯವೊಂದು ಮನುಷ್ಯನ ಕೋಪವನ್ನು ಹೇಗೆ ನೆತ್ತಿಗೇರಿಸುತ್ತದೆ ಎನ್ನುವುದಕ್ಕೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಊಟದ ವಿಷಯಕ್ಕೆ(Chicken Sambar) ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ, ಹೆಂಡತಿಯೇ ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ಘಟನೆಯ ಹಿನ್ನೆಲೆ

ಮೃತ ದುರ್ದೈವಿಯನ್ನು ನಾರಾಯಣಪೇಟೆ ಜಿಲ್ಲೆಯ ಸೌರಂಕುಂಟ ಗ್ರಾಮದ ನಿವಾಸಿ ಸಿದ್ದಪ್ಪ (38) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಸಿದ್ದಪ್ಪ ಮತ್ತು ಅವರ ಪತ್ನಿ ವೆಂಕಟಮ್ಮ ಅವರ ನಡುವೆ ಚಿಕನ್ ಕರಿ (ಕೋಳಿ ಸಾಂಬಾರ್) ವಿಷಯವಾಗಿ ಕಿರಿಕ್ ಶುರುವಾಗಿದೆ. ಊಟ ಬಡಿಸುವ ವೇಳೆ ಉಂಟಾದ ಸಣ್ಣ ವಾಗ್ವಾದವು ಅಂತಿಮವಾಗಿ ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ನಡೆದದ್ದೇನು?

ಪೊಲೀಸರ ಮಾಹಿತಿ ಪ್ರಕಾರ, ಭಾನುವಾರ ರಾತ್ರಿ ಸಿದ್ದಪ್ಪ ಕುಡಿದು ಮನೆಗೆ ಬಂದಿದ್ದ ಎನ್ನಲಾಗಿದೆ. ಊಟಕ್ಕೆ ಕುಳಿತಾಗ ಚಿಕನ್ ಸರಿಯಾಗಿ ಬೆಂದಿಲ್ಲ ಅಥವಾ ರುಚಿಯಾಗಿಲ್ಲ ಎಂಬ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಅಷ್ಟಕ್ಕೇ ನಿಲ್ಲದೆ, ವೆಂಕಟಮ್ಮನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ಮೊದಲೇ ದಿನವಿಡೀ ಕೆಲಸ ಮಾಡಿ ದಣಿದಿದ್ದ ವೆಂಕಟಮ್ಮನಿಗೆ ಪತಿಯ ಕಿರುಕುಳ ಮತ್ತು ನಿಂದನೆ ಅತಿಯಾದ ಕೋಪ ತರಿಸಿದೆ.
ತಾಳ್ಮೆ ಕಳೆದುಕೊಂಡ ಆಕೆ, ಮನೆಯಲ್ಲಿದ್ದ ಕೊಡಲಿಯನ್ನು (Sickle/Axe) ತೆಗೆದುಕೊಂಡು ಸಿದ್ದಪ್ಪನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾಳೆ. ಕುತ್ತಿಗೆ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ, ಸಿದ್ದಪ್ಪ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಪೊಲೀಸರ ಭೇಟಿ

ಕಿರುಚಾಟ ಕೇಳಿ ಅಕ್ಕಪಕ್ಕದವರು ಓಡಿ ಬರುವಷ್ಟರಲ್ಲಿ ಸಿದ್ದಪ್ಪ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ನಾರಾಯಣಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಮಹಿಳೆ ವೆಂಕಟಮ್ಮನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ಸಂಸಾರದಲ್ಲಿ ಸಿಡಿದ ವಿಷ

ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕ್ಷಣಿಕ ಕೋಪಕ್ಕೆ ತಂದೆ ಸಾವನ್ನಪ್ಪಿದರೆ, ತಾಯಿ ಜೈಲು ಪಾಲಾಗುವಂತಾಗಿದೆ. ಇದರಿಂದ ಇಡೀ ಕುಟುಂಬ ಬೀದಿಗೆ ಬಿದ್ದಂತಾಗಿದೆ. "ಕೇವಲ ಊಟದ ವಿಷಯಕ್ಕೆ ಇಷ್ಟೊಂದು ದೊಡ್ಡ ಅವಾಂತರ ನಡೆಯಬಾರದಿತ್ತು" ಎಂದು ಗ್ರಾಮಸ್ಥರು ಮರುಗುತ್ತಿದ್ದಾರೆ. ಆಧುನಿಕ ಬದುಕಿನಲ್ಲಿ ಸಹನೆ ಕಡಿಮೆಯಾಗುತ್ತಿರುವುದು ಮತ್ತು ಕೌಟುಂಬಿಕ ಕಲಹಗಳು ಹಿಂಸಾತ್ಮಕ ರೂಪ ಪಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ,(ಏಜೆನ್ಸೀಸ್​).