ಘಟನೆಯ ಸ್ಥಳ 
ದೇಶ

ಪತಿಯನ್ನು ಕೊಂದು ಮನೆಯ ಒಳಗಿನ ಶೌಚಾಲಯದಲ್ಲೇ ಹೂತು ಹಾಕಿದ ಪತ್ನಿ: 45 ದಿನಗಳ ಬಳಿಕ ಪ್ರಕರಣ ಬೆಳಕಿಗೆ | Wife kills husband

ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಂದು(Wife kills husband), ಆತನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಮನೆಯ ಶೌಚಾಲಯದೊಳಗೆ ಹೂತು ಹಾಕಿದ್ದು, 45 ದಿನಗಳ ಬಳಿಕ ಆಕೆಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ(ಜು. 03) ವರದಿಯಾಗಿದೆ.
ಮೃತ ವ್ಯಕ್ತಿಯನ್ನು 44 ವರ್ಷದ ಸುರೇಂದ್ರ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಮೇ 18ರಿಂದ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆಯ ಸಮಯದಲ್ಲಿ ಪತ್ನಿ ರೂಬಿ ತನ್ನ ಪತಿ ಸುರೇಂದ್ರ ಶರ್ಮಾ ಹುಡುಕಾಟದಲ್ಲಿ ಪೊಲೀಸರಿಗೆ ಸಹಾಯ ಮಾಡುವಂತೆ ನಟಿಸಿದ್ದು, ಕೊಲೆಯಾದ ವ್ಯಕ್ತಿಯ ಸಹೋದರ ರೂಬಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಬಳಿಕ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಕೊಲೆಯ ವಿಚಾರ ಬಾಯಿಬಿಟ್ಟಿದ್ದಾಳೆ.
ಬಳಿಕ ಪೊಲೀಸರು ಮನೆಯನ್ನು ಶೋಧಿಸಿ ಸ್ನಾನಗೃಹದ ನೆಲವನ್ನು ಅಗೆಸಿದ್ದಾರೆ. ಈ ವೇಳೆ ಅಲ್ಲಿ ಸುರೇಂದ್ರ ಅವರ ಶವ ಪತ್ತೆಯಾಗಿದ್ದು, ದೇಹವನ್ನು ವಶಪಡಿಸಿಕೊಂಡರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಪತ್ನಿ ರೂಬಿಗೆ ಮೃತದೇಹವನ್ನು ಹೂಳಲು ಇತರರು ಸಹಾಯ ಮಾಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).