ಮೃತರಾದ ಮೈಕಲ್ ಮತ್ತು ಅವರ ಮಕ್ಕಳು 
ದೇಶ

ಬೇರೊಬ್ಬನ ಜೊತೆ ಓಡಿ ಹೋದ ಪತ್ನಿ: ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ | suicide

ಚೆನ್ನೈ: ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯ ಪುದುಕೊಟ್ಟೈ ಬಳಿ ಹೆಂಡತಿ ಬೇರೊಬ್ಬನ ಜೊತೆ ಓಡಿ ಹೋದ ಹಿನ್ನೆಲೆ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಕರೆಂಟ್ ಹೊಡೆಸಿ ಕೊಂದು, ಬಳಿಕ ತಾನೂ ವಿದ್ಯುತ್ ಸ್ಪರ್ಷಿಸಿ ಆತ್ಮಹತ್ಯೆಗೆ(suicide) ಶರಣಾಗಿದ್ದಾನೆ ಎಂದು ಭಾನುವಾರ(ಜು. 12) ವರದಿಯಾಗಿದೆ.
ಟುಟಿಕೋರಿನ್ ಜಿಲ್ಲೆಯ ಪುದುಕೊಟ್ಟೈ ಬಳಿಯ ಸವೇರಿಯಾರ್ಪುರಂನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಟ್ರಕ್ ಚಾಲಕ ಮೇರಿ ಮೈಕೆಲ್, ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಅವರ ಮಗಳು ಒಂಬತ್ತನೇ ತರಗತಿ ವಿದ್ಯಾರ್ಥಿನಿ ಮೇರಿ ನಿರೋಷಾ (14) ಮತ್ತು ಮಗ ಏಳನೇ ತರಗತಿ ವಿದ್ಯಾರ್ಥಿ ಮೇರಿ ಕೆನಿಸ್ಟನ್ (12) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಮೈಕೆಲ್ ಅವರ ಪತ್ನಿ ಸುಮಾರು ಆರು ತಿಂಗಳ ಹಿಂದೆ ಕುಟುಂಬವನ್ನು ತೊರೆದು ಬೇರೊಬ್ಬ ವ್ಯಕ್ತಿಯೊಂದಿಗೆ ಓಡಿ ಹೋಗಿ ವಾಸವಾಗಿದ್ದಳು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಮೈಕೆಲ್, ಟ್ರಕ್​ ಚಾಲನೆ ಬಿಟ್ಟು ಪೇಂಟಿಂಗ್ ಕೆಲಸಕ್ಕೆ ಮಾಡುತ್ತಿದ್ದ ಎನ್ನಲಾಗಿದೆ.
ಶುಕ್ರವಾರ ರಾತ್ರಿ ಮೈಕೆಲ್ ಮಕ್ಕಳು ಊಟ ಮಾಡಿ ಮಲಗಿದ ಬಳಿಕ ಅವರಿಗೆ ವಿದ್ಯುತ್ ವೈರ್ ಕಟ್ಟಿ, ಬಟನ್ ಆನ್ ಮಾಡಿ ಕೊಂದಿದ್ದು, ಬಳಿಕ ಅದೆ ವೈರ್​ ಅನ್ನು ತಾನೂ ಸ್ಪರ್ಷಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊರಗೆ ಮಲಗಿದ್ದ ಅವರ 75 ವರ್ಷದ ತಂದೆ ಆಂಥೋನಿ, ಶನಿವಾರ ಮಧ್ಯಾಹ್ನದವರೆಗೂ ಬಾಗಿಲು ಲಾಕ್ ಆಗಿದ್ದನ್ನು ಕಂಡು ಸ್ಥಳೀಯರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಮೂವರು ಶವಗಳು ಹಾಸಿಗೆಯಲ್ಲಿ ವಿದ್ಯುತ್ ವೈರ್ ಜೊತೆ ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಟುಟಿಕೋರಿನ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಪುದುಕೊಟ್ಟೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).