ಮುಂಬೈ: ಮಹಾರಾಷ್ಟ್ರ ರಾಜ್ಯದ ಗ್ರಾಮ ಪಂಚಾಯತಿಯೊಂದರಲ್ಲಿ ಅದರ ಅಧ್ಯಕ್ಷರು ಮತ್ತು ಸದಸ್ಯರ ನೇತೃತ್ವದಲ್ಲಿ ನಡೆದ ಸಭೆಯೊಂದರಲ್ಲಿ ವಿಧವೆಯರಿಗಿರುವಂತೆ ಪತ್ನಿ ಸತ್ತ ಪುರುಷರಿಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಯೋಜನೆಗಳು ಸಿಗಬೇಕು ಎಂದು ವಿಚಿತ್ರವಾದ ನಿರ್ಣಯವನ್ನು ಅಂಗೀಕರಿಸಿದೆ.
ಇತ್ತೀಚಿಗೆ ಅಹಲ್ಯಾನಗರ ಜಿಲ್ಲೆಯ ಕೋಪರ್ಗಾಂವ್ ಪ್ರದೇಶದ ಸೋನೆವಾಡಿ ಪಂಚಾಯತ್ ಗ್ರಾಮ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಮಹಿಳಾ ವಿಧವೆಯರಿಗಿರುವಂತೆ ಆರ್ಥಿಕವಾಗಿ ದುರ್ಬಲ ಮತ್ತು ನಿರಾಶ್ರಿತ ಪುರುಷರಿಗೂ ಪತ್ನಿಯರು ಮರಣ ಹೊಂದಿದ ಸಾಮಾಜಿಕ ಭದ್ರತೆಯನ್ನು ಒದಗಿಸಲು ಸರ್ಕಾರಿ ಯೋಜನೆಗಳನ್ನು ಕೋರಿ ನಿರ್ಣಯವನ್ನು ಅಂಗೀಕರಿಸಲಾಗಿದೆ. ಸಭೆಯೂ ಅದನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎನ್ನಲಾಗಿದೆ.
ಸೋನೆವಾಡಿ ಗ್ರಾಮದ ಕಿಶೋರ್ ಜವಾಲೆ ಎಂಬುವರು, ಈಗಾಗಲೇ ವಿಧವೆಯರಿಗೆ ಸರ್ಕಾರಗಳು ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ ಮತ್ತು ಸಂಜಯ್ ಗಾಂಧಿ ನಿರಾಧಾರ್ ಅನುದನ್ ಯೋಜನೆಯಂತಹ ಯೋಜನೆಗಳ ಅಡಿಯಲ್ಲಿ ಪ್ರೋತ್ಸಾಹ ಧನ ನೀಡುತ್ತಿವೆ. ಆದರೆ ಹೆಂಡತಿಯನ್ನು ಕಳೆದುಕೊಂಡ ಪುರುಷರ ಪರಿಸ್ಥಿತಿ ಬಹಳ ಕೆಟ್ಟದಾಗಿದೆ.
ವಿಧುರರಿಗೆ ಬೆಂಬಲಿಸಲು ಅಥವಾ ಪ್ರೋತ್ಸಾಹಿಸಲು ಸರ್ಕಾರಗಳಿಂದ ಯಾವುದೇ ವಿಶೇಷ ಯೋಜನೆಗಳಿಲ್ಲ. ಸೋನೆವಾಡಿಯಲ್ಲಿ ಸುಮಾರು 150 ಪುರುಷರಿಗೆ ಹೆಂಡತಿಯರಿಲ್ಲ. ಈ‘ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪುರುಷರ ಬಗ್ಗೆಯೂ ಯೋಚಿಸುವಂತೆ ಪ್ರಸ್ತಾವನೆಯನ್ನು ಮಂಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಶಕುಂತಲಾ ತಾಯಿ, ಯೋಜನೆಗಳ ಅನುಷ್ಠಾನದಲ್ಲಿ ತಾರತಮ್ಯದಿಂದಾಗಿ ಸಾಮಾಜಿಕ ಅಸಮಾನತೆಗಳು ಹೆಚ್ಚಾಗುತ್ತವೆ. ಕಿಶೋರ್ ಪ್ರಸ್ತಾಪಿಸಿರುವ ನಿರ್ಣಯವನ್ನು ಗ್ರಾಮ ಸಭೆ ಸರ್ವಾನುಮತದಿಂದ ಅನುಮೋದಿಸಿದೆ. ಈ ನಿರ್ಣಯವನ್ನು ಸಂಬಂಧಿತ ಸರ್ಕಾರಿ ಇಲಾಖೆಗಳಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).