TVK Vijay Optics | ಸತೀಶನ್​ ಪದಗ್ರಹಣಕ್ಕೆ 'ದಳಪತಿ'​ ಗೈರಾಗಲು ಇಲ್ಲಿವೆ ನೋಡಿ ಅಸಲಿ ಕಾರಣಗಳು!  
ದೇಶ

ಐವರು ಶಾಸಕರಿಗಿಂತ ವಿಜಯ್​ಗೆ ಬಿಜೆಪಿಯೇ ಮುಖ್ಯವಾಯ್ತಾ..? ಸತೀಶನ್​ ಪದಗ್ರಹಣಕ್ಕೆ 'ದಳಪತಿ'​ ಗೈರಾಗಲು ಇಲ್ಲಿವೆ ನೋಡಿ ಅಸಲಿ ಕಾರಣಗಳು! | TVK Vijay Optics

TVK Vijay Optics: ಕೇರಳದಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿ ಡಿ ಸತೀಶನ್ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಮಾರಂಭದಲ್ಲಿ ಕಾಂಗ್ರೆಸ್ ತನ್ನ ರಾಷ್ಟ್ರೀಯ ಶಕ್ತಿ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಲು ದೇಶದ ಪ್ರಮುಖ ರಾಜಕೀಯ ಮುಖಂಡರನ್ನು ಒಂದೇ ಸೂರಿನಡಿ ಸೇರಿಸಿತ್ತು. ಆದರೆ, ಈ ಭವ್ಯ ಸಮಾರಂಭಕ್ಕಿಂತ ಹೆಚ್ಚಾಗಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರ ಗೈರುಹಾಜರಿಯೇ ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮುಂಚೂಣಿಯಲ್ಲಿ ಕುಳಿತಿದ್ದ ಈ ಕಾರ್ಯಕ್ರಮವನ್ನು, ಮುಂಬರುವ ರಾಷ್ಟ್ರೀಯ ಚುನಾವಣಾ ಹೋರಾಟಗಳಿಗಾಗಿ ಪ್ರತಿಪಕ್ಷಗಳ ಒಗ್ಗಟ್ಟು ಮತ್ತು ತಮ್ಮ ಆಡಳಿತದ ಮಾದರಿಯನ್ನು ಪ್ರದರ್ಶಿಸುವ ವೇದಿಕೆಯಾಗಿ ಕಾಂಗ್ರೆಸ್ ಬಳಸಿಕೊಂಡಿತ್ತು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಸೇರಿದಂತೆ ಹಲವು ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೇರಳದ ಸುದೀರ್ಘ ರಾಜಕೀಯ ಸಂಪ್ರದಾಯದಂತೆ ಮಾಜಿ ಸಿಎಂ ಪಿಣರಾಯಿ ವಿಜಯನ್​​, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, ಬಿನೋಯ್ ವಿಸ್ವಂ ಮತ್ತು ಎನ್.ಕೆ. ಪ್ರೇಮಚಂದ್ರನ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗಿತ್ತು. ಇಷ್ಟೆಲ್ಲಾ ಗಣ್ಯರ ಉಪಸ್ಥಿತಿಯ ನಡುವೆಯೂ ರಾಜಕೀಯ ವಲಯದಲ್ಲಿ ವಿಜಯ್ ಏಕೆ ಬರಲಿಲ್ಲ? ಎಂಬ ಒಂದೇ ಪ್ರಶ್ನೆ ಜೋರಾಗಿ ಕೇಳಿಬರುತ್ತಿದೆ.

ವಿಜಯ್ ಗೈರುಹಾಜರಿ: ಟಿವಿಕೆ ಮೂಲಗಳು ಹೇಳೋದೇನು..? 

ತಮಿಳುನಾಡಿನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಹುಲ್ ಗಾಂಧಿ ಮತ್ತು ವಿಜಯ್ ನಡುವಿನ ಆತ್ಮೀಯತೆಯ ದೃಶ್ಯಗಳು ವೈರಲ್ ಆದ ಬಳಿಕ, ಕಾಂಗ್ರೆಸ್ ಈ ಕಾರ್ಯಕ್ರಮಕ್ಕೂ ಅವರಿಗೆ ಆಹ್ವಾನ ನೀಡಿತ್ತು. ಆದರೆ ಈ ಬಾರಿ ಆ ಅಪರೂಪದ ದೃಶ್ಯ ಮರುಕಳಿಸಲಿಲ್ಲ. ವಿಜಯ್ ಕಚೇರಿಯಿಂದ ಪ್ರಯಾಣದ ಯೋಜನೆಗಳ ಬಗ್ಗೆ ಯಾವುದೇ ಮಾಹಿತಿ ಬಂದಿರಲಿಲ್ಲ ಎಂದು ಸತೀಶನ್ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ತಮಿಳುನಾಡಿನ ಅಧಿಕೃತ ಮೂಲಗಳು ಭದ್ರತೆ ಮತ್ತು ವ್ಯವಸ್ಥಾಪನಾ ಕಾರಣಗಳಿಂದಾಗಿ ವಿಜಯ್ ಕೇರಳ ಪ್ರವಾಸದ ಯೋಜನೆ ಮೊದಲೇ ಇರಲಿಲ್ಲ ಎಂದು ತಿಳಿಸಿವೆ.
ಕೇರಳದಲ್ಲಿ ವಿಜಯ್​ಗೆ ಇರುವ ಅಪಾರ ಅಭಿಮಾನಿ ಬಳಗದಿಂದಾಗಿ ಅವರು ಬಂದರೆ ಜನಸಂದಣಿಯನ್ನು ನಿಯಂತ್ರಿಸುವುದು ಕಷ್ಟವಾಗುತ್ತಿತ್ತು. ಇದು ಮುಖ್ಯಮಂತ್ರಿ ಸತೀಶನ್ ಕಾರ್ಯಕ್ರಮದ ಮೇಲೆಯೇ ಪ್ರಭಾವ ಬೀರುವ ಸಾಧ್ಯತೆ ಇತ್ತು ಎಂದು ಟಿವಿಕೆ (TVK) ಪಕ್ಷದ ಮೂಲಗಳು ಸಮರ್ಥಿಸಿಕೊಂಡಿವೆ.

ಕಾಂಗ್ರೆಸ್​ ನಾಯಕರು ಹೇಳಿದ್ದೇನು..?

ಕಾಂಗ್ರೆಸ್ ವಲಯದಲ್ಲಿ ರಾಹುಲ್ ಗಾಂಧಿ ಮತ್ತು ವಿಜಯ್ ನಡುವಿನ ರಾಜಕೀಯ ಕೆಮಿಸ್ಟ್ರಿ ಮತ್ತೊಮ್ಮೆ ದಕ್ಷಿಣ ಭಾರತದಲ್ಲಿ ಹೊಸ ಮೈತ್ರಿಯ ಮುನ್ಸೂಚನೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ವಿಜಯ್ ಗೈರಾಗುವ ಮೂಲಕ ಆ ನಿರೀಕ್ಷೆ ಹುಸಿಯಾಗಿದೆ. ತಮಿಳುನಾಡಿನಲ್ಲಿ ಇನ್ನು ಕೆಲವು ಸಚಿವರು ಅಧಿಕಾರ ವಹಿಸಿಕೊಳ್ಳಬೇಕಿರುವುದು ಮತ್ತು ಪ್ರಮುಖ ಆಡಳಿತಾತ್ಮಕ ಸಭೆಗಳಿದ್ದ ಕಾರಣ ವಿಜಯ್ ಬರಲು ಸಾಧ್ಯವಾಗಲಿಲ್ಲ ಎಂದು ಸರ್ಕಾರಿ ಮೂಲಗಳು ಹೇಳುತ್ತಿವೆಯಾದರೂ, ಇದರ ಹಿಂದೆ ಬೇರೆ ರಾಜಕೀಯ ಲೆಕ್ಕಾಚಾರವಿದೆ ಎಂದು ಕಾಂಗ್ರೆಸ್ ನಾಯಕರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ವಿಜಯ್ ಬಂದಿದ್ದರೆ ಅದು ರಾಹುಲ್ ಗಾಂಧಿಗೆ ನೀಡಿದ ರಾಜಕೀಯ ಬೆಂಬಲದಂತೆ ಬಿಂಬಿತವಾಗುತ್ತಿತ್ತು. ಈಗಷ್ಟೇ ಅಧಿಕಾರ ಹಿಡಿದಿರುವ ವಿಜಯ್, ಕೇಂದ್ರ ಸರ್ಕಾರದೊಂದಿಗೆ ಅನಗತ್ಯ ಹಗೆತನ ಸಾಧಿಸಲು ಬಯಸುತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಕೇರಳದಲ್ಲಿ ವೇಗ ಪಡೆದುಕೊಂಡ ಟಿವಿಕೆ ಸಂಘಟನೆ

ವಿಜಯ್ ಈ ಸಮಾರಂಭಕ್ಕೆ ಬರದಿದ್ದರೂ, ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಕೇರಳದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಭರ್ಜರಿ ತಯಾರಿ ನಡೆಸುತ್ತಿದೆ. ರಾಜ್ಯದಲ್ಲಿ ವಿಜಯ್​ಗೆ ಮೊದಲಿನಿಂದಲೂ ಭಾರಿ ಜನಪ್ರಿಯತೆ ಇದ್ದು, ಸದ್ಯ ಅವರ ಅಭಿಮಾನಿ ಬಳಗವನ್ನು ರಾಜಕೀಯ ಸಂಘಟನೆಯಾಗಿ ಬದಲಾಯಿಸಲಾಗುತ್ತಿದೆ. ವಯನಾಡು ಮತ್ತು ಪಾಲಕ್ಕಾಡ್ ಬಳಿಕ ಈಗ ತ್ರಿಸ್ಸೂರ್‌ನಲ್ಲೂ ಜಿಲ್ಲಾ ಘಟಕವನ್ನು ರಚಿಸಿ ಮೊದಲ ಸಭೆ ನಡೆಸಲಾಗಿದೆ. ಇದರಲ್ಲಿ ಯುವಕರು ಮತ್ತು ಮಹಿಳಾ ಮತದಾರರನ್ನು ಸೆಳೆಯಲು ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

2029 ರ ಲೋಕಸಭೆ ಚುನಾವಣೆ ಮೇಲೆ ವಿಜಯ್​ ಕಣ್ಣು

ತಮಿಳುನಾಡು ದಾಟಿ ಕೇರಳದಲ್ಲೂ ಬೆಳೆಯುತ್ತಿರುವ ವಿಜಯ್​​ರ ರಾಜಕೀಯ ಹೆಜ್ಜೆಗಳನ್ನು ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿಯೂ ಸೂಕ್ಷ್ಮವಾಗಿ ಗಮನಿಸುತ್ತಿದೆ. 2029 ರ ಲೋಕಸಭೆ ಚುನಾವಣೆಯ ರೇಸ್ ಈಗಿನಿಂದಲೇ ಆರಂಭವಾಗುತ್ತಿದ್ದು, ದಕ್ಷಿಣ ಭಾರತದ ರಾಜಕೀಯ ಸಮೀಕರಣಗಳಲ್ಲಿ ವಿಜಯ್ ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ಕೇರಳದ ಕಾರ್ಯಕ್ರಮಕ್ಕೆ ಬಾರದಿರುವುದರ ಹಿಂದೆ ಆಡಳಿತಾತ್ಮಕ ಕಾರಣಗಳಿದ್ದರೂ, ರಾಜಕೀಯವಾಗಿ ಅವರು ತಮ್ಮ ಸ್ವಾತಂತ್ರ್ಯ ಮತ್ತು ಮಹತ್ವಾಕಾಂಕ್ಷೆಯನ್ನು ಕಾಯ್ದುಕೊಳ್ಳಲು ಅತ್ಯಂತ ಜಾಗರೂಕತೆಯಿಂದ ಇಟ್ಟ ಹೆಜ್ಜೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​​).