ದೆಹಲಿ: ಸಂಸದ ಶಶಿ ತರೂರ್ ಮತ್ತು ಕಾಂಗ್ರೆಸ್ ನಾಯಕರ ಸಂಬಂಧ ತೀರಾ ಹದಗೆಡುತ್ತಿವೆ ಎನ್ನುವ ಚರ್ಚೆಗಳ ಮಧ್ಯೆ, ಇತ್ತಿಚೆಗೆ ರಾಹುಲ್ ಗಾಂಧಿ ಕರೆದಿದ್ದ ಕಾಂಗ್ರೆಸ್ ಲೋಕಸಭಾ ಸದಸ್ಯರ ಸಭೆಗೆ ತರೂರ್ ಮತ್ತೊಮ್ಮೆ ಗೈರಾಗುವ ಮೂಲಕ್ಕೆ ಆ ಮಾತುಗಳಿಗೆ ಪುಷ್ಟಿ ನೀಡಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ತರೂರ್ ದೂರ ಉಳಿಯುತ್ತಿರುವ ಮೂರನೇ ಕಾಂಗ್ರೆಸ್ ಸಭೆ ಇದಾಗಿದ್ದು, ಸಂಸತ್ತಿನ ಚಳಿಗಾಲದ ಅಧಿವೇಶನ ಕೊನೆಗೊಳ್ಳುವ ಮೊದಲು, ಇಲ್ಲಿಯವರೆಗಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಮತ್ತು ಮುಂದಿನ ರೂಪರೇಷೆಗಳನ್ನು ಸಿದ್ಧಪಡಿಸಲು ಈ ಸಭೆಯನ್ನು ಕರೆಯಲಾಗಿದೆ ಎನ್ನುವುದು ಮೂಲಗಳ ಮಾಹಿತಿ. ಶುಕ್ರವಾರ ಬೆಳಿಗ್ಗೆ ಕಾಂಗ್ರೆಸ್‌ನ 99 ಸಂಸದರು ಚರ್ಚೆ ನಡೆಸಿದರು.
ತರೂರ್ ಗೈರಿಗೆ ಕಾರಣವೇನು..?
ಕೋಲ್ಕತ್ತಾದಲ್ಲಿ ತರೂರ್ ಅವರ ದೀರ್ಘಕಾಲದ ಸಹಾಯಕ ಜಾನ್ ಕೋಶಿ ಮದುವೆ ಮತ್ತು ಅವರ ಸಹೋದರಿ ಸ್ಮಿತಾ ತರೂರ್ರ ಜನ್ಮದಿನದ ಸಲುವಾಗಿ ಸಭೆಗೆ ಗೈರಾಗಿದ್ದಾರೆ ಎಂದು ತಿಳಿದುಬಂದಿದೆ. ಚಂಡೀಗಢ ಸಂಸದ ಮನೀಶ್ ತಿವಾರಿ ಕೂಡ ಈ ಸಭೆಗೆ ಗೈರುಹಾಜರಾಗಿದ್ದರು ಎನ್ನಲಾಗಿದೆ.
ಕಾಂಗ್ರೆಸ್ ಅಧಿವೇಶನಗಳಿಗೆ ತರೂರ್ ಗೈರು
ನವೆಂಬರ್‌ನಲ್ಲಿ ನಡೆದ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯತಂತ್ರದ ಸಭೆಗೂ ತರೂರ್ ಗೈರಾಗಿದ್ದರು. ಗೈರಿನ ಬಗ್ಗೆ ಸುದ್ದಿಗಾರರಿಗೆ ಮಾತನಾಡಿದ್ದ ಸಂಸದರು, ಸಭೆಯನ್ನು ತಪ್ಪಿಸಿಕೊಂಡಿಲ್ಲ, ಆ ಸಮಯದಲ್ಲಿ ಕೇರಳದಿಂದ ದೆಹಲಿಗೆ ತೆರಳುತ್ತಿರುವುದಾಗಿ ಸ್ಪಷ್ಟನೆ ನೀಡಿದರು. 2020 ರಲ್ಲಿ ಸೋನಿಯಾ ಗಾಂಧಿ ನಾಯಕತ್ವವನ್ನು ಪ್ರಶ್ನಿಸಿದ್ದ ಅನೇಕ ಪ್ರಮುಖ ನಾಯಕರಲ್ಲಿ ತರೂರ್ ಕೂಡ ಒಬ್ಬರು.
ಎರಡನೇ ಸಭೆ ನವೆಂಬರ್ 18 ರಂದು ನಡೆದಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ವಿಷಯವಾಗಿ ನಡೆದ ಸಭೆಯಾಗಿತ್ತು. ಆ ಸಭೆಯ ನೇತೃತ್ವವನ್ನು ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಹಿಸಿದ್ದರು. ತರೂರ್ ತಮ್ಮ ಅನುಪಸ್ಥಿತಿಗೆ ಅನಾರೋಗ್ಯದ ಕಾರಣ ನೀಡಿದ್ದರು. ಆದರೆ ಒಂದು ದಿನದ ಹಿಂದೆ ಪ್ರಧಾನಿ ಮಾತನಾಡಿದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಭಾಷಣವನ್ನು ಶ್ಲಾಘಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಮತ್ತೊಂದು ಸುತ್ತಿನ ವಿವಾದಕ್ಕೆ ಆಹಾರವಾದರು.
ಈ ಅಂತರವೇಕೆ..?
ಕೇರಳ ಕಾಂಗ್ರೆಸ್ ಘಟಕದಲ್ಲಿನ ತರೂರ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಡುವಿನ ಉದ್ವಿಗ್ನತೆಯಿಂದಾಗಿ ಕೈ ನಾಯಕರು ತರೂರ್ ವಿರುದ್ಧ ಮಾತನಾಡಲು ಹಿಂಜರಿಯುತ್ತಾರೆ. ಕೇರಳದಲ್ಲಿ ತರೂರ್ಗೆ ತಮ್ಮದೇ ಆದ ಬೆಂಬಲಿಗರ ಪಡೆ ಇದೆ, ಮತದಾರರ ಮೇಲೆ ಪ್ರಭಾವ ಇದೆ. 2009 ರಿಂದ ನಾಲ್ಕು ಬಾರಿ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಗೆದ್ದರೆ ಮುಖ್ಯಮಂತ್ರಿ ಹುದ್ದೆ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿ ತರೂರ್ ಇದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದಕ್ಕೆ ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಒಪ್ಪಿಗೆ ಸೂಚಿಸುವುದು ಅಂದುಕೊಂಡಷ್ಟು ಸುಲಭವಿಲ್ಲ. 2026 ರಲ್ಲಿ ಯುಡಿಎಫ್ ಜಯಗಳಿಸಿದರೆ ಮುಖ್ಯಮಂತ್ರಿ ಹುದ್ದೆಗಾಗಿ ಕೆ ಸಿ ವೇಣುಗೋಪಾಲ್ ಮತ್ತು ತರೂರ್ ನಡುವೆ ಹಣಾಹಣಿ ನಡೆದರು ಅಚ್ಚರಿಪಡಬೇಕಿಲ್ಲ(ಏಜೆನ್ಸೀಸ್).