Custodial Death > ಅಂದು ಸ್ಟಾಲಿನ್‌ಗೆ ಹೇಳಿದ್ದ ಡೈಲಾಗ್ ಇಂದು ತಮಗೇ ರಿವರ್ಸ್!.. ಕಸ್ಟಡಿಯಲ್ ಡೆತ್ ಪ್ರಕರಣದಲ್ಲಿ ವಿಜಯ್ ಮೌನ ಪ್ರಶ್ನಿಸಿದ ಡಿಎಂಕೆ 
ದೇಶ

ಅಂದು ಸ್ಟಾಲಿನ್‌ಗೆ ಹೇಳಿದ್ದ ಡೈಲಾಗ್ ಇಂದು ತಮಗೇ ರಿವರ್ಸ್!.. ಕಸ್ಟಡಿಯಲ್ ಡೆತ್ ಪ್ರಕರಣದಲ್ಲಿ ವಿಜಯ್ ಮೌನ ಪ್ರಶ್ನಿಸಿದ ಡಿಎಂಕೆ | Custodial Death

ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕಾರಾಗೃಹದಲ್ಲಿ 35 ವರ್ಷದ ವಿಶೇಷ ಚೇತನ ಕೈದಿ ಶಬರಿ ವರ್ಮನ್ ಎಂಬುವವರ ಶಂಕಾಸ್ಪದ ಕಸ್ಟಡಿಯಲ್ ಡೆತ್ (Custodial Death) ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ವಿರುದ್ಧ ವಿಪಕ್ಷವಾದ ಡಿಎಂಕೆ ತೀವ್ರ ವಾಗ್ದಾಳಿ ನಡೆಸಿದೆ.
ಸ್ವತಃ ಮುಖ್ಯಮಂತ್ರಿ ವಿಜಯ್​ ಗೃಹ ಇಲಾಖೆಯನ್ನು ಹೊಂದಿರುವುದರಿಂದ ಈ ಸೂಕ್ಷ್ಮ ವಿಷಯದ ಕುರಿತು ತಕ್ಷಣವೇ ಪ್ರತಿಕ್ರಿಯೆ ನೀಡುವಂತೆ ಡಿಎಂಕೆ ಆಗ್ರಹಿಸಿದೆ.

ಘಟನೆಯ ಹಿನ್ನೆಲೆ

ನಿಷೇಧಿತ ಗುಟ್ಕಾ ಮಾರಾಟ ಮಾಡಿದ ಆರೋಪದ ಮೇಲೆ ಜುಲೈ 9 ರಂದು ಸೌತ್ ತಾಮರೈಕುಲಂ ಪೊಲೀಸರು ಶಬರಿ ವರ್ಮನ್ ಎಂಬ ವಿಶೇಷ ಚೇತನ ವ್ಯಕ್ತಿಯನ್ನು ಬಂಧಿಸಿದ್ದರು. ತದನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕನ್ಯಾಕುಮಾರಿ ಜಿಲ್ಲೆಯ ನಾಗರಕೋವಿಲ್ ಉಪಕಾರಾಗೃಹದಲ್ಲಿ ಇರಿಸಲಾಗಿತ್ತು. ಆದರೆ, ಜುಲೈ 13ರ ಸೋಮವಾರ ಮುಂಜಾನೆ ಅವರು ಜೈಲಿನಲ್ಲೇ ಮೃತಪಟ್ಟಿದ್ದಾರೆ.
ಮೊದಲಿಗೆ ಇದನ್ನು ಅನಾರೋಗ್ಯ ಅಥವಾ ಹೃದಯಾಘಾತದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಪ್ರಯತ್ನಿಸಲಾಯಿತಾದರೂ, ಮೃತರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು. ತದನಂತರ ನಡೆಸಲಾದ ಮರಣೋತ್ತರ ಪರೀಕ್ಷೆಯಲ್ಲಿ ಶಬರಿ ವರ್ಮನ್ ದೇಹದ ಮೇಲೆ ಬರೋಬ್ಬರಿ 19 ಗಾಯದ ಗುರುತುಗಳು ಪತ್ತೆಯಾಗಿರುವುದು ಜೈಲು ಸಿಬ್ಬಂದಿಯ ಕ್ರೌರ್ಯವನ್ನು ಜಗಜ್ಜಾಹೀರುಗೊಳಿಸಿದೆ. ಜೈಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಜುಲೈ 12ರ ರಾತ್ರಿ ಜೈಲಿನೊಳಗೆ ಗಲಾಟೆ ನಡೆದಿರುವುದು ಮತ್ತು ಕಾರಾಗೃಹದ ಸಿಬ್ಬಂದಿಯೇ ಶಬರಿ ವರ್ಮನ್ ಮೇಲೆ ದೈಹಿಕ ಹಲ್ಲೆ ನಡೆಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ವಾರ್ಡನ್ ಸೇರಿದಂತೆ ಮೂವರು ಜೈಲು ಸಿಬ್ಬಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಿಎಂ ಜೋಸೆಫ್ ವಿಜಯ್​​ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ಮತ್ತು ಗೃಹ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿರುವ ಮುಖ್ಯಮಂತ್ರಿಗಳೇ ಈ ಜೈಲು ಸಾವಿನ ಸಂದರ್ಭ ಹಾಗೂ ಸನ್ನಿವೇಶಗಳ ಕುರಿತು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಮಗೆ ರೀಲ್ಸ್ ಬೇಡ, ನ್ಯಾಯ ಬೇಕು ಎಂದು ಡಿಎಂಕೆ ತಿರುಗೇಟು
ಈ ಹಿಂದೆ ಡಿಎಂಕೆ ಆಡಳಿತಾವಧಿಯಲ್ಲಿ ನಡೆದಿದ್ದ ಕಸ್ಟಡಿಯಲ್ ಡೆತ್ ಪ್ರಕರಣವನ್ನು ಜೋಸೆಫ್ ವಿಜಯ್ ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಂಡಿದ್ದರು. ಅಂದು ಪೊಲೀಸ್ ವಶದಲ್ಲಿದ್ದ ಕೈದಿಯೊಬ್ಬರು ಮೃತಪಟ್ಟಾಗ, ಸಿಎಂ ಆಗಿದ್ದ ಎಂ ಕೆ ಸ್ಟಾಲಿನ್ ನೈತಿಕ ಹೊಣೆ ಹೊತ್ತು ಕುಟುಂಬದ ಕ್ಷಮೆ ಕೇಳಿದ್ದರು. ಆದರೆ ಅಂದು ವಿರೋಧ ಪಕ್ಷದಲ್ಲಿದ್ದ ವಿಜಯ್, ನಮಗೆ ನಿಮ್ಮ ಕ್ಷಮೆ ಬೇಡ, ನ್ಯಾಯ ಬೇಕು ಎಂದು ಗುಡುಗಿದ್ದರು. ಇದನ್ನೇ ಈಗ ಅಸ್ತ್ರವಾಗಿಸಿಕೊಂಡಿರುವ ಡಿಎಂಕೆ ನಾಯಕ ಪರಂತಾಮನ್, ಅಂದು ವಿಜಯ್ ಹೇಳಿದ ಮಾತನ್ನೇ ಇಂದು ತಮಿಳುನಾಡಿನ ಜನತೆ ಅವರಿಗೆ ಮರಳಿ ಹೇಳುತ್ತಿದ್ದಾರೆ; ನಮಗೆ ನಿಮ್ಮ ರೀಲ್ಸ್ ಬೇಡ, ನ್ಯಾಯ ಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಡಿಎಂಕೆ ವಕ್ತಾರ ಹಫೀಜುಲ್ಲಾ ಮಾತನಾಡಿ, ವಿರೋಧ ಪಕ್ಷದ ನಾಯಕರಾಗಿದ್ದಾಗ ಕಸ್ಟಡಿಯಲ್ ಸಾವುಗಳ ವಿರುದ್ಧ ಭಾರಿ ಧ್ವನಿ ಎತ್ತುತ್ತಿದ್ದ ವಿಜಯ್, ಇಂದು ತಾವೇ ಮುಖ್ಯಮಂತ್ರಿಯಾಗಿ ಗೃಹ ಖಾತೆ ಹೊಂದಿದ್ದರೂ ತಮ್ಮದೇ ಆಡಳಿತದ ಜೈಲಿನಲ್ಲಿ ಇಂತಹ ಘೋರ ದೌರ್ಜನ್ಯ ನಡೆದು ಸಾವು ಸಂಭವಿಸಿದ್ದರೂ ಮೌನಕ್ಕೆ ಶರಣಾಗಿರುವುದು ಏಕೆ..? ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡಿನಲ್ಲಿ ಗೃಹ ಇಲಾಖೆ ಹಾಗೂ ಕಾನೂನು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರೇ ನಿರ್ವಹಿಸುತ್ತಿರುವುದರಿಂದ, ಈ ಸಾವು ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಿರೋಧ ಪಕ್ಷಗಳು ಬಿಂಬಿಸುತ್ತಿವೆ. ತನಿಖೆ ಚುರುಕುಗೊಂಡು ಮೂವರು ಸಿಬ್ಬಂದಿಯನ್ನು ಬಂಧಿಸಲಾಗಿದ್ದರೂ, ಸಿಎಂ ಮೌನ ಮಾತ್ರ ಸದ್ಯಕ್ಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ(ಏಜೆನ್ಸೀಸ್​).