- ಮಧ್ಯಪ್ರಾಚ್ಯ ಉಗ್ವಿಗ್ನ ಭಾರತ ಸೇರಿ ಅನೇಕ ರಾಷ್ಟ್ರಗಳು ಆರ್ಥಿಕ ಹೊಡೆತಕ್ಕೆ ಸಿಲುಕಿವೆ
- ತೈಲ, ಅನಿಲ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಆಯಾ ದೇಶಗಳ ಜನರು ಹೈರಾಣ
- ಯಾವ ಮೂಲ ಉದ್ದೇಶದಿಂದ ಪ್ರಧಾನಿ ಮೋದಿ ಸಲಹೆ ಕೊಟ್ಟರು?
ನವದೆಹಲಿ: ಪ್ರಸ್ತುತ, ಮಧ್ಯಪ್ರಾಚ್ಯ ಉಗ್ವಿಗ್ನತೆಯಿಂದ ಭಾರತ ಸೇರಿ ಅನೇಕ ರಾಷ್ಟ್ರಗಳು ಆರ್ಥಿಕ ಹೊಡೆತಕ್ಕೆ ಸಿಲುಕಿವೆ. ತೈಲ, ಅನಿಲ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಆಯಾ ದೇಶಗಳ ಜನರು ಹೈರಾಣಾಗಿದ್ದಾರೆ. ಈ ಬಿಕ್ಕಟ್ಟಿನಿಂದ ಹೊರಬರಲು ಹಲವು ರಾಷ್ಟ್ರಗಳು ಸ್ಮಾರ್ಟ್ ಲಾಕ್ಡೌನ್ ಮಾದರಿಯನ್ನು ಅನುಸರಿಸುತ್ತಿವೆ. ಈ ಮಧ್ಯೆ, ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಜನತೆಗೆ ನೀಡಿದ ಒಂದಷ್ಟು ಮಹತ್ವದ ಸಲಹೆಗಳು ಕೆಲವರಲ್ಲಿ ತೀವ್ರ ಗೊಂದಲ ಹುಟ್ಟುಹಾಕಿದೆ.
ಆರ್ಥಿಕತೆಯ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಸುಧಾರಣೆಗೆ ತರಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಒಂದು ವರ್ಷದ ಮಟ್ಟಿಗೆ ಚಿನ್ನದ ಖರೀದಿ ಮರೆತುಬಿಡಿ, ಮೆಟ್ರೋ-ಸಾರಿಗೆ ಬಸ್ನಲ್ಲಿ ಸಂಚರಿಸಿ, ವರ್ಕ್ಫ್ರಮ್ ಹೋಮ್ ಸಂಸ್ಕೃತಿ ತನ್ನಿ, ವರ್ಚ್ಯುವಲ್ ಮೀಟಿಂಗ್ ನಡೆಸಿ, ವಿದೇಶಿ ಪ್ರವಾಸಗಳನ್ನು ಆದಷ್ಟು ಕಡಿತಗೊಳಿಸಿ ಎಂದು ಕಿವಿಮಾತು ನೀಡಿದರು. ಪ್ರಧಾನಿ ಅವರ ಈ ಮಾತುಗಳಿಂದ ಸಾಕಷ್ಟು ಚರ್ಚೆಗಳು ಭುಗಿಲೆದ್ದಿದ್ದು, ಯಾವ ಮೂಲ ಉದ್ದೇಶದಿಂದ ಮೋದಿ ಹೀಗೇಳಿದರು ಎಂಬ ಗೊಂದಲ ಕೆಲವರಲ್ಲಿ ಬೆಂಬಿಡದೆ ಕಾಡತೊಡಗಿದೆ. ಅದಕ್ಕೆ, ಹೀಗಿದೆ ನೋಡಿ ಉತ್ತರ.
ಅಷ್ಟಕ್ಕೂ ಮೋದಿ ಸಲಹೆಗಳಲ್ಲಿ ಏನಿದೆ?
ಇಂಧನ ಉಳಿತಾಯ: ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಅನ್ನು ಮಿತವಾಗಿ ಬಳಸಿ. ಅಗತ್ಯವಿದ್ದಷ್ಟು ಮಾತ್ರ ಬಳಕೆ ಮಾಡುವ ಮೂಲಕ ಹೊರಗಿನಿಂದ ಹೆಚ್ಚಿನ ಪ್ರಮಾಣದಲ್ಲಿ ಮಾಡಿಕೊಳ್ಳುವ ಆಮದು ತಪ್ಪುತ್ತದೆ. ಇದು ವಿದೇಶಿ ಕರೆನ್ಸಿ ಮೊರೆ ಹೋಗುವುದನ್ನು ತಪ್ಪಿಸುತ್ತದೆ.
ಆಮದು ಕಡಿತ
ಭಾರತವು ತನ್ನ ಅಗತ್ಯದ ಶೇ.80ರಿಂದ 85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಅಮೆರಿಕ-ಇರಾನ್ ಯುದ್ಧದಿಂದ ತೈಲ ಬೆಲೆ ಏರಿಕೆಯು ಆರ್ಥಿಕತೆಗೆ ದೊಡ್ಡ ಹೊರೆಯಾಗಿದೆ. ಇದರಿಂದ ದೇಶದ ಇಂಧನ ಕಂಪನಿಗಳು ನಷ್ಟದಿಂದ ನೆಲ ಕಚ್ಚಿವೆ.
ಚಿನ್ನದ ವ್ಯಾಮೋಹಕ್ಕೆ ಬ್ರೇಕ್
ಭಾರತವು ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರ ರಾಷ್ಟ್ರಗಳಲ್ಲಿ ಒಂದು ಎಂಬುದು ನೆನಪಿರಲಿ. 2025-26ರಲ್ಲಿ ಚಿನ್ನದ ಆಮದು ದಾಖಲೆಯ 71.98 ಬಿಲಿಯನ್ ಡಾಲರ್ ತಲುಪಿದ್ದು, ಇದು ವ್ಯಾಪಾರ ಕೊರತೆಯನ್ನು ದುಪ್ಪಟ್ಟಾಗಿಸಿದೆ.
ಅನಗತ್ಯ ಬೇಡವೆನ್ನಲು ಇದೇ ಕಾರಣ!
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಭಾರತದ ರೂಪಾಯಿ ಮೌಲ್ಯದ ಮೇಲೆ ವಿಪರೀತ ಒತ್ತಡ ಹೇರುತ್ತಿದೆ. ಮತ್ತೊಂದೆಡೆ, ವಿದೇಶಿ ವಿನಿಮಯ ಮೀಸಲು ಇಳಿಕೆಯಾಗುತ್ತಿದೆ. ಈ ಆರ್ಥಿಕ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶದಿಂದ ಪ್ರಧಾನಿ ಅವರು ಈ ಮಿತ ಬಳಕೆ, ಅನಗತ್ಯ ಬೇಡ ಎಂದಿದ್ದಾರೆ.
ಪ್ರಧಾನಿ ಮಾತಿನಿಂದ ಷೇರು ಕುಸಿತ
ಪ್ರಧಾನಿಯವರ ಮಹತ್ವದ ಕಿವಿಮಾತುಗಳ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಉಂಟಾಗಿದೆ. ಮುಂಚೂಣಿಯಲ್ಲಿದ್ದ ಜ್ಯುವೆಲ್ಲರಿ ಕಂಪನಿಗಳ ಷೇರುಗಳು ಭಾರೀ ಕುಸಿತ ಕಾಣುವತ್ತ ಸಾಗಿವೆ.
- ಟೈಟಾನ್ (Titan): ಶೇ.6.4ರಷ್ಟು ಕುಸಿತ
- ಕಲ್ಯಾಣ್ ಜ್ಯುವೆಲ್ಲರ್ಸ್: ಶೇ.8.3ರಷ್ಟು ಕುಸಿತ
- ಸ್ಕೈ ಗೋಲ್ಡ್ (Sky Gold): ಶೇ.12.2ರಷ್ಟು ಕುಸಿತ