Foeticide | ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ 'ಭ್ರೂಣ ಹತ್ಯೆ' ಪದವನ್ನೇ ಬಳಿಸಿದ್ದೇಕೆ..? ಇದರ ಹಿಂದಿನ ಅಸಲಿ ಕಾರಣ ಇಲ್ಲಿದೆ ನೋಡಿ!
Foeticide: ಮಹಿಳಾ ಮೀಸಲಾತಿ ಪ್ರಕ್ರಿಯೆಯನ್ನು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ತಡೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಮಸೂದೆಯ ಸೋಲನ್ನು ಹೆಣ್ಣು ಭ್ರೂಣ ಹತ್ಯೆಗೆ ಹೋಲಿಸುವ ಮೂಲಕ ವಿರೋಧ ಪಕ್ಷಗಳ ಮೇಲೆ ನೇರ ಪ್ರಹಾರ ನಡೆಸಿದರು.
ಗರ್ಭದಲ್ಲಿಯೇ ಜೀವವನ್ನು ಚಿವುಟಿ ಹಾಕುವ ಭ್ರೂಣ ಹತ್ಯೆಯಂತೆಯೇ, ವಿರೋಧ ಪಕ್ಷಗಳು ಮಹಿಳೆಯರ ಹಕ್ಕುಗಳನ್ನು ಮೊಳಕೆಯಲ್ಲೇ ಕಿತ್ತುಹಾಕಿವೆ ಎಂದು ಮೋದಿ ಆರೋಪಿಸಿದರು.
ಶುಕ್ರವಾರ ಲೋಕಸಭೆಯಲ್ಲಿ ನಡೆದ ಮತದಾನದಲ್ಲಿ ನಾರಿ ಶಕ್ತಿ ವಂದನ ಮಸೂದೆಯು ಸೋಲನುಭವಿಸಿತು. ಇದು ಕಳೆದ 12 ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ಎದುರಾದ ಮೊದಲ ಶಾಸಕಾಂಗ ಸೋಲಾಗಿದೆ. ಮಸೂದೆಯನ್ನು ಸೋಲಿಸಿದ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಸಮಾಜವಾದಿ ಪಕ್ಷಗಳನ್ನು (ಎಸ್‌ಪಿ) ಹೆಸರಿಸಿದ ಮೋದಿ, ಇವು ಮಹಿಳಾ ವಿರೋಧಿ ಪಕ್ಷಗಳು ಎಂದು ಟೀಕಿಸಿದರು. 21ನೇ ಶತಮಾನದ ಭಾರತದ ಮಹಿಳೆಯರಿಗೆ ಹೊಸ ಅವಕಾಶಗಳನ್ನು ನೀಡುವ ಈ ಪವಿತ್ರ ಪ್ರಯತ್ನವನ್ನು ವಿರೋಧ ಪಕ್ಷಗಳು ಸಂವಿಧಾನ ಮತ್ತು ದೇಶದ ಮಹಿಳೆಯರ ವಿರುದ್ಧ ಮಾಡಿದ ಅಪರಾಧ ಎಂದು ಕರೆದರು.
ಭ್ರೂಣ ಹತ್ಯೆ ಪದಬಳಕೆಯ ಹಿಂದಿನ ತಂತ್ರ
ಪ್ರಧಾನಿ ಮೋದಿ ಈ ಪದವನ್ನೇ ಬಳಸಲು ಪ್ರಮುಖ ಕಾರಣವೆಂದರೆ, ಅದು ದೇಶದ ಮಹಿಳೆಯರಿಗೆ ನೀಡುವ ಸ್ಪಷ್ಟ ಮತ್ತು ಭಾವನಾತ್ಮಕ ಸಂದೇಶ. ಸರ್ಕಾರದ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯು ದೇಶದ ಲಿಂಗ ಅನುಪಾತವನ್ನು 918 ರಿಂದ 930 ಕ್ಕೆ ಸುಧಾರಿಸುವಲ್ಲಿ ಯಶಸ್ವಿಯಾಗಿದೆ. ಇದೇ ತರ್ಕವನ್ನು ಬಳಸಿ, ಬಿಜೆಪಿ ಮಹಿಳೆಯರನ್ನು ಒಂದು ಪ್ರತ್ಯೇಕ ಮತ್ತು ಪ್ರಬಲ ಮತದಾರರ ಗುಂಪಾಗಿ ರೂಪಿಸಿದೆ. ಸಂಕೀರ್ಣವಾದ ಕಾನೂನು ವಿವರಣೆಗಳಿಗಿಂತ ಭ್ರೂಣ ಹತ್ಯೆ ಎಂಬ ಪದವು ವಿರೋಧ ಪಕ್ಷಗಳನ್ನು ಭೀಕರ ಅಪರಾಧದೊಂದಿಗೆ ಜೋಡಿಸಲು ಮತ್ತು ಜನ ಸಾಮಾನ್ಯರಿಗೆ ಸುಲಭವಾಗಿ ತಲುಪಲು ಬಿಜೆಪಿಗೆ ನೆರವಾಗುತ್ತದೆ.
ಚುನಾವಣಾ ಲೆಕ್ಕಾಚಾರ ಮತ್ತು ಪ್ರತಿಪಕ್ಷಗಳ ವಾದ
ವಿರೋಧ ಪಕ್ಷಗಳು ಈ ಮಸೂದೆಯನ್ನು ಹಿಂಬಾಗಿಲಿನ ಮೂಲಕ ಕ್ಷೇತ್ರ ಪುನರ್ವಿಂಗಡಣೆ ಮಾಡುವ ಪ್ರಯತ್ನ ಎಂದು ಕರೆದಿದ್ದು, ಪ್ರಧಾನಿ ಮೋದಿ ಈ ವಾದವನ್ನು ತಳ್ಳಿಹಾಕಿದ್ದು, ಮಸೂದೆಯು ಕೇವಲ ಮಹಿಳೆಯರ ಸಬಲೀಕರಣದ ಉದ್ದೇಶ ಹೊಂದಿತ್ತು ಎಂದು ಪ್ರತಿಪಾದಿಸಿದ್ದಾರೆ. ಮುಂಬರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಟಿಎಂಸಿ ಮತ್ತು ಡಿಎಂಕೆ ವಿರುದ್ಧ ಈ ವಿಷಯವನ್ನು ಪ್ರಬಲ ಅಸ್ತ್ರವಾಗಿ ಬಳಸಲು ಬಿಜೆಪಿ ಸಜ್ಜಾಗಿದೆ. 2027ರ ಉತ್ತರ ಪ್ರದೇಶ ಚುನಾವಣೆಗೂ ಸಮಾಜವಾದಿ ಪಕ್ಷದ ವಿರುದ್ಧ ಇದೇ ಸಂದೇಶವನ್ನು ಕೊಂಡೊಯ್ಯಲು ಪಕ್ಷ ನಿರ್ಧರಿಸಿದೆ(ಏಜೆನ್ಸೀಸ್).