ಅಮೆರಿಕ-ಇರಾನ್ ನಡುವೆ ಕದನವಿರಾಮ ಏರ್ಪಟ್ಟಿದ್ದರೂ ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇಸ್ರೇಲ್ ಲೆಬನಾನ್ ಮೇಲೆ ಇತ್ತೀಚೆಗೆ ನಡೆಸಿರುವ ಬಾಂಬ್ ದಾಳಿಯಲ್ಲಿ 246 ಜನರು ಬಲಿಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಲೆಬನಾನ್ ಕೂಡ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಲೆಬನಾನ್ ಮೇಲೆ ಇಸ್ರೇಲ್ ಮಾಡಿರುವ ದಾಳಿಯನ್ನು ಖಂಡಿಸಿ ಇರಾನ್ ಮತ್ತೆ ಹೊಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ತಡೆಯೊಡ್ಡಿದ್ದು, ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ. ಲೆಬನಾನ್ ಮೇಲಿನ ದಾಳಿ ನಿಲ್ಲಿಸದಿದ್ದರೆ ಕದನವಿರಾಮ ಸಂಬಂಧಿತ ಮಾತುಕತೆಗಳು ಫಲಪ್ರದವಾಗುವುದಿಲ್ಲ ಹಾಗೂ ಮತ್ತೆ ಕದನ ಆರಂಭವಾದರೆ ಅದಕ್ಕೆ ಅಮೆರಿಕ ಮತ್ತು ಇಸ್ರೇಲ್ ನೇರ ಹೊಣೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಅಷ್ಟಕ್ಕೂ, ಇಸ್ರೇಲ್ ಮತ್ತು ಲೆಬನಾನ್ ನಡುವೆ ಯಾಕೆ ಈ ಪರಿ ವೈರತ್ವವಿದೆ, ಈ ಸಂಘರ್ಷ ಯಾವುದಕ್ಕಾಗಿ, ಇದರ ಪರಿಣಾಮಗಳೇನು? ಇಲ್ಲಿದೆ ವಿವರ.
ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷ ಇಂದು-ನಿನ್ನೆಯದೇನಲ್ಲ. ಇದು ದಶಕಗಳ ಇತಿಹಾಸವನ್ನು ಹೊಂದಿದೆ. ಅಲ್ಲದೆ, ಇದು ಕೇವಲ ಎರಡು ದೇಶಗಳ ನಡುವಿನ ಗಡಿ ವಿವಾದವಲ್ಲ, ಬದಲಿಗೆ ಧರ್ಮ, ರಾಜಕೀಯ ಮತ್ತು ಪ್ರಾದೇಶಿಕ ಶಕ್ತಿಗಳ ನಡುವಿನ ಸಂಕೀರ್ಣ ಸಂಘರ್ಷವಾಗಿದೆ. ಲೆಬನಾನ್ ಸರ್ಕಾರವು ದುರ್ಬಲವಾಗಿದ್ದು, ದೇಶದ ಸೇನೆಗಿಂತ ಹಿಜ್ಬುಲ್ಲಾ ಸಂಘಟನೆಯೇ ಹೆಚ್ಚು ಶಕ್ತಿಯುತವಾಗಿದೆ. ಇದು ಇಸ್ರೇಲ್ ಜೊತೆಗಿನ ಶಾಂತಿ ಮಾತುಕತೆಗೆ ದೊಡ್ಡ ಅಡ್ಡಿಯಾಗಿದೆ.
1948ರಲ್ಲಿ ಇಸ್ರೇಲ್ ದೇಶ ಸ್ಥಾಪನೆಯಾದಾಗ ನಡೆದ ಯುದ್ಧದ ನಂತರ 7.5 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಅವರ ಮನೆಗಳಿಂದ ಹೊರಹಾಕಲಾಯಿತು. ಇದನ್ನು ಪ್ಯಾಲೆಸ್ತೀನಿಯರು ‘ನಕ್ಬಾ’ (ದುರಂತ) ಎಂದು ಕರೆಯುತ್ತಾರೆ. ಈ ಪ್ಯಾಲೆಸ್ತೀನ್ ನಿರಾಶ್ರಿತರು ಲೆಬನಾನ್ಗೆ ವಲಸೆ ಬಂದರು. ಇದು ಲೆಬನಾನ್ನ ಜನಸಂಖ್ಯಾ ಸಮತೋಲನವನ್ನು ಬದಲಿಸಿತು. ಅಂದು ಹೊರಬಂದವರು ಮತ್ತು ಅವರ ಮುಂದಿನ ಪೀಳಿಗೆಯನ್ನು ಸೇರಿ ಇಂದು ಜಗತ್ತಿನಾದ್ಯಂತ 80 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಿರಾಶ್ರಿತರಿದ್ದಾರೆ. ಇವರು ಹೆಚ್ಚಾಗಿ ಲೆಬನಾನ್, ಜೋರ್ಡಾನ್, ಸಿರಿಯಾ ಮತ್ತು ಗಾಜಾ ಪಟ್ಟಿಗಳ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
1960 ಮತ್ತು 70ರ ದಶಕದಲ್ಲಿ ಪ್ಯಾಲೆಸ್ತೀನ್ ವಿಮೋಚನಾ ಸಂಸ್ಥೆ (ಪಿಎಲ್ಒ) ಲೆಬನಾನ್ ಅನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡು ಇಸ್ರೇಲ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿತು. ಪ್ಯಾಲೆಸ್ತೀನ್ ವಿಮೋಚನಾ ಸಂಸ್ಥೆಯ ದಾಳಿಗಳನ್ನು ತಡೆಯಲು ಇಸ್ರೇಲ್ ಲೆಬನಾನ್ ಮೇಲೆ 1982ರಲ್ಲಿ ಪೂರ್ಣ ಪ್ರಮಾಣದ ಆಕ್ರಮಣ ಮಾಡಿತು ಮತ್ತು ಬೈರೂತ್ವರೆಗೆ ನುಗ್ಗಿತು. ಇಸ್ರೇಲ್ನ 1982ರ ಆಕ್ರಮಣದ ವಿರುದ್ಧ ಹೋರಾಡಲು ಲೆಬನಾನ್ನ ಶಿಯಾ ಮುಸ್ಲಿಂ ಪಂಗಡದಿಂದ ‘ಹಿಜ್ಬುಲ್ಲಾ’ ಎಂಬ ಸಂಘಟನೆ ಹುಟ್ಟಿಕೊಂಡಿತು. ಈ ಸಂಘಟನೆಗೆ ಇರಾನ್ ಬೆಂಬಲ ನೀಡುತ್ತಿದೆ. ಇಸ್ರೇಲ್ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದು ಹಿಜ್ಬುಲ್ಲಾ ಸಂಘಟನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಪ್ರಸಕ್ತ, ಹಿಜ್ಬುಲ್ಲಾ ಕೇವಲ ಒಂದು ಸಶಸ್ತ್ರ ಗುಂಪು ಮಾತ್ರವಲ್ಲ, ಅದು ಲೆಬನಾನ್ ರಾಜಕೀಯದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದಿದೆ. ಇತ್ತಿಚಿನ ದಾಳಿಗಳಲ್ಲಿ, ಲಿಟಾನಿ ನದಿಗೆ ಅಡ್ಡಲಾಗಿರುವ ಪ್ರಮುಖ ಸೇತುವೆಗಳನ್ನು ಇಸ್ರೇಲ್ ಧ್ವಂಸಗೊಳಿಸಿದೆ, ಇದರಿಂದ ದಕ್ಷಿಣ ಲೆಬನಾನ್ ದೇಶದ ಉಳಿದ ಭಾಗದಿಂದ ಸಂಪರ್ಕ ಕಳೆದುಕೊಂಡಿದೆ. ಇಸ್ರೇಲ್ನ ದಾಳಿಗೆ ಪ್ರತಿಯಾಗಿ ಹಿಜ್ಬುಲ್ಲಾ ಸಾವಿರಾರು ರಾಕೆಟ್ಗಳನ್ನು ಇಸ್ರೇಲ್ ನಗರಗಳ ಮೇಲೆ ಉಡಾಯಿಸುತ್ತಿದೆ.
ಲೆಬನಾನ್ನಲ್ಲಿನ ಸಮಸ್ಯೆ
ಲೆಬನಾನ್ನಲ್ಲಿರುವ ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಪೌರತ್ವವಿಲ್ಲ, ಅವರು ಅನೇಕ ಸರ್ಕಾರಿ ಉದ್ಯೋಗಗಳನ್ನು ಮಾಡುವಂತಿಲ್ಲ ಮತ್ತು ಆಸ್ತಿ ಹೊಂದುವಂತಿಲ್ಲ. ಇದು ಆ ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸ್ಥಿರತೆಗೆ ಕಾರಣವಾಗಿದೆ. ‘ನಮ್ಮನ್ನು ಹೊರಹಾಕಲಾದ ನಮ್ಮ ಮೂಲ ಮನೆಗಳಿಗೆ ಮರಳಲು ಅವಕಾಶ ನೀಡಬೇಕು’ ಎಂಬುದು ಇವರ ಪ್ರಮುಖ ಬೇಡಿಕೆ. ಆದರೆ ಇಸ್ರೇಲ್ ಇದನ್ನು ಒಪ್ಪುತ್ತಿಲ್ಲ, ಏಕೆಂದರೆ ಇದು ಇಸ್ರೇಲ್ನ ಯಹೂದಿ ಬಹುಸಂಖ್ಯಾತ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂಬುದು ಅವರ ವಾದ.
ತೀವ್ರಗೊಂಡ ಉದ್ವಿಗ್ನತೆ
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ 2026ರ ಮಾರ್ಚ್ 2ರಿಂದ ತೀವ್ರ ಸ್ವರೂಪದ ಯುದ್ಧ ನಡೆಯುತ್ತಿದೆ. ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್ನ ಮೇಲೆ ದಾಳಿಗಳನ್ನು ಹೆಚ್ಚಿಸಿದೆ. ಏಪ್ರಿಲ್ 8ರಂದು ಇಸ್ರೇಲ್ ಲೆಬನಾನ್ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ 246 ಜನರು ಮೃತಪಟ್ಟಿದ್ದಾರೆ. ಮೊದಲಿಗೆ, ಕೇವಲ ಗಡಿ ಭಾಗಕ್ಕೆ ಸೀಮಿತವಾಗಿದ್ದ ದಾಳಿಗಳು ಈಗ ಲೆಬನಾನ್ ರಾಜಧಾನಿ ಬೈರೂತ್ನ ಹೃದಯಭಾಗಕ್ಕೂ ತಲುಪಿವೆ. ಫೆಬ್ರವರಿ 28ರಂದು ಇರಾನ್ ಮತ್ತು ಇಸ್ರೇಲ್ ನಡುವೆ ನೇರ ಸಂಘರ್ಷ ಆರಂಭವಾದದ್ದು ಈ ಲೆಬನಾನ್ ಯುದ್ಧ ಮತ್ತಷ್ಟು ತೀವ್ರಗೊಳ್ಳಲು ಕಾರಣವಾಯಿತು. ಇರಾನ್ ಹಿಜ್ಬುಲ್ಲಾಗೆ ಆರ್ಥಿಕ ಮತ್ತು ಶಸ್ತ್ರಾಸ್ತ್ರ ಬೆಂಬಲವನ್ನು ಮುಂದುವರಿಸಿದೆ. ವಿಶ್ವಸಂಸ್ಥೆ ಮತ್ತು ಅಮೆರಿಕ ಶಾಂತಿ ಮಾತುಕತೆಗೆ ಪ್ರಯತ್ನಿಸುತ್ತಿವೆಯಾದರೂ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಿಜ್ಬುಲ್ಲಾ ಸಂಪೂರ್ಣವಾಗಿ ನಿಶ್ಶಸ್ತ್ರವಾಗುವವರೆಗೆ ಕದನ ವಿರಾಮ ಇಲ್ಲ ಎಂದು ಘೊಷಿಸಿದ್ದಾರೆ. ಮತ್ತೊಂದೆಡೆ ಹಿಜ್ಬುಲ್ಲಾ ನಾಯಕ ನಯೀಮ್ ಖಾಸಿಮ್ ಕೊನೆಯ ಉಸಿರಿರುವವರೆಗೆ ಹೋರಾಡುವುದಾಗಿ ಹೇಳಿದ್ದಾರೆ. ಆದ್ದರಿಂದ, ಈ ಸಂಘರ್ಷವು ಕೇವಲ ಎರಡು ದೇಶಗಳ ನಡುವಿನ ಹೋರಾಟವಾಗಿ ಉಳಿಯದೆ ಇಡೀ ಮಧ್ಯಪ್ರಾಚ್ಯದ ಶಾಂತಿಗೆ ದೊಡ್ಡ ಸವಾಲಾಗಿದೆ.
ಮಾನವೀಯ ಬಿಕ್ಕಟ್ಟು
ಯುದ್ಧದ ಕಾರಣದಿಂದ ಲೆಬನಾನ್ನ 10 ಲಕ್ಷಕ್ಕೂ ಹೆಚ್ಚು ಜನ (ದೇಶದ 20% ಜನಸಂಖ್ಯೆ) ತಮ್ಮ ಮನೆಗಳನ್ನು ಬಿಟ್ಟು ನಿರಾಶ್ರಿತರಾಗಿದ್ದಾರೆ. ಲೆಬನಾನ್ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಈಗಿನ ಯುದ್ಧವು ಅಲ್ಲಿನ ಆಸ್ಪತ್ರೆ ಮತ್ತು ಇಂಧನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದ್ದು, ಆಹಾರ ಮತ್ತು ಔಷಧದ ಕೊರತೆ ತೀವ್ರವಾಗಿ ಕಾಡುತ್ತಿದೆ.
ಹಿಜ್ಬುಲ್ಲಾ ಹೋರಾಟ
ಹಿಜ್ಬುಲ್ಲಾ ಸಿದ್ಧಾಂತದ ಪ್ರಕಾರ ಇಸ್ರೇಲ್ ಒಂದು ಅಕ್ರಮ ದೇಶ. ಅದನ್ನು ಈ ಭೂಭಾಗದಿಂದ ಸಂಪೂರ್ಣವಾಗಿ ತೊಲಗಿಸಿ ಪ್ಯಾಲೆಸ್ತೀನ್ ಅನ್ನು ಮರಳಿ ಸ್ಥಾಪಿಸುವುದು ಅವರ ಅಂತಿಮ ಗುರಿ. ಪ್ಯಾಲೆಸ್ತೀನಿಯರ ಹೋರಾಟಕ್ಕೆ ಬೆಂಬಲ ನೀಡುವುದು ಮತ್ತು ಇಸ್ರೇಲ್ ಮೇಲೆ ನಿರಂತರ ಒತ್ತಡ ಹೇರುವುದು ಹಿಜ್ಬುಲ್ಲಾ ಉದ್ದೇಶ. 2023ರ ಗಾಜಾ ಯುದ್ಧದ ನಂತರ, ಇಸ್ರೇಲ್ ಅನ್ನು ದುರ್ಬಲಗೊಳಿಸಲು ಹಿಜ್ಬುಲ್ಲಾ ಗಡಿಯಲ್ಲಿ ಸಂಘರ್ಷಕ್ಕಿಳಿದಿದೆ. ಇರಾನ್ ಬೆಂಬಲಿತ ಸಂಘಟನೆಯಾದ ಹಿಜ್ಬುಲ್ಲಾ, ಇಡೀ ಮಧ್ಯಪ್ರಾಚ್ಯದಲ್ಲಿ ಪಾಶ್ಚಿಮಾತ್ಯ ದೇಶಗಳ (ಮುಖ್ಯವಾಗಿ ಅಮೆರಿಕ) ಪ್ರಭಾವವನ್ನು ಕಡಿಮೆ ಮಾಡಲು ಹೋರಾಡುತ್ತಿದೆ. ಅಲ್ಲದೆ, ಲೆಬನಾನ್ನ ಯಾವುದೇ ಭೂಭಾಗ ಇಸ್ರೇಲ್ ವಶದಲ್ಲಿ ಇರಬಾರದು ಎಂಬುದು ಅದರ ಉದ್ದೇಶ. ಇಸ್ರೇಲ್ ತನ್ನ ಉತ್ತರದ ಗಡಿಯಿಂದ ಹಿಜ್ಬುಲ್ಲಾವನ್ನು ದೂರ ತಳ್ಳಲು ಪ್ರಯತ್ನಿಸುತ್ತಿದ್ದರೆ, ಹಿಜ್ಬುಲ್ಲಾ ಇಸ್ರೇಲ್ ಮೇಲೆ ನಿರಂತರವಾಗಿ ರಾಕೆಟ್ ದಾಳಿ ನಡೆಸುತ್ತಿದೆ. ಇದರಿಂದ ಲೆಬನಾನ್ನಲ್ಲಿರುವ ಪ್ಯಾಲೆಸ್ತೀನ್ ನಿರಾಶ್ರಿತರು ಮತ್ತು ಅಲ್ಲಿನ ಸ್ಥಳೀಯ ನಿವಾಸಿಗಳು ಎರಡೂ ಕಡೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟಾರೆ, ಪ್ಯಾಲೆಸ್ತೀನ್ ನಿರಾಶ್ರಿತರು ತಮ್ಮ ಭೂಮಿಗಾಗಿ ಹಂಬಲಿಸುತ್ತಿದ್ದರೆ, ಹಿಜ್ಬುಲ್ಲಾ ಇಸ್ರೇಲ್ ಅನ್ನು ಸೋಲಿಸಲು ಮತ್ತು ಇರಾನ್ನ ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡಲು ಆಯುಧ ಹಿಡಿದು ಹೋರಾಡುತ್ತಿದೆ. ಹಿಜ್ಬುಲ್ಲಾದ ಸಶಸ್ತ್ರ ಹೋರಾಟ ಶಾಂತಿಗೆ ಕಂಟಕವೆಂದು ಇಸ್ರೇಲ್ ಅದರ ವಿರುದ್ಧ ಸಮರ ಸಾರಿದೆ.
ಇಸ್ರೇಲ್ನ ಗುರಿ ಏನು?
ದಕ್ಷಿಣ ಲೆಬನಾನ್ನ ಲಿಟಾನಿ ನದಿಯವರೆಗಿನ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಇಸ್ರೇಲ್ನ ಗುರಿಯಾಗಿದೆ. ಆ ಮೂಲಕ ತನ್ನ ಉತ್ತರದ ಗಡಿಭಾಗದ ನಿವಾಸಿಗಳಿಗೆ ರಕ್ಷಣೆ ನೀಡಲು ಅದು ಬಯಸಿದೆ. ಹಿಜ್ಬುಲ್ಲಾ ಸಂಘಟನೆಯ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸುವುದು ಇಸ್ರೇಲ್ನ ಮುಖ್ಯ ಉದ್ದೇಶವಾಗಿದೆ.
ಇಸ್ರೇಲ್ನ ಗುರಿ ಏನು?
ದಕ್ಷಿಣ ಲೆಬನಾನ್ನ ಲಿಟಾನಿ ನದಿಯವರೆಗಿನ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಇಸ್ರೇಲ್ನ ಗುರಿಯಾಗಿದೆ. ಆ ಮೂಲಕ ತನ್ನ ಉತ್ತರದ ಗಡಿಭಾಗದ ನಿವಾಸಿಗಳಿಗೆ ರಕ್ಷಣೆ ನೀಡಲು ಅದು ಬಯಸಿದೆ. ಹಿಜ್ಬುಲ್ಲಾ ಸಂಘಟನೆಯ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸುವುದು ಇಸ್ರೇಲ್ನ ಮುಖ್ಯ ಉದ್ದೇಶವಾಗಿದೆ.
1 ಶೆಬಾ ಫಾಮ್್ಸರ್ ಒಂದು ಸಣ್ಣ ಭೂಭಾಗವಾಗಿದ್ದು, ಇಸ್ರೇಲ್ ಇದನ್ನು ತನ್ನದು ಎಂದು ಪ್ರತಿಪಾದಿಸಿಕೊಂಡು ಬಂದಿದೆ, ಆದರೆ ಲೆಬನಾನ್ ಇದು ತನಗೆ ಸೇರಿದ್ದು ಎಂದು ವಾದಿಸುತ್ತಿದೆ.
2 ಉಭಯ ದೇಶಗಳ ನಡುವೆ ಗಡಿ ವಿವಾದವೂ ಇದೆ. ವಿಶ್ವಸಂಸ್ಥೆ ಗುರುತಿಸಿರುವ ಬ್ಲೂ ಲೈನ್ ಗಡಿಯನ್ನು ಇಸ್ರೇಲ್ ಆಗಾಗ ಉಲ್ಲಂಘಿಸುತ್ತದೆ ಎಂಬುದು ಲೆಬನಾನ್ನ ಗಂಭೀರ ಆರೋಪ. ಇಸ್ರೇಲ್ ಪ್ರಕಾರ, ಲೆಬನಾನ್ ಇರಾನ್ನ ಒಂದು ಪ್ರಾಕ್ಸಿ ನೆಲೆಯಾಗಿದೆ. ಹಿಜ್ಬುಲ್ಲಾ ಮೂಲಕ ಇರಾನ್ ತನ್ನ ಮೇಲೆ ದಾಳಿ ನಡೆಸುತ್ತಿದೆ ಎಂಬುದು ಇಸ್ರೇಲ್ನ ಪ್ರಬಲ ದೂರು.
3 ಸಮುದ್ರ ಗಡಿ ಮತ್ತು ನೈಸರ್ಗಿಕ ಅನಿಲ ಕುರಿತಂತೆಯೂ ಜಟಾಪಟಿಗಳು ನಡೆದುಕೊಂಡು ಬಂದಿವೆ. ಮೆಡಿಟರೇನಿಯನ್ ಸಮುದ್ರದಲ್ಲಿರುವ ನೈಸರ್ಗಿಕ ಅನಿಲ ನಿಕ್ಷೇಪಗಳ ಹಂಚಿಕೆಯ ಬಗ್ಗೆಯೂ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿವೆ.
4 ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ 2023ರ ಗಾಜಾ ಸಂಘರ್ಷದ ನಂತರ, ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿದೆ. ಲೆಬನಾನ್ ಆರ್ಥಿಕವಾಗಿ ಕುಸಿದಿರುವುದರಿಂದ ಅಲ್ಲಿನ ಜನಸಾಮಾನ್ಯರು ಈ ಯುದ್ಧದಿಂದ ಮತ್ತಷ್ಟು ತೊಂದರೆಗೆ ಒಳಗಾಗಿದ್ದಾರೆ.