ಪ್ರಧಾನಿ ಮೋದಿ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್
ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ನಾನು ತಮಿಳು ಭಾಷೆಯನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ತಮಿಳುನಾಡಿನ ಮೇಲೆ ಹಿಂದಿಯನ್ನು ಹೇರುತ್ತಾರೆ ಎಂದು ಡಿಸಿಎಂ ಉದಯನಿಧಿ ಸ್ಟಾಲಿನ್(Udayanidhi Stalin) ವಾಗ್ದಾಳಿ ನಡೆಸಿದ್ದಾರೆ.
ಗುರುವಾರ(ನ. 20) ಚೆನ್ನೈನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಪ್ರಧಾನಿ ಮೋದಿ ಒಂದೆಡೆ ತಮಗೆ ತಮಿಳು ಭಾಷೆಯ ಬಗ್ಗೆ ಕಾಳಜಿ ಇದೆ ಎಂದು ತೋರಿಸುವ ನಾಟಕ ಮಾಡುತ್ತಾರೆ. ಅದೇ ವೇಳೆ ಹಿಂದಿ ಮತ್ತು ಸಂಸ್ಕೃತವನ್ನು ಹೇರುವ ಮೂಲಕ ತಮಿಳು ವಿದ್ಯಾರ್ಥಿಗಳು ತಮಿಳು ಕಲಿಯುವುದನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿಯವರಿಗೆ ತಮಿಳು ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಶಿಕ್ಷಣ ಇಲಾಖೆಗೆ ಬಾಕಿ ಇರುವ 2,500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ತ್ರಿಭಾಷಾ ನೀತಿಯನ್ನು ಯಾಕೆ ಕಡ್ಡಾಯಗೊಳಿಸುತ್ತಿದ್ದಾರೆ?, 10 ವರ್ಷಗಳಲ್ಲಿ ತಮಿಳು ಭಾಷೆಯ ಅಭಿವೃದ್ಧಿಗೆ ಕೇವಲ 150 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಆದರೆ ಸಂಸ್ಕೃತಕ್ಕೆ 2400 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಮುನ್ನ ಮೋದಿ ಅವರು ತಮಿಳುನಾಡಿಗೆ ಪ್ರಚಾರಕ್ಕಾಗಿ ಸುಮಾರು ಎಂಟು ಬಾರಿ ಭೇಟಿ ನೀಡಿದ್ದರು. ಆದರೆ ಜನರು ಅವರಿಗೆ ಪ್ರತಿಯಾಗಿ ಚುನಾವಣೆಯಲ್ಲಿ ಅವರಿಗೆ ಶೂನ್ಯವನ್ನು ನೀಡಿದ್ದರು. ಈಗ ಮುಂದಿನ ವರ್ಷ ಚುನಾವಣೆ ನಡೆಯಲಿರುವುದರಿಂದ ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).