Independence Day (ಚಿತ್ರ X)
ನವದೆಹಲಿ: ಪ್ರತಿ ವರ್ಷ ಆಗಸ್ಟ್ 15ರಂದು ಭಾರತವು ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು (
ಅತ್ಯಂತ ಸಡಗರ ಹಾಗೂ ದೇಶಭಕ್ತಿಯಿಂದ ಆಚರಿಸುತ್ತದೆ. ಈ ವರ್ಷ ಆಗಸ್ಟ್ 15ರಂದು ನಮ್ಮ ದೇಶವು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. 1947ರ ಆಗಸ್ಟ್ 15 ರಂದು ಬ್ರಿಟಿಷರ ಸಂಕೋಲೆಯಿಂದ ಮುಕ್ತಿ ಪಡೆದ ಈ ದಿನಕ್ಕೆ ದೇಶದ ಇತಿಹಾಸದಲ್ಲಿ ಅತ್ಯಂತ ವಿಶೇಷ ಹಾಗೂ ಮಹತ್ವದ ಸ್ಥಾನವಿದೆ. ಆದರೆ, ಈ ಸಂಭ್ರಮಾಚರಣೆಗೆ ದೇಶದ ರಾಜಧಾನಿ ನವದೆಹಲಿಯಲ್ಲಿರುವ ಐತಿಹಾಸಿಕ ಕೆಂಪು ಕೋಟೆ (Red Fort) ಮುಖ್ಯ ಕೇಂದ್ರ ಬಿಂದುವಾಗುವುದು ಏಕೆ ಎಂಬುದು ಇದೀಗ ಕುತೂಹಲಕಾರಿ ವಿಚಾರ.
ಕೆಂಪು ಕೋಟೆಯ ಮಹತ್ವ ಮತ್ತು ಇತಿಹಾಸ
ಸ್ವಾತಂತ್ರ್ಯ ದಿನಾಚರಣೆಯಂದು ಭಾರತದ ಪ್ರಧಾನ ಮಂತ್ರಿಯವರು ಐತಿಹಾಸಿಕ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಪ್ರಕ್ರಿಯೆಯು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತ್ಯಾಗ ಮಾಡಿದ ಮಹಾನ್ ದೇಶಭಕ್ತರು ಹಾಗೂ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಸ್ಮರಿಸುತ್ತದೆ.
1947ರಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಕೆಂಪು ಕೋಟೆಯ ಮೇಲೆ ಪ್ರಥಮ ಬಾರಿಗೆ ರಾಷ್ಟ್ರಧ್ವಜ ಹಾರಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಐತಿಹಾಸಿಕ ಕ್ಷಣದ ನೆನಪಿಗಾಗಿ ಅಂದಿನಿಂದ ಇಂದಿನವರೆಗೂ ಪ್ರತಿಯೊಬ್ಬ ಪ್ರಧಾನಿಯೂ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ಮೇಲೆಯೇ ತ್ರಿವರ್ಣ ಧ್ವಜವನ್ನು ಹಾರಿಸುವ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಶಕ್ತಿ ಮತ್ತು ಸೌಂದರ್ಯದ ಸಂಕೇತ
ಕೆಂಪು ಕೋಟೆಯ ಇತಿಹಾಸವು ಹಲವು ಶತಮಾನಗಳಷ್ಟು ಹಳೆಯದಾಗಿದೆ. ತಾಜ್ಮಹಲ್ ನಿರ್ಮಿಸಿದ ಮೊಘಲ್ ಚಕ್ರವರ್ತಿ ಶಹಜಹಾನ್ 17ನೇ ಶತಮಾನದಲ್ಲಿ ಈ ಭವ್ಯ ಕೋಟೆಯನ್ನು ನಿರ್ಮಿಸಿದನು. ಕೋಟೆಯ ರಕ್ಷಣೆ ಮತ್ತು ರಾಜನ ಶಕ್ತಿಯನ್ನು ಪ್ರದರ್ಶಿಸಲು ಬೃಹತ್ ಕೆಂಪು ಕಲ್ಲುಗಳನ್ನು ಬಳಸಿ ಇದನ್ನು ಕಟ್ಟಿದ್ದರಿಂದ ಇದಕ್ಕೆ 'ಕೆಂಪು ಕೋಟೆ' ಎಂಬ ಹೆಸರು ಬಂತು.
ಆದಾಗ್ಯೂ, ಮೊಘಲ್ ರಾಜಮನೆತನದ ನಿವಾಸವಾಗಿದ್ದ ಈ ಕೋಟೆಯಲ್ಲಿ ಸುಂದರ ಉದ್ಯಾನವನ ಹಾಗೂ ರಾಜಮನೆಯನದ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆಗಳಿದ್ದವು. ಅಲ್ಲದೆ, ಪ್ರಮುಖ ರಾಜಕೀಯ ಸಭೆಗಳು ಮತ್ತು ಅದ್ಧೂರಿ ಸಮಾರಂಭಗಳು ಇಲ್ಲಿಯೇ ನಡೆಯುತ್ತಿದ್ದವು.
ವಿಶಾಲವಾದ ಕೆಂಪು ಕಲ್ಲಿನ ಗೋಡೆಗಳು ಮತ್ತು ನಯನಮನೋಹರ ವಾಸ್ತುಶಿಲ್ಪವನ್ನು ಹೊಂದಿರುವ ಈ ಕೋಟೆಯು ದೇಶದ ಪ್ರಮುಖ ಸಂಕೇತವಾಗಿದೆ. ಧ್ವಜಾರೋಹಣ ಪ್ರಕ್ರಿಯೆ, ಸೇನಾ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕೆಂಪು ಕೋಟೆಯ ಭವ್ಯ ಹಿನ್ನೆಲೆಯಲ್ಲಿ ಜರುಗಲಿದ್ದು, ಭಾರತದ ರಾಷ್ಟ್ರಪತಿ, ಪ್ರಮುಖ ಗಣ್ಯರು ಹಾಗೂ ಸಾವಿರಾರು ನಾಗರಿಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಮೂಲಕ ಕೆಂಪು ಕೋಟೆಯು ಕೇವಲ ಒಂದು ಸ್ಮಾರಕವಾಗಿರದೆ, ಭಾರತದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ಜಾಗೃತ ಸಂಕೇತವಾಗಿ ನಿಂತಿದೆ (ಏಜೆನ್ಸೀಸ್).