- ಕೆಲವೇ ವಾರಗಳ ಹಿಂದೆಯಷ್ಟೇ ದೇಶದಲ್ಲಿ ಬರಗಾಲದ ಭೀತಿ
- ದುರ್ಬಲಗೊಂಡಿದ್ದ ಮುಂಗಾರು ದಿಢೀರ್ ಚುರುಕು
- ದೇಶದಲ್ಲಿ ಜಲಪ್ರಳಯ, ವಿಪರೀತ ಮಳೆಗೆ ಜನ ತತ್ತರ
El Nino: ಕೆಲವೇ ವಾರಗಳ ಹಿಂದೆಯಷ್ಟೇ ದೇಶದಲ್ಲಿ ಬರಗಾಲದ ಭೀತಿ ಎದುರಾಗಿ, ಅನ್ನದಾತರು ಮಳೆ ಕಾಣದೆ ಅಕ್ಷರಶಃ ಕಂಗಾಲಾಗಿದ್ದರು. ಆದರೀಗ, ದುರ್ಬಲಗೊಂಡಿದ್ದ ಮುಂಗಾರು ದಿಢೀರ್ ಚುರುಕುಗೊಂಡಿದ್ದು, ‘ಎಲ್ ನಿನೋ’ ಪ್ರಭಾವವನ್ನೇ ಮೆಟ್ಟಿ ನಿಲ್ಲಿಸಿರೋದು ಸದ್ಯ ದೇಶದಲ್ಲಿ ಶೇ.42ರಷ್ಟು ಅಧಿಕ ಮಳೆಗೆ ಕಾರಣವಾಗಿದೆ.
ಈ ಬಾರಿ ಭಾರತದಲ್ಲಿ ಮುಂಗಾರು ಮಳೆ ತೀರ ಕ್ಷೀಣಿಸಲಿದೆ ಮತ್ತು ವಾಡಿಕೆಗಿಂತ ಇನ್ನಷ್ಟು ತಡವಾಗಿ ವರುಣನ ಆಗಮನ ತಡವಾಗಲಿದೆ ಎಂದು ಹವಾಮಾನ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಜೂನ್ ತಿಂಗಳಿನಲ್ಲಿ ಮುಂಗಾರು ಮಾರುತಗಳು ಮುಂದೆ ಚಲಿಸದೆ ಸ್ಥಗಿತಗೊಂಡ ಪರಿಣಾಮ ಉತ್ತರ ಭಾರತ ಮತ್ತು ದಕ್ಷಿಣದ ಕರಾವಳಿ ಭಾಗಗಳಲ್ಲಿಯೇ ಮಳೆ ಸುರಿಯಲಿಲ್ಲ. ದಶಕಗಳಲ್ಲೇ ಅತ್ಯಂತ ಒಣ ಹವೆಯ ಜೂನ್ ತಿಂಗಳನ್ನು ಭಾರತ ಎದುರಿಸಿತು. ಆದರೀಗ, ಜುಲೈನಲ್ಲಿ ಹವಾಮಾನ ವೈಪರೀತ್ಯ ಜಲಪ್ರಳಯಕ್ಕೆ ಸಾಕ್ಷಿಯಾಗಿರುವುದು ನಿಜಕ್ಕೂ ದೊಡ್ಡ ಅಚ್ಚರಿ ಹಾಗೂ ಗೊಂದಲ ಸೃಷ್ಟಿಸಿದೆ.
ಜುಲೈ ತಿಂಗಳ ಆರಂಭದಿಂದಲೇ ದೇಶದ ಹವಾಮಾನದಲ್ಲಿ ಇಡೀ ಚಿತ್ರಣವೇ ಬದಲಾಗಿದೆ. ಮುಂಗಾರು ಮಾರುತಗಳು ದೇಶವ್ಯಾಪಿ ಆವರಿಸಿಕೊಂಡಿದ್ದು, ದಾಖಲೆ ಮಟ್ಟದಲ್ಲಿ ಮಳೆ ಸುರಿಯುತ್ತಿದೆ. ಅಸ್ಸಾಂ ಮತ್ತು ಮುಂಬೈ ಸೇರಿದಂತೆ ಕೆಲವೆಡೆ ವರುಣಾರ್ಭಟದಿಂದ ಜಲಪ್ರಳಯ ಉಂಟಾಗಿದೆ. ಮಳೆಯ ಅವಾಂತರದಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜುಲೈನಲ್ಲಿ ಭಾರತಕ್ಕೆ ಎಷ್ಟು ಮಳೆಯಾಗಿದೆ?
ಜೂನ್ ತಿಂಗಳಲ್ಲಿ ಕೊರತೆಯನ್ನು ನೀಗಿಸಿರುವ ಜುಲೈ ಮಳೆ, ದೇಶದ ಸರಾಸರಿ ಮಳೆಯ ಪ್ರಮಾಣವನ್ನು ಅಧಿಕ ಮಟ್ಟಕ್ಕೆ ಕೊಂಡೊಯ್ದಿದೆ. ಮುಂಬೈನ ಕೊಲಾಬಾ ವೀಕ್ಷಣಾಲಯವು, ಜುಲೈ 1ರಿಂದ 7ರ ನಡುವೆ ಬರೋಬ್ಬರಿ 791 ಮಿಮೀ ಮಳೆಯನ್ನು ದಾಖಲಿಸಿದೆ. ಇದು ಇಡೀ ಜುಲೈ ತಿಂಗಳ ಸರಾಸರಿ ಪ್ರಮಾಣವನ್ನು (768.5 ಮಿಮೀ) ಕೇವಲ ಏಳೇ ದಿನಗಳಲ್ಲಿ ತಲುಪಿದೆ. ಇನ್ನು ಸಾಂತಾಕ್ರೂಜ್‌ನಲ್ಲಿ 879 ಮಿಮೀ ಮಳೆಯಾಗಿದ್ದು, ಮಾಸಿಕ ಸರಾಸರಿಗಿಂತ (919.9 ಮಿಮೀ) ಕೊಂಚ ಹಿಂದುಳಿದಿದೆ.
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈ 1ರಿಂದ ಜು.8ರ ನಡುವೆ 39.9 ಮಿಮೀ ಮಳೆಯಾಗಿದ್ದು, ಇದು ಸಾಮಾನ್ಯಕ್ಕಿಂತ ಶೇ.23ರಷ್ಟು ಹೆಚ್ಚಾಗಿದೆ. ಮಧ್ಯ ಮತ್ತು ದಕ್ಷಿಣ ಭಾರತದ ಪರ್ಯಾಯ ದ್ವೀಪಗಳಲ್ಲೂ ಜೂನ್ ಕೊರತೆಯ ನಂತರ ಭಾರಿ ಮಳೆಯಾಗುತ್ತಿರುವುದು ಗಮನಾರ್ಹ. ಜು.1ರಿಂದ 8ರ ಅವಧಿಯಲ್ಲಿ ಭಾರತವು ಒಟ್ಟಾರೆಯಾಗಿ ಸಾಮಾನ್ಯಕ್ಕಿಂತ ಶೇ.42ರಷ್ಟು ಹೆಚ್ಚು ಮಳೆಯನ್ನು ಸ್ವೀಕರಿಸಿದೆ.
ಎಲ್ ನಿನೋ ಎಫೆಕ್ಟ್ ಮಧ್ಯೆ ಇಷ್ಟೊಂದು ಮಳೆಗೆ ಕಾರಣ?
ಸಾಮಾನ್ಯವಾಗಿ ಎಲ್ ನಿನೋ ಮುಂಗಾರನ್ನು ದುರ್ಬಲಗೊಳಿಸುತ್ತದೆ. ಹಾಗಿದ್ದರೂ ನಿರೀಕ್ಷೆ ಮೀರಿ ಇಷ್ಟೊಂದು ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದು ಹೇಗೆ? ಎಂಬ ಪ್ರಶ್ನೆ ಮೂಡಿರುವುದು ಸಹಜ. ವಿಜ್ಞಾನಿಗಳ ಪ್ರಕಾರ, ಈ ವಿಷಯದಲ್ಲಿ ಗೊಂದಲ ಪಡುವ ಅಗತ್ಯವಿಲ್ಲ. ಇದಕ್ಕೆ ಸೂಕ್ತ ಕಾರಣಗಳು ಕೆಳಕಂಡಂತಿವೆ ಗಮನಿಸಿ.
ಜಾಗತಿಕ ತಾಪಮಾನ (Global Warming)
ಎಲ್ ನಿನೋ ಕೇವಲ ಮಳೆ ಬೀಳುವ ಸಮಯ ಮತ್ತು ಮಳೆ ತರುವ ಮಾರುತಗಳು ಎಷ್ಟು ಬಾರಿ ಸೃಷ್ಟಿಯಾಗುತ್ತವೆ ಎಂಬುದನ್ನು ನಿರ್ಧರಿಸುತ್ತದೆಯೇ ಹೊರತು, ಮಳೆಯ ತೀವ್ರತೆಯನ್ನಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮುಂಗಾರಿನ ಗುಣಲಕ್ಷಣಗಳು ಶಾಶ್ವತವಾಗಿ ಬದಲಾಗಿವೆ. ಈಗ ಎಲ್ ನಿನೋ ಇರಲಿ, ಇಲ್ಲದಿರಲಿ, ಮಳೆ ಬರುವ ದಿನಗಳ ಸಂಖ್ಯೆ ಕಡಿಮೆಯಾಗುತ್ತಿದೆಯಾದರೂ, ಒಮ್ಮೆ ಮಳೆ ಶುರುವಾದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ.
ವಾತಾವರಣದಲ್ಲಿ ಹೆಚ್ಚಿದ ತೇವಾಂಶ
ಬಿಸಿಯಾದ ವಾತಾವರಣವು ಹೆಚ್ಚಿನ ಪ್ರಮಾಣದ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಗಳು ವೇಗವಾಗಿ ಕಾಯುತ್ತಿರುವುದರಿಂದ, ವಾತಾವರಣಕ್ಕೆ ಭಾರಿ ಪ್ರಮಾಣದ ನೀರಾವಿ ಸರಬರಾಜಾಗುತ್ತಿದೆ. ಇದು ಮಳೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಿದೆ.
ಮುಂಬೈನಲ್ಲಿ ಜಲಪ್ರಳಕ್ಕೆ ಕಾರಣವೇನು?
ಮುಂಬೈನಲ್ಲಿ ಮುಂಗಾರು ತಡವಾಗಲು ಎಲ್ ನಿನೋ ಕಾರಣವಾಗಿತ್ತು. ಆದರೆ, ಜುಲೈನಲ್ಲಿ ಪಶ್ಚಿಮ ಏಷ್ಯಾದ ಮೇಲಿನ ಜಾಗತಿಕ ತಾಪಮಾನದ ಮಾದರಿ ಮತ್ತು ಅರಬ್ಬಿ ಸಮುದ್ರದ ಮಾರುತಗಳ ಬದಲಾವಣೆಗಳು ಈಗಿನ ಭಾರಿ ಮಳೆಗೆ ಕಾರಣವಾಗಿವೆ. ಅರಬ್ಬಿ ಸಮುದ್ರ ಮತ್ತು ಕೊಲ್ಲಿ ಎರಡೂ ಕಡೆಯಿಂದ ಬಂದ ತೇವಾಂಶ, ಸೃಷ್ಟಿಯಾದ ವಾಯುಭಾರ ಕುಸಿತ ಮತ್ತು ಪಶ್ಚಿಮ ಘಟ್ಟಗಳ ಭೌಗೋಳಿಕ ರಚನೆ, ಇವೆಲ್ಲವೂ ಒಟ್ಟಾಗಿ ಮುಂಬೈ ಕರಾವಳಿಯಲ್ಲಿ ಜಲಪ್ರಳಯಕ್ಕೆ ಸಾಕ್ಷಿಯಾಗಿವೆ,(ಏಜೆನ್ಸೀಸ್).