ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡುವಿರೇಕೆ..?
(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)
ಫ್ಲಾಶ್ಬ್ಯಾಕಿಗೆ ಒಮ್ಮೆ ಹೊರಳೋಣ. 1991ರ ಮೇ ಮಾಸವದು. ದೇಶದ ವಿದೇಶಿ ವಿನಿಮಯದ ಸಾಮರ್ಥ್ಯ ಸಂಪೂರ್ಣ ಸೋತು ಸುಣ್ಣವಾಗಿ, ದಿನದ ಮಟ್ಟಿಗೆ ಸರಕಾರ ನಡೆಸುವುದೂ ಸಾಧ್ಯವಾಗದ ಸ್ಥಿತಿಗೆ ತಲುಪಿತ್ತು. ಆಗ ಕೇಂದ್ರದಲ್ಲಿದ್ದದ್ದು ಚಂದ್ರಶೇಖರ ನೇತೃತ್ವದ ಅಲ್ಪಮತದ ಸರಕಾರ. ತುರ್ತು ಕೈಸಾಲದ ರೂಪದಲ್ಲಿ ದಿನಚರಿಗೆ ಹಣ ಹೊಂದಿಸಲೂ ತತ್ವಾರ ಉಂಟಾದ ಕಾರಣ ಬ್ಯಾಂಕ್ ಆಫ್ ಸ್ವಿಜರ್ಲ್ಯಾಂಡ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ನಿಂದ ಸಾಲ ಎತ್ತಬೇಕಾಯಿತು. ಆಗ ದೇಶದ ಆರ್ಥಿಕ ಭದ್ರತೆಗೆ ಕಾಯ್ದಿರಿಸಿದ್ದ 114 ಟನ್ ಬಂಗಾರವನ್ನು ಏರ್ಲಿಫ್ಟ್ ಮಾಡಲು ಆರ್ಬಿಐಗೆ ಸರಕಾರ ಸೂಚಿಸಿತು. ಬ್ಯಾಂಕ್ ಆಫ್ ಸ್ವಿಜರ್ಲ್ಯಾಂಡ್ಗೆ 47 ಟನ್, ಬ್ಯಾಂಕ್ ಆಫ್ ಇಂಗ್ಲೆಂಡ್ಗೆ 67 ಟನ್ ಬಂಗಾರವನ್ನು ಸಾಗಿಸಿ ಅಡ ಇಡಲಾಗಿತ್ತು. ಆಗ ಭಾರತದ ವಿದೇಶಿ ವಿನಿಮಯ ಸಂಗ್ರಹ ಇದ್ದದ್ದು ಕೇವಲ ಒಂದು ಬಿಲಿಯನ್ ಡಾಲರ್. ಹೋಲಿಸುವುದಾದರೆ ಇಂದಿನ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಿಂತಲೂ ಭಾರತ ಆರ್ಥಿಕವಾಗಿ ಜರ್ಜರಿತವಾಗಿತ್ತು.
ಹಾ... ಗೊತ್ತಿರಲಿ, ಇಷ್ಟಕ್ಕೂ ಆಗಿನ ಭಾರತದ ರಾಜಕೀಯ ಅಸ್ಥಿರತೆ, ಆರ್ಥಿಕ ಬಿಕ್ಕಟ್ಟಿಗೆ ನೇರ ಕಾರಣವಾಗಿದ್ದು ಕಾಂಗ್ರೆಸ್. ಆರ್ಥಿಕ ದಿವಾಳಿತನ, ಆಳುವವರ ಭ್ರಷ್ಟಾಚಾರ ಸರಣಿ ನಂತರ 30ಕ್ಕೂ ಹೆಚ್ಚು ವರ್ಷಗಳ ರಾಜಕೀಯ- ಆರ್ಥಿಕ ಅಸ್ಥಿರತೆಗೆ ತೆರೆ ಎಳೆದದ್ದು 2014ರ ಲೋಕಸಭೆ ಚುನಾವಣೆ. ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಏಕಾಂಗಿಯಾಗಿ ಸ್ಪಷ್ಟ ಬಹುಮತ ಪಡೆಯಿತು. ಅದಕ್ಕಿಂತ ಮುಖ್ಯವಾದದ್ದು ಸ್ವಾತಂತ್ರೊಯೕತ್ತರ ಭಾರತದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ 65 ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ನ ಸಂಖ್ಯಾಬಲ ಕುಸಿದು ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷ ಆಗುವ ಅರ್ಹತೆಯನ್ನೂ ಕಳೆದುಕೊಂಡಿತ್ತು.
ಮತದಾರರು ಕೊಟ್ಟ ಹೊಡೆತದಿಂದ ಚೇತರಿಸಿಕೊಳ್ಳಲು ಕಾಂಗ್ರೆಸ್ಗೆ ನಾಲ್ಕು ವರ್ಷಗಳು ಹಿಡಿದವು. 2019ರ ಚುನಾವಣೆಯಲ್ಲಿ ಮೋದಿ ನೇತೃತ್ವ ಮತ್ತೊಮ್ಮೆ ಬಹುಮತ ಸಾಧಿಸುವುದನ್ನು ತಡೆಯುವ ಕಾರ್ಯತಂತ್ರದ ಭಾಗವಾಗಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮತ್ತೆ ತನ್ನ ಅಸಲಿ ಆಟ ಶುರು ಮಾಡಿದ್ದನ್ನು ನಾವು ಮೆಲುಕು ಹಾಕಬೇಕು. ಆಗ ಮಾತ್ರ ಈಗ ನಮ್ಮ ಸಂಸತ್ತಿನಲ್ಲಿ ಏನಾಗುತ್ತಿದೆ, ಯಾಕೆ ಹೀಗಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಒಂದು ಸದೃಢ ನೇತೃತ್ವವನ್ನು ದೇಶದ ಜನರು ನೆಚ್ಚಿಕೊಂಡಿರುವಾಗ ಆ ವ್ಯಕ್ತಿತ್ವಕ್ಕೆ ಮಸಿ ಬಳಿದು ಮೂರ್ತಿಭಂಜನ ಮಾಡುವುದು ಈ ನಡವಳಿಕೆಯ ಏಕಮಾತ್ರ ಗುರಿ. ಅದು ಈಗ ಕಾಂಗ್ರೆಸ್ ನೆಚ್ಚಿಕೊಂಡಿರುವ ಮತ್ತು ಅನುಸರಿಸುತ್ತಿರುವ ಏಕಮಾತ್ರ ತತ್ವವೇ ಭಂಜನ ಸಿದ್ಧಾಂತ.
ಹಿಂದಿನ ಕೆಲ ಘಟನಾವಳಿ ಮೆಲುಕು ಹಾಕುವುದಾದರೆ, ಮೋದಿ ಸರಕಾರದ ಮೊದಲ ಅವಧಿಯ ಕೊನೆಯಲ್ಲಿ ಲೋಕಸಭೆಯಲ್ಲಿ ರಾಹುಲ್ ಮತ್ತು ಕಾಂಗ್ರೆಸ್ ಸಂಸದರ ಅನಪೇಕ್ಷಿತ ಮೂರು ಪ್ರತ್ಯೇಕ ನಡವಳಿಕೆಗಳನ್ನು ನಾವಿಂದು ನೆನಪು ಮಾಡಿಕೊಳ್ಳಬೇಕು.
2018ರ ಜು. 20. ಅಧಿಕೃತ ಪ್ರತಿಪಕ್ಷದ ನಾಯಕನೂ ಅಲ್ಲದ ರಾಹುಲ್ ಪ್ರತಿಪಕ್ಷದ ಬ್ಲಾಕ್ನಿಂದ ಹಠಾತ್ತನೇ ಜಿಗಿದು ಪ್ರಧಾನಿ ಆಸನದ ಬಳಿ ನುಗ್ಗಿ ಮೋದಿಯವರನ್ನು ಬಿಗಿದಪ್ಪಿಕೊಂಡರು. ಇದೇನೂ ಸಹಜ ನಡವಳಿಕೆಯಲ್ಲ, ಅತ್ಯಂತ ಅಸಹಜ ನಡವಳಿಕೆ. ಪ್ರಜಾತಂತ್ರದಲ್ಲಿ ಜನಾದೇಶ ಪಡೆದು ಆಯ್ಕೆಯಾದ ಪ್ರಧಾನಿಯನ್ನು ಕಟಕಿಯಾಡುವುದು ಇದರ ಉದ್ದೇಶವಾಗಿತ್ತು. ಮೋದಿ ಸರಕಾರದ 4 ವರ್ಷಗಳ ಅಮೋಘ ಸಾಧನೆಯನ್ನು ಮಂಕಾಗಿಸಲು, ಇಡೀ ಜಗತ್ತಿನ ಗಮನ ಸೆಳೆಯಲು ನಡೆಸಿದ ನಿರ್ದೇಶಿತ ಪ್ರಹಸನ ಅದಾಗಿತ್ತು.
ಈ ಘಟನೆಯಿಂದ ಸಿಕ್ಕ ಪ್ರಚಾರದ ಅಮಲಿನಿಂದ ಅದಾಗಿ ಮೂರು ದಿನಗಳು, ಅಂದರೆ 2018ರ ಜು. 23ರಂದು ಅದೇ ರಾಹುಲ್ ಅವರು ಸಚಿವೆಯೆಡೆಗೆ ನೋಡಿ ಕಣ್ಣು ಮಿಟುಕಿಸಿ, ಫ್ಲೈಯಿಂಗ್ ಕಿಸ್ ಮಾಡಿ ಮತ್ತೆ ಸುದ್ದಿಯಾದರು.
ಇತ್ತೀಚೆಗೆ ಸಂಸತ್ ಭವನದ ಪ್ರವೇಶ ದ್ವಾರದ ಬಳಿ ನಡೆದು ಹೋಗುತ್ತಿದ್ದ ಕೇಂದ್ರ ಸಚಿವ, ಸಿಖ್ ಎಂಪಿ ರಣವಿತ್ ಸಿಂಗ್ ಬಿಟ್ಟು ಅವರನ್ನು ಗದ್ದಾರ್ (ದೇಶದ್ರೋಹಿ) ಎಂದು ಗದರಿ ಸುದ್ದಿಯಾದರು. ರಣವಿತ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ರಾಹುಲ್ ಸಿಟ್ಟಿಗೆ ಕಾರಣವಾಗಿತ್ತು.
ಇವೆಲ್ಲ ಕಾಂಗ್ರೆಸ್ ಮತ್ತು ರಾಹುಲ್ ಅವರ ರಾಜಕೀಯ ಹತಾಶೆಯ ಪರಿಣಾಮ. ಆದರೆ ಬಲಿಯಾದದ್ದು? ಭಾರತದ ಶ್ರೇಷ್ಠ ಸಂಸದೀಯ ಮೌಲ್ಯ, ಘನತೆ ಮತ್ತು ಗಾಂಭೀರ್ಯ. ಕಾಂಗ್ರೆಸ್ ತನ್ನ ಸೋಲಿನ ಸರಣಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ಕಂಡುಕೊಂಡ ಮಾರ್ಗ ಅತ್ಯಂತ ಅನಪೇಕ್ಷಿತವಾದದ್ದು ಮತ್ತು ಪ್ರಾಯೋಗಿಕವಲ್ಲದ್ದು. ಸಂಸತ್ತಿನ ಒಳ-ಹೊರಗೆ ಅತ್ಯಂತ ಕೀಳುಮಟ್ಟದ ಗಿಮಿಕ್ (ಕುತಂತ್ರಗಾರಿಕೆ) ಮಾಡುವುದನ್ನು ಕಾಂಗ್ರೆಸ್ ತನ್ನ ಏಕಮಾತ್ರ ತಂತ್ರಗಾರಿಕೆ ಮಾಡಿಕೊಂಡಿದೆ. ಸಂಸತ್ತಿನಲ್ಲಿ ಪ್ರತಿದಿನವೂ ಜೋಕರ್ ರೀತಿಯ ನಡವಳಿಕೆಗಳನ್ನು ತೋರಿ ದೇಶದ ಗಮನ ಬೇರೆಡೆ ಸೆಳೆಯುವುದು ಒಂದು ಕಡೆಯಾದರೆ ಎಲ್ಲ ವಿಚಾರಗಳಿಗೂ ಸಂಬಂಧಿಸಿ ಸುಳ್ಳು ಸುದ್ದಿ ಹಬ್ಬಿಸುವುದು. ಈ ನಡವಳಿಕೆಯನ್ನು ಯಾರಾದರೂ ಒಪ್ಪಲು ಸಾಧ್ಯವೇ?
ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಕಾಂಗ್ರೆಸ್ ತನ್ನ ಆಡಳಿತ ಕಾಲದುದ್ದಕ್ಕೂ 600ಕ್ಕೂ ಹೆಚ್ಚು ಸರಕಾರಿ ಯೋಜನೆಗಳಿಗೆ ನೆಹರು, ಇಂದಿರಾ ಮತ್ತು ರಾಜೀವ್ ಗಾಂಧಿ ಹೆಸರನ್ನು ನಾಮಕರಣ ಮಾಡಿದೆಯೇ ಹೊರತು ಗಾಂಧಿ ಹೆಸರು ನೆನಪಾಗಲಿಲ್ಲ. ಆದರೆ ವಿಬಿ-ಜಿ ರಾಮ್ ಜಿ ಯೋಜನೆ ವಿಚಾರವಾಗಿ ಗಾಂಧಿ ಹೆಸರು ಬದಲಿಸಿದರೆಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ. ಪರಿಣಾಮ ಈ ಹಿಂದಿನ ಎಲ್ಲ ಉದ್ಯೋಗ ಖಾತರಿ ಯೋಜನೆಗಳಿಗಿಂತ ಹೆಚ್ಚು ಉಪಯುಕ್ತ ಮತ್ತು ಪಾರದರ್ಶಕ ಯೋಜನೆಯೊಂದು ವಿವಾದಕ್ಕೆ ಈಡಾಗಿದೆ.
ಅಷ್ಟು ಸಾಲದ್ದಕ್ಕೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರ ಕೊಡುವ ವೇಳೆ ಪ್ರಧಾನಿ ಮೇಲೆ ದಾಳಿ ಮಾಡಲು ಪ್ರತಿಪಕ್ಷದ 12 ಮಹಿಳಾ ಸಂಸದರು ಗೌಪ್ಯ ಸಿದ್ಧತೆ ಮಾಡಿಕೊಂಡಿದ್ದರು ಎಂದು ಲೋಕಸಭಾ ಸ್ಪೀಕರ್ ಅಧಿಕೃತವಾಗಿ ತಿಳಿಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸೂಚಿಸಿದರು. ಪರಿಣಾಮ, ಏನೂ ನಡೆಯಲಿಲ್ಲ. ಒಂದು ವೇಳೆ, ಏನಾದರೂ ಅಚಾತುರ್ಯ ನಡೆದಿದ್ದರೆ...? ಆಗ ಭಾರತದ ಸಂಸದೀಯ ಪ್ರಜಾತಂತ್ರದ ಘನತೆ, ಗೌರವದ ಕಥೆ ಏನಾಗುತ್ತಿತ್ತು?
ಇದೇ ವೇಳೆ ದೊಡ್ಡ ಸುದ್ದಿಯಾದ ಮತ್ತೊಂದು ವಿಷಯ ಎಪ್ಸ್ಟೀನ್ ಫೈಲ್ಸ್. ‘ಪ್ರಧಾನಿ ಮೋದಿ ಇಸ್ರೇಲ್ಗೆ ಹೋದಾಗ ಅಮೆರಿಕ ಅಧ್ಯಕ್ಷ ಟ್ರಂಪ್ರನ್ನು ಮೆಚ್ಚಿಸಲು ನೃತ್ಯ ಮಾಡಿ ಹಾಡಿದ್ದಾರೆ, ಟ್ರಂಪ್ ಜತೆ ಮೋದಿ ತರಾತುರಿಯಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳೋದಕ್ಕೆ ಅದೇ ಕಾರಣ, ಮೋದಿ ಹೆಸರಿರುವ ವಿಡಿಯೋ ಹೊರಬರಬಾರದು ಅನ್ನೋ ಭಯ ಕಾರಣ’ ಎಂಬ ಸುಳ್ಳಿನ ಸರಣಿಯ ಮುಂದುವರೆದ ಭಾಗ. ವೋಟ್ ಚೋರಿ ಗುಲ್ಲೂ ಅದಕ್ಕೆ ಹೊರತಾದ್ದಲ್ಲ.
ಆದರೆ ಈ ಎಲ್ಲ ಅಪಪ್ರಚಾರ, ಅಪಸವ್ಯಗಳನ್ನು ನಿವಾಳಿಸಿ ಹಾಕಿದ್ದು ಯಾವುದು ಗೊತ್ತಾ? ಒಂದು ಸೇವಾತೀರ್ಥ ಮತ್ತೊಂದು ಅಸ್ಸಾಂನ ದಿಬ್ರೂಗಢದ ಹೆದ್ದಾರಿ.
ಸೇವಾ ತೀರ್ಥ... ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಇತರ ಮಂತ್ರಿಗಳ ಏಕೀಕೃತ ಕಾರ್ಯಾಲಯ ಸಂಕುಲಕ್ಕೆ ಇಟ್ಟ ಚಂದದ ಹೆಸರು. ಆ ಹೆಸರಿಗೂ, ಹೆಸರಿಟ್ಟ ವ್ಯಕ್ತಿತ್ವಕ್ಕೂ ಎಂಥ ಅದ್ಭುತ ಹೊಂದಿಕೆ. ಪೋಲಿ ಪೊರ್ಕಿಗಳೆಲ್ಲ ಅಲ್ಲಿ ಹೋಗಿ ಕುಳಿತುಕೊಳ್ಳಬಾರದು ಎಂತಲೇ ಈ ಹೆಸರಿಟ್ಟಂತಿದೆ. ಸೌತ್ ಬ್ಲಾಕ್, ಲುಟ್ಯೆನ್ಸ್ ಕಟ್ಟಿದ ಕಟ್ಟಡ, ವೈಸ್ರಾಯ್ ನಂತರ ನೆಹರು ಅದನ್ನೇ ಪ್ರಧಾನಿ ಕಚೇರಿ ಮಾಡಿಕೊಂಡರು. ಕಟ್ಟಡ ಮತ್ತು ಅದರ ಹೆಸರಿನ ಬದಲಾವಣೆ ಭಾರತದ ಕೋಟಿಕೋಟಿ ಜನರ ಮೇಲೆ ಮಾಡುವ ಪರಿಣಾಮ ಚಿಕ್ಕದಾ? ನಗಣ್ಯವಾ?
ಅಸ್ಸಾಂನ ದಿಬ್ರೂಗಢ್ ಜಿಲ್ಲೆಯ ಮೊರಾನ್ ಎಂಬಲ್ಲಿ ಶನಿವಾರ ಪ್ರಧಾನಿ ಮೋದಿಯವರಿದ್ದ ಸಿ-130ಜೆ ಏರ್ಫೋರ್ಸ್ ವಿಮಾನ ನ್ಯಾಷನಲ್ ಹೈವೇ ಮೇಲೆ ಇಳಿಯಿತು. ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಫೆಸಿಲಿಟಿ (ಇಎಲ್ಎಫ್) ಈ ಹೆದ್ದಾರಿ. ಸುಮಾರು 4.2 ಕಿಮೀ ಉದ್ದದ ಈ ಬಲವರ್ಧಿತ ರಸ್ತೆಯ ಮೇಲೆ ಕೇವಲ ಸಾರಿಗೆ ವಿಮಾನಗಳಲ್ಲ, ನಮ್ಮ ಹೆಮ್ಮೆಯ ರಫೇಲ್ ಮತ್ತು ಸುಖೋಯ್ ಯುದ್ಧ ವಿಮಾನಗಳೂ ಸಹ ಇಳಿದು ಟೇಕಾಫ್ ಆದವು. ತಮಾಷೆ ಅಲ್ಲ, ಇದರ ಹಿಂದೊಂದು ಬಲವಾದ ಸಂದೇಶ ಇದೆ.
ಸಿಲಿಗುರಿ ಕಾರಿಡಾರ್ ಅಥವಾ ‘ಚಿಕನ್ ನೆಕ್’ ಕೇವಲ 22 ಕಿಮೀ ಅಗಲದ ಪ್ರದೇಶ. ಈಶಾನ್ಯ ರಾಜ್ಯಗಳನ್ನು ಭಾರತಕ್ಕೆ ಜೋಡಿಸುವ ಏಕೈಕ ಕೊಂಡಿ. ಇಲ್ಲಿಯೇ ಚೀನಾ ಮತ್ತು ಬಾಂಗ್ಲಾ ಭಾರತದ ಮೇಲೆ ಹಿಡಿತ ಸಾಧಿಸಲು ಹೊಂಚು ಹಾಕುತ್ತಿರುವುದು. ಮೋದಿ ವಿಮಾನ ಲ್ಯಾಂಡ್ ಆದ ಮೊರಾನ್ ಸ್ಟ್ರಿಪ್ ಚೀನಾ ಗಡಿಯಿಂದ 300 ಕಿಮೀ ಒಳಗಿದೆ. ಬಾಂಗ್ಲಾದೇಶದ ಗಡಿಗೆ ತೀರಾ ಹತ್ತಿರದಲ್ಲಿದೆ. ಯುದ್ಧ ಏನಾದರೂ ನಡೆದರೆ ಚೀನಾ, ಬಾಂಗ್ಲಾ ನಮ್ಮ ಏರ್ ಬೇಸ್ ಟಾರ್ಗೆಟ್ ಮಾಡಿದರೆ ನಮ್ಮ ಯುದ್ಧ ವಿಮಾನಗಳಿಗೆ ಇಳಿಯಲು ಹೈವೇಗಳೇ ರನ್ವೇ ಆಗುತ್ತವೆ. ಶಾಂತಿ ಕಾಲದಲ್ಲಿ ಕಾರು-ಲಾರಿ ಓಡಲು ರಸ್ತೆ. ಯುದ್ಧಕಾಲದಲ್ಲಿ ವಿಮಾನದ ರನ್ವೇ... ಇದು ಭಾರತದ ರಕ್ಷಾ ಕವಚ.
ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಅಹಿತಕರ ಘಟನೆಗಳು ಉಂಟು ಮಾಡಿದ ನೋವು ಮಾಯಿಸಲು ಈ ಎರಡು ಘಟನೆಗಳು ಸಾಕು.