Swiggy boycott Bengaluru: ಅತಿಯಾದ ಕಮಿಷನ್‌ಗಳು, ರಿಯಾಯಿತಿ ಹಾಗೂ ಹಣ ಕಡಿತದಿಂದಾಗಿ ಹೋಟೆಲ್ಗಳು ಲಾಸ್ನಲ್ಲಿದ್ದು ಪಾರದರ್ಶಕ ವ್ಯವಹಾರ ಸೇರಿದಂತೆ ಕೆಲವೊಂದು ಬೇಡಿಕೆಯನ್ನು ಮುಂದಿಟ್ಟು ಆನ್ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಸಂಸ್ಥೆಗೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಎಚ್ಚರಿಕೆ ಕೊಟ್ಟಿದೆ. ಆಗಸ್ಟ್ 15ರೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ಲಾಟ್‌ಫಾರ್ಮ್ ಅನ್ನು ಬಹಿಷ್ಕರಿಸುವುದಾಗಿ ವಾರ್ನ್ ಮಾಡಿದೆ.
ಇತ್ತೀಚೆಗೆ ವರ್ಕ್ ಫ್ರಂ ಹೋಂ ಕೆಲಸ ಮಾಡುವವರು ಹಾಗೂ ರಾತ್ರಿ ಮನೆ ಸೇರುವವರು. ಪಾರ್ಟಿ ಮೂಡ್ನಲ್ಲಿರುವವರು ಆನ್ಲೈನ್ನಲ್ಲಿ ಆಹಾರ ಖರೀದಿಸೋದು ಮಾಮೂಲು. ಆದರೆ, ಆನ್ಲೈನ್ ಅಪ್ಲಿಕೇಶನ್ಗಳು ವಿಧಿಸುವ ರಿಯಾಯಿತಿಯಿಂದಾಗಿ ಹೋಟೆಲ್ಗಳಿಗೆ ನಷ್ಟವಾಗುತ್ತಿದೆ. ಇದರಲ್ಲಿ ಪಾರದರ್ಶಕತೆ ಇರಬೇಕು ಎನ್ನುವುದು ರೆಸ್ಟೋರೆಂಟ್ ಮಾಲೀಕರ ಬೇಡಿಕೆಯಾಗಿದೆ.
ರೆಸ್ಟೋರೆಂಟ್ ಮಾಲೀಕರ ಬೇಡಿಕೆ ಏನು?
- ರೆಸ್ಟೋರೆಂಟ್‌ಗಳ ಒಪ್ಪಿಗೆಯಿಲ್ಲದೆ ಯಾವುದೇ ರಿಯಾಯಿತಿಗಳನ್ನು ನೀಡಬಾರದು.
- ಜಾಹೀರಾತು ಶುಲ್ಕ ಮತ್ತು ಪಾವತಿ ಗೇಟ್‌ವೇ ಶುಲ್ಕಗಳಲ್ಲಿ ಹೆಚ್ಚಿನ ಪಾರದರ್ಶಕತೆ ಇರಬೇಕು.
- ಗ್ರಾಹಕರ ದೂರು ಬಂದ ತಕ್ಷಣವೇ ಹಣವನ್ನು ಅನಧಿಕೃತವಾಗಿ ಕಡಿತಗೊಳಿಸುವುದನ್ನು ನಿಲ್ಲಿಸಬೇಕು.
- ಆಹಾರ ತಯಾರಾದ ಬಳಿಕ ಆರ್ಡರ್ ರದ್ದಾದರೆ, ಆ ನಷ್ಟವನ್ನು ರೆಸ್ಟೋರೆಂಟ್‌ಗಳು ಭರಿಸಬಾರದು.
- ಎಲ್ಲಾ ಕಡಿತಗಳ ವಿವರವಾದ ಇತ್ಯರ್ಥ ವರದಿ ನೀಡಬೇಕು.
- ಕಪಕ್ಷೀಯ ಒಪ್ಪಂದದ ನಿಯಮಗಳನ್ನು ಕೈಬಿಡಬೇಕುಪ್ರತಿ ರೆಸ್ಟೋರೆಂಟ್‌ಗೂ ಪ್ರತ್ಯೇಕ ರಿಲೇಶನ್‌ಶಿಪ್ ಮ್ಯಾನೇಜರ್ ಅನ್ನು ನೇಮಿಸಬೇಕು.
ರೆಸ್ಟೋರೆಂಟ್ ಮಾಲೀಕರ ಸಂಘ ಹೇಳೋದೇನು?
ಬೆಂಗಳೂರು ಹೋಟೆಲ್ ಸಂಘದ ಗೌರವಾಧ್ಯಕ್ಷರಾದ ಪಿ.ಸಿ. ರಾವ್ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ವಿಗ್ಗಿಯ ಅವೈಜ್ಞಾನಿಕ ಕಡಿತಗಳಿಂದ ಮಾಲೀಕರಿಗೆ ಭಾರೀ ನಷ್ಟವಾಗುತ್ತಿದೆ. 1 ಲಕ್ಷ ರೂ. ವ್ಯಾಪಾರವಾದರೆ, ಕಮಿಷನ್, ರಿಯಾಯಿತಿ ಮತ್ತು ಇತರೆ ಕಡಿತಗಳ ನಂತರ ರೆಸ್ಟೋರೆಂಟ್ ಕೈಗೆ ಕೇವಲ 40,000 ರೂ. ಮಾತ್ರ ಉಳಿಯುತ್ತಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಈ ಹಿನ್ನೆಲೆ ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಮತ್ತು ನ್ಯಾಷನಲ್ ರೆಸ್ಟೋರೆಂಟ್ & ಬಾರ್ ಅಸೋಸಿಯೇಷನ್ ಒಗ್ಗೂಡಿ ಆಗಸ್ಟ್ 15ರವರೆಗೂ ನಮ್ಮ ಬೇಡಿಕೆ ಈಡೇರಿಸಲು ಗಡುವು ನೀಡಿದ್ದೇವೆ. ಅದಾದ ನಂತರ ನಮ್ಮ ಬೇಡಿಕೆ ಈಡೇರಿಸದೆ ಹೋದರೆ ಸ್ವಿಗ್ಗಿ, ಝೋಮ್ಯಾಟೋ ಪ್ಲಾಟ್‌ಫಾರ್ಮ್‌ನಿಂದಲೂ ಹೊರಗುಳಿಯುವುದಾಗಿ ಎಚ್ಚರಿಕೆ ನೀಡಿದೆ, (ಏಜೆನ್ಸೀಸ್).