DUSU Elections 
ದೇಶ

ಜೆನ್-ಜೀ ಪ್ರತಿಭಟನೆಗಳ ಬಳಿಕ ಬಿಜೆಪಿಗೆ ದೊಡ್ಡ ಬೂಸ್ಟ್: ಡಿಎಎಸ್‌ಯು ಚುನಾವಣಾ ಜಯದ ಮೂಲಕ ಕಮಲ ಪಡೆ ಕಮಾಲ್! | DUSU Elections

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದೋರ್‌ನಲ್ಲಿ ತಮ್ಮ ಛಾತ್ರೋನ್ ಕಿ ಗೂಂಜ್ ವಿದ್ಯಾರ್ಥಿ ಸಂಪರ್ಕ ಅಭಿಯಾನವನ್ನು ನಡೆಸಿದ ದಿನವೇ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ (DUSU Elections) ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ (NSUI) ಒಂದೇ ಒಂದು ಸ್ಥಾನವನ್ನು ಸಹ ಗೆಲ್ಲದೆ ಮುಖಭಂಗ ಅನುಭವಿಸಿದೆ.
ಮತ್ತೊಂದೆಡೆ ಬಿಜೆಪಿ ಬೆಂಬಲಿತ ಎಬಿವಿಪಿ ನಾಲ್ಕು ಕೇಂದ್ರ ಸ್ಥಾನಗಳ ಪೈಕಿ ಮೂರನ್ನು ತನ್ನದಾಗಿಸಿಕೊಂಡಿದೆ. ನೀಟ್ ಪೇಪರ್ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಯುವಜನರ ಪ್ರತಿಭಟನೆಗಳು ಭುಗಿಲೆದ್ದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಸುಮಾರು ಎರಡು ತಿಂಗಳ ಬಳಿಕ ಈ ಚುನಾವಣಾ ಫಲಿತಾಂಶ ಹೊರಬಂದಿರುವುದು ಬಿಜೆಪಿಗೆ ರಾಜಕೀಯವಾಗಿ ಮಹತ್ವದ್ದಾಗಿದೆ.
ಚುನಾವಣೆಯಲ್ಲಿ ಎಬಿವಿಪಿಯ ಯಶ್ ದಬಾಸ್ ಅಧ್ಯಕ್ಷರಾಗಿ, ರಿಯಾ ಛೌಧರಿ ಕಾರ್ಯದರ್ಶಿಯಾಗಿ ಮತ್ತು ಲಕ್ಷ್ಯ ರಾಜ್ ಸಿಂಗ್ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೋಕೀನ್ ಗೆದ್ದುಕೊಂಡಿದ್ದಾರೆ.

ಬಿಜೆಪಿ ನಾಯಕರು ಫುಲ್​ ಹ್ಯಾಪಿ!

ದೆಹಲಿ ವಿಶ್ವವಿದ್ಯಾಲಯವು ದೇಶದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವುದರಿಂದ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಎಂದಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ರಾಹುಲ್​ ಗಾಂಧಿ ಅವರ ಯುವಕರ ಧ್ವನಿ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಮತ್ತು ಇದು ಯುವಕರ ನೈಜ ಧ್ವನಿಯನ್ನು ಪ್ರತಿಬಿಂಬಿಸುವ ಜನಾಭಿಪ್ರಾಯ ಸಂಗ್ರಹವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಫಲಿತಾಂಶವನ್ನು ಬಿಜೆಪಿಯ ರಾಷ್ಟ್ರ ಪ್ರಥಮ ನೀತಿಯ ಮೇಲಿನ ಯುವಕರ ನಂಬಿಕೆಯ ಸಂಕೇತ ಎಂದು ಬಣ್ಣಿಸಿದ್ದರೆ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ನೀತಿಗಳ ಮೇಲೆ ದೇಶದ ಯುವಕರಿಗೆ ಇರುವ ವಿಶ್ವಾಸವನ್ನು ಇದು ತೋರಿಸುತ್ತದೆ ಎಂದಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳ ವಿಚಾರದಲ್ಲಿ ಟೀಕೆಗಳನ್ನು ಎದುರಿಸಿದ್ದ ಬಿಜೆಪಿಗೆ, ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್‌ನ ಪ್ರಮುಖ ವಿದ್ಯಾರ್ಥಿ ಘಟಕವನ್ನು ಸೋಲಿಸಿರುವುದು ದೊಡ್ಡ ರಾಜಕೀಯ ಬಲವನ್ನು ನೀಡಿದೆ.
ದೆಹಲಿ ವಿಶ್ವವಿದ್ಯಾಲಯವನ್ನು ಮಿನಿ-ಇಂಡಿಯಾ ಎಂದು ಬಣ್ಣಿಸಿರುವ ಬಿಜೆಪಿ ಮೂಲಗಳು, ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ಹಿಂದೂ ಕಾಲೇಜ್, ಹನ್ಸ್‌ರಾಜ್ ಕಾಲೇಜ್ ಸೇರಿದಂತೆ ಉತ್ತರ ಕ್ಯಾಂಪಸ್‌ನ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಎಬಿವಿಪಿ ಸಾಧಿಸಿರುವ ಮುನ್ನಡೆಯನ್ನು ಎತ್ತಿ ತೋರಿಸಿವೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಎನ್‌ಎಸ್‌ಯುಐ ಎಬಿವಿಪಿಯ ಸಾಂಪ್ರದಾಯಿಕ ಎದುರಾಳಿಯಾಗಿದ್ದು, ಈ ಹಿಂದೆ ಅಧಿಕಾರವನ್ನೂ ಹೊಂದಿದ್ದ ಎನ್​ಎಸ್​ಯುಐ, ಈಗ ಕೇಂದ್ರದ ಯಾವುದೇ ಸ್ಥಾನವನ್ನು ಗೆಲ್ಲಲು ವಿಫಲವಾಗಿರುವುದು, ಪರೀಕ್ಷೆಗಳು ಮತ್ತು ಉದ್ಯೋಗದ ಬಗ್ಗೆ ಆಕ್ರೋಶವಿದ್ದರೂ ದೆಹಲಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕಾಂಗ್ರೆಸ್ ಪರ ಯಾವುದೇ ಗಮನಾರ್ಹ ಬದಲಾವಣೆ ಆಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಬಿಜೆಪಿ ವಾದಿಸುತ್ತಿದೆ.
ಇತ್ತೀಚಿನ ಪ್ರತಿಭಟನೆಗಳ ನಂತರ ಬಿಜೆಪಿ ತನ್ನ ಜೆನ್-ಜೀ ಯುವ ಸಮುದಾಯದ ಸಂಪರ್ಕ ತಂತ್ರಗಾರಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದೆ. ಡಿಜಿಟಲ್ ತಂತ್ರಜ್ಞಾನದಲ್ಲಿ ಕ್ರಿಯೇಟರ್ ಶೈಲಿಯ ಸಣ್ಣ ವಿಡಿಯೋಗಳು, ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಂತ ವಿಷಯಗಳಿಗೆ ಒತ್ತು ನೀಡಲಾಗಿದೆ. ಸಾಂಪ್ರದಾಯಿಕ ರಾಜಕೀಯ ಸಂದೇಶಗಳ ಬದಲಿಗೆ ಹೆಚ್ಚು ಸಂಭಾಷಣಾ ಶೈಲಿಯನ್ನು ಅಳವಡಿಸಿಕೊಳ್ಳಲಾಗಿದೆ. ಕೇಂದ್ರ ಸಚಿವರ ಸಾಮಾಜಿಕ ಜಾಲತಾಣಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ಇದರೊಂದಿಗೆ ಸಚಿವರು ನೇರವಾಗಿ ಕ್ಯಾಂಪಸ್‌ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಒಂದು ದಿನ ಒಂದು ವಿಶ್ವವಿದ್ಯಾಲಯ ಅಭಿಯಾನವನ್ನೂ ರೂಪಿಸಲಾಗಿದೆ.
ಅಂತಿಮವಾಗಿ ಹೇಳುವುದಾದರೆ, ದೆಹಲಿ ವಿಶ್ವವಿದ್ಯಾಲಯವು ಯಾವಾಗಲೂ ಎಬಿವಿಪಿಯ ಭದ್ರಕೋಟೆಯಾಗಿ ಉಳಿದಿದೆ ಮತ್ತು ಕೇವಲ ಒಂದು ಕ್ಯಾಂಪಸ್ ಚುನಾವಣೆ ಮಾತ್ರ ದೇಶಾದ್ಯಂತದ ಜೆನ್-ಜೀ ಯುವಕರ ಒಲವನ್ನು ಪ್ರತಿನಿಧಿಸುತ್ತದೆ ಎನ್ನಲು ಸಾಧ್ಯವಿಲ್ಲ. ಆದರೂ, ಮೂರು ಸ್ಥಾನಗಳಲ್ಲಿ ಸಿಕ್ಕಿರುವ ಈ ಭರ್ಜರಿ ಗೆಲುವು ರಾಹುಲ್ ಗಾಂಧಿಯವರ ಛಾತ್ರೋನ್ ಕಿ ಗೂಂಜ್ ಅಭಿಯಾನಕ್ಕೆ ನೇರ ಪ್ರತಿಕ್ರಿಯೆಯಾಗಿದ್ದು, ಬಿಜೆಪಿಗೆ ತನ್ನ ಯುವ ಪ್ರಚಾರದ ಸ್ಪಷ್ಟ ಫಲಿತಾಂಶವನ್ನು ಕಲ್ಪಿಸಿಕೊಟ್ಟಿದೆ(ಏಜೆನ್ಸೀಸ್​).