ಸಿಜೆಪಿ ಪ್ರತಿಭಟನೆ ವೇಳೆ ಹರಿದುಬರುತ್ತಿದೆ ಆಹಾರದ ಮಹಾಪೂರ: ನೂರಾರು ಅಪರಿಚಿತ ದಾನಿಗಳಿಂದ ಆನ್​ಲೈನ್​ ಫುಡ್​ ಆರ್ಡರ್​! CJP  
ದೇಶ

ಸಿಜೆಪಿ ಪ್ರತಿಭಟನೆ ವೇಳೆ ಹರಿದುಬರುತ್ತಿದೆ ಆಹಾರದ ಮಹಾಪೂರ: ನೂರಾರು ಅಪರಿಚಿತ ದಾನಿಗಳಿಂದ ಆನ್​ಲೈನ್​ ಫುಡ್​ ಆರ್ಡರ್​! CJP

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಹರಿದುಬಂದ ಆನ್‌ಲೈನ್ ನೆರವು ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರಿಗೆ ಆಹಾರದ ಮಹಾಪೂರ
  • ಪ್ರಜಾಪ್ರಭುತ್ವದ ಹೋರಾಟಕ್ಕೆ ತಂತ್ರಜ್ಞಾನದ ಬೆಂಬಲ ಜಂತರ್ ಮಂತರ್‌ಗೆ ಕಳುಹಿಸಿದ ಆಹಾರ ಪ್ರೀತಿಯ ಹೊಸ ಸಂಕೇತ
  • ನೀಟ್ ಅಕ್ರಮದ ವಿರುದ್ಧ ಜಂತರ್ ಮಂತರ್‌ನಲ್ಲಿ ಧರಣಿ ಹೋರಾಟಗಾರರ ಹಸಿವು ನೀಗಿಸಲು ನೆಟ್ಟಿಗರ ಅನ್ನದಾನ
  • ಸಮೋಸಾದಿಂದ ಗೋಲ್​ಗಪ್ಪವರೆಗೆ ಸಿಜಿಪಿ ಪ್ರತಿಭಟನಾ ಸ್ಥಳಕ್ಕೆ ಹರಿದುಬಂದ ಆಹಾರ ಮತ್ತು ಔಷಧಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕೇವಲ ಘೋಷಣೆಗಳಷ್ಟೇ ಅಲ್ಲ, ಆಹಾರದ ಪೊಟ್ಟಣಗಳ ಮಹಾಪೂರವೇ ಹರಿಯುತ್ತಿದೆ! ಕಾಕ್ರೋಚ್​ ಜನತಾ ಪಕ್ಷ ( CJP ) ನಡೆಸುತ್ತಿರುವ ಪ್ರತಿಭಟನೆಗೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದ ಸಾವಿರಾರು ಅಭಿಮಾನಿಗಳು ಹಾಗೂ ಬೆಂಬಲಿಗರು, ದೇಶದ ಮೂಲೆಮೂಲೆಯಿಂದ 'ಆನ್‌ಲೈನ್ ಫುಡ್ ಡೆಲಿವರಿ' ಮೂಲಕ ತಮ್ಮ ಬೆಂಬಲದ ಅಲೆ ಎಬ್ಬಿಸಿದ್ದಾರೆ. ಅನಾಮಧೇಯ ಬೆಂಬಲಿಗರು ಕಳುಹಿಸುತ್ತಿರುವ ನೂರಾರು ಆಹಾರದ ಆರ್ಡರ್‌ಗಳು ಪ್ರತಿಭಟನಾ ಸ್ಥಳಕ್ಕೆ ಸಾಲು ಸಾಲಾಗಿ ತಲುಪುತ್ತಿದ್ದು, ಈ ವಿನೂತನ ಮಾದರಿಯ ಬೆಂಬಲವೀಗ ರಾಷ್ಟ್ರರಾಜಧಾನಿಯಲ್ಲಿ ದೊಡ್ಡ ಮಟ್ಟದ ಗಮನ ಸೆಳೆಯುತ್ತಿದೆ.
ಮುಂಬೈನ ಅನುಜ್ ರಾವತ್ ಎಂಬ ವ್ಯಕ್ತಿ ಪ್ರತಿಭಟನಾ ಸ್ಥಳದಲ್ಲಿ ಹಸಿವಿನಿಂದ ಬಳಲುತ್ತಿರುವವರಿಗೆ ವಿತರಿಸಲು ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿ, ಹಣ ಪಾವತಿಸಿದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮುಂಬೈನಿಂದ ಅನುಜ್ ರಾವತ್ ಎಂಬುವವರು ಈ ಆಹಾರವನ್ನು ಕಳುಹಿಸಿದ್ದು, ಜಂತರ್ ಮಂತರ್‌ನಲ್ಲಿ ಹಸಿವಿನಿಂದ ಇರುವ ಯಾರಿಗೆ ಬೇಕಾದರೂ ಈ ಆಹಾರವನ್ನು ನೀಡಲು ತಿಳಿಸಿದ್ದಾರೆ ಎಂದು ಡೆಲಿವರಿ ಬಾಯ್ ಹೇಳುವ ದೃಶ್ಯವೇ ಈ ಹೊಸ ರೀತಿಯ ಬೆಂಬಲದ ಅಲೆಗೆ ಕಿಡಿ ಹೊತ್ತಿಸಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ, ದೇಶಾದ್ಯಂತ ಇರುವ ಬೆಂಬಲಿಗರು ಸತತವಾಗಿ ಆಹಾರ ಆರ್ಡರ್ ಮಾಡಲು ಪ್ರಾರಂಭಿಸಿದರು. ಪರಿಣಾಮವಾಗಿ ಪ್ರತಿಭಟನಾ ಸ್ಥಳದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸಂಗ್ರಹವಾಗತೊಡಗಿತು. ಆಹಾರ ಪೋಲಾಗುವುದನ್ನು ತಡೆಯಲು ತಕ್ಷಣವೇ ಜಾಗರೂಕರಾದ ‘ಕಾಕ್ರೋಚ್ ಜನತಾ ಪಾರ್ಟಿ’, "ಇಂದಿಗೆ ನಮಗೆ ಸಾಕಾಗುವಷ್ಟು ಆಹಾರ ತಲುಪಿದೆ. ದಯವಿಟ್ಟು ಇನ್ಮುಂದೆ ಯಾರೂ ಆಹಾರವನ್ನು ಕಳುಹಿಸಬೇಡಿ" ಎಂದು ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ವಿನಂತಿ ಮಾಡಿಕೊಂಡಿದೆ.
ಸ್ವಿಗ್ಗಿ ಮತ್ತು ಝೊಮ್ಯಾಟೊ ಆ್ಯಪ್‌ಗಳ ಮೂಲಕ ದೇಶಾದ್ಯಂತದ ಬೆಂಬಲಿಗರು ಕಳುಹಿಸಿದ ಸಮೋಸಾ, ಪಿಜ್ಜಾ, ಕಢಿ ಚಾವಲ್ ಹಾಗೂ ಔಷಧಗಳ ಮಹಾಪೂರವೇ ಪ್ರತಿಭಟನಾ ಸ್ಥಳಕ್ಕೆ ಹರಿದುಬಂದಿದ್ದರೆ, ಬುಧವಾರದಂದು ಸ್ವತಃ ಗೋಲ್​ಗಪ್ಪ (ಪಾನಿಪೂರಿ) ಗಾಡಿಯೇ ಅಲ್ಲಿಗೆ ಆಗಮಿಸಿ ನೆರೆದವರ ಗಮನ ಸೆಳೆಯಿತು. ಗ್ರೇಟರ್ ನೋಯ್ಡಾದ ವಿದ್ಯಾರ್ಥಿಗಳಾದ ಅರೀಶ್ ಮಲಿಕ್ ಮತ್ತು ದಿವ್ಯಾಂಶಿ ದೀಕ್ಷಿತ್, ಕಾಶ್ಮೀರದಿಂದ ವಿಮಾನದ ಮೂಲಕ ಧಾವಿಸಿ ಬಂದ ಸೈಯದ್ ಮುದ್ದಬೀರ್ ಹಾಗೂ 2024 ರ ನೆಟ್ (NET) ಪರೀಕ್ಷೆ ರದ್ದತಿಯಿಂದ ಸಂಕಷ್ಟಕ್ಕೊಳಗಾಗಿ ನೀಟ್ (NEET) ಅಭ್ಯರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಲು ಬಂದ ತ್ಯಬಾ ಝರ್ಗಾರ್ ಸಾಥ್ ನೀಡಿದರು. ಪ್ರತಿಭಟನಾಕಾರರಿಗೆ ನೆರವಾಗುವ ಉದ್ದೇಶದಿಂದ ಈ ನಾಲ್ವರು ಗೋಲ್​ಗಪ್ಪ ಮಾರಾಟಗಾರನ ಸಂಪೂರ್ಣ ಸ್ಟಾಕ್ ಅನ್ನೇ ಖರೀದಿಸಿ, ಸ್ಥಳದಲ್ಲಿದ್ದ ಎಲ್ಲರಿಗೂ ಉಚಿತವಾಗಿ ಪಾನಿಪೂರಿ ವಿತರಿಸಿ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು.
ಯಾವುದೇ ಹೆಸರು ಅಥವಾ ವಿವರಗಳಿಲ್ಲದೆ ಕೇವಲ 'ಜಂತರ್ ಮಂತರ್' ಎಂಬ ವಿಳಾಸದೊಂದಿಗೆ ಬಂದ ಈ ಆಹಾರವನ್ನು ಬಫೆಯಂತೆ ಜೋಡಿಸಲಾಗಿದ್ದು, ಇಷ್ಟವಾದವರು ಉಚಿತವಾಗಿ ಸೇವಿಸುತ್ತಿದ್ದಾರೆ ಎಂದು CJP ತನ್ನ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಅನ್ನದಾನದ ಹತ್ತಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇದು ಸೋಶಿಯಲ್ ಮೀಡಿಯಾದ ಶಕ್ತಿಯಲ್ಲ, ಪ್ರೀತಿಯ ಶಕ್ತಿ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದರೆ, ಪ್ರಜಾಪ್ರಭುತ್ವ ಸತ್ತಿರಬಹುದು, ಆದರೆ ಭಾರತೀಯ ಸಹೋದರ ಸಹೋದರಿಯರ ಬೆಂಬಲದಿಂದ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಮತ್ತೊಬ್ಬರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಐಕ್ಯತೆಯ ಸಂಕೇತವಾಗಿ ಮಾರ್ಪಟ್ಟಿರುವ ಈ ಅಭಿಯಾನದಲ್ಲಿ ತಾವೂ ಭಾಗಿಯಾಗಿರುವುದಾಗಿ ಪೋಸ್ಟ್ ಮಾಡುತ್ತಿರುವ ನೆಟ್ಟಿಗರು, ಪ್ರತಿಯೊಬ್ಬರಿಗೂ ಈ ಆಹಾರ ದಾನಕ್ಕೆ ಕೈಜೋಡಿಸುವಂತೆ ಕರೆ ನೀಡುತ್ತಿದ್ದಾರೆ. ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಲು ಸಾರ್ವಜನಿಕರಷ್ಟೇ ಅಲ್ಲದೆ ಹಲವಾರು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳೂ ಸಹ ಮುಂಚೂಣಿಗೆ ಬಂದಿವೆ. ದೆಹಲಿಯ ಗ್ರೇಟರ್ ಕೈಲಾಶ್‌ನಲ್ಲಿರುವ 'ಕೋನಾ' (Kona) ಎಂಬ ಸ್ಯಾಂಡ್‌ವಿಚ್ ಕೆಫೆಯು ಪ್ರತಿಭಟನಾಕಾರರಿಗೆ ಆಹಾರದ ಪೊಟ್ಟಣಗಳನ್ನು ಕಳುಹಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡು, "ನಮ್ಮ ದೇಶದ ಯುವಜನತೆಯ ಪರವಾಗಿ ನಾವಿದ್ದೇವೆ" ಎಂದು ಬಹಿರಂಗ ಬೆಂಬಲ ಘೋಷಿಸಿದೆ. ಇದರೊಂದಿಗೆ ಆನ್‌ಲೈನ್ ಆರ್ಡರ್‌ಗಳ ಹೊರತಾಗಿಯೂ, ಸ್ಥಳೀಯ ಸಾರ್ವಜನಿಕರು ಹಾಗೂ ಸಮುದಾಯ ಸಂಸ್ಥೆಗಳು ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಮನೆಯಲ್ಲಿ ತಯಾರಿಸಿದ ಊಟ, ಹಣ್ಣುಗಳು ಮತ್ತು ನೀರಿನ ಬಾಟಲಿಗಳನ್ನು ವಿತರಿಸುತ್ತಿವೆ.
2026ರ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ, ಶಿಕ್ಷಣ ರಂಗದ ಸುಧಾರಣೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಈ ಸುದೀರ್ಘ ಧರಣಿಗೆ ಸಾರ್ವಜನಿಕ ಬೆಂಬಲವು ನೈಜ ರೂಪದಲ್ಲಿ ವ್ಯಕ್ತವಾಗುತ್ತಿದೆ. ಪ್ರತಿಭಟನಾ ಸ್ಥಳದಲ್ಲಿ ಪ್ರತಿ ಹೆಜ್ಜೆಗೂ ಸ್ವಯಂಸೇವಕರು ಇತರ ಹೋರಾಟಗಾರರಿಗೆ ಉಚಿತ ಆಹಾರ ನೀಡುತ್ತಿರುವುದು ಕಂಡುಬರುತ್ತಿದೆ. ಜೊತೆಗೆ, ದೆಹಲಿಯ ಸುಡುವ ಬಿಸಿಲನ್ನು ತಡೆಯಲು ಸ್ವಯಂಸೇವಕರು ನಿರಂತರವಾಗಿ ನೀರಿನ ಬಾಟಲಿಗಳು ಮತ್ತು ಒಆರ್‌ಎಸ್ (ORS) ಸೇವನೆಯ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ.