ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್
ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಕುರಿತು ಆರ್ಜೆಡಿ ನಾಯಕ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್(Tejashwi Yadav) ಪ್ರತಿಕ್ರಿಯಿಸಿದ್ದು, ಯಾರೇ ಸರ್ಕಾರ ರಚಿಸಿದ್ರೂ ಅದು ಜನಾದೇಶವಲ್ಲ, ಇನ್ಮುಂದೆ ಗುಜರಾತಿನ ಇಬ್ಬರಿಂದ ಬಿಹಾರದ ಆಡಳಿತ ನಡೆಯುತ್ತದೆ ಎಂದು ಹೇಳಿದ್ದಾರೆ.
ಪಾಟ್ನಾದಲ್ಲಿ ಈ ಕುರಿತು ಮಾತನಾಡಿರುವ ಅವರು, ನಿತೀಶ್ ಕುಮಾರ್ ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಹಾತ್ಮ ಗಾಂಧಿ ಹತ್ಯೆ ಮಾಡಿದವರ ಸಿದ್ದಾಂತವನ್ನು ಹೊಂದಿರುವ ಪಕ್ಷವನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸುತ್ತಿದ್ದಾರೆ. ಪ್ರತಿಸಾರಿ ಅವರು ಬಾಪು ಹೆಸರನ್ನು ಬಳಸುತ್ತಿದ್ದರು. ಆದರೆ ಈಗ ಅವರು ನಾಥೂರಾಮ್ ಗೊಡ್ಸೆ ಸಿದ್ದಾಂತದ ಪಕ್ಷಕ್ಕೆ ಮತ್ತು ಕರ್ಪೂರಿ ಠಾಕೂರ್ ಅವರನ್ನು ನಿಂದಿಸಿದವರಿಗೆ ಅವಕಾಶ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷಗಳ ಕಾಲ ಬಿಹಾರ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರು, ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾರಣ ಇಂದು(ಏ. 14) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಧ್ಯಾಹ್ನ 3.15ರ ಸುಮಾರಿಗೆ ಬಿಹಾರದ ಲೋಕಭವನದಲ್ಲಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಬಳಿಕ ತಮ್ಮಿಂದ ಅಧಿಕಾರ ವಹಿಸಿಕೊಳ್ಳಲಿರುವ ಹೊಸ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸಾಮ್ರಾಟ್ ಚೌಧರಿ ಮುಂದಿನ ಸಿಎಂ
ನಿತೀಶ್ ಕುಮಾರ್ ರಾಜೀನಾಮೆ ಬಳಿಕ ಬಿಹಾರ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಬಿಜೆಪಿ ತನ್ನ ಪ್ರಬಲ ದಾಳವನ್ನು ಉರುಳಿಸಿದೆ. ದೀರ್ಘಕಾಲದ ಚರ್ಚೆ, ರಾಜಕೀಯ ಲೆಕ್ಕಾಚಾರದ ಬಳಿಕೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸಾಮ್ರಾಟ್ ಚೌಧರಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಿದೆ. ನಾಳೆ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಮೂಲಕ ಬಿಹಾರದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಬಿಜೆಪಿಯ ಮೊಟ್ಟಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಗಿ ಸಾಮ್ರಾಟ್ ಚೌಧರಿ ಪಾತ್ರರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ಬಿಹಾರದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಗಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ, ಈಗ ಮೊದಲ ಬಾರಿಗೆ ಸ್ವತಂತ್ರವಾಗಿ ಮತ್ತು ತನ್ನದೇ ನಾಯಕತ್ವದಲ್ಲಿ ಸರ್ಕಾರವನ್ನು ಮುನ್ನಡೆಸಲು ಸಜ್ಜಾಗಿದೆ (ಏಜೆನ್ಸೀಸ್).