ದೆಹಲಿ: ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮ ದಿನ, ಇದನ್ನು ಉತ್ತಮ ಆಡಳಿತ ದಿನವನ್ನಾಗಿ (ಸುಶಾಸನ ದಿನ) ಆಚರಿಸಲಾಗುತ್ತದೆ. ಅಟಲ್ಜಿ 1998 ರಿಂದ 2004 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಪೂರ್ಣ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿದ್ದಾರೆ.
ಒಬ್ಬ ಯಶಸ್ವಿ ರಾಜಕಾರಣಿಯಾಗಿ ಮತ್ತು ವಿವಿಧ ಹಂತಗಳಲ್ಲಿ ದೇಶವನ್ನು ಪ್ರತಿನಿಧಿಸಿರುವ ವಾಜಪೇಯಿ ಅವರು, ತಮ್ಮ ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು, ಅದರಲ್ಲಿ ವಿಶೇಷ ಸಾಧನೆ ಎಂದರೆ ನಾಲ್ಕು ರಾಜ್ಯಗಳಿಂದ, ಆರು ವಿಭಿನ್ನ ಲೋಕಸಭಾ ಕ್ಷೇತ್ರಗಳಿಂದ ಗೆಲುವು ಸಾಧಿಸಿದ ಭಾರತದ ಏಕೈಕ ರಾಜಕಾರಣಿಯಾಗಿದ್ದಾರೆ.
ಉತ್ತರ ಪ್ರದೇಶದ ಬಲರಾಂಪುರದಿಂದ ಲೋಕಸಭೆಗೆ ಆಯ್ಕೆಯಾದ ಅಟಲ್ಜಿ, 1957 ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. 1967 ರಲ್ಲಿ ಮತ್ತೆ ಬಲರಾಂಪುರದಿಂದ ಸ್ಪರ್ಧಿಸಿ 1971 ರವರೆಗೆ ಆ ಕ್ಷೇತ್ರವನ್ನು ಪ್ರತಿನಿಧಿಸಿದರು. 1971 ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 1977 ರಿಂದ 1984 ರವರೆಗೆ ನವದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾದರು, 1991 ರಲ್ಲಿ ಮಧ್ಯಪ್ರದೇಶದ ವಿದಿಶಾ ಮತ್ತು ಉತ್ತರ ಪ್ರದೇಶದ ಲಕ್ನೋದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. 1994 ರ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ಮತ್ತೆ ಗುಜರಾತ್‌ನ ಗಾಂಧಿನಗರ ಮತ್ತು ಲಕ್ನೋದಿಂದ ಸ್ಪರ್ಧಿಸಿದರು.
ಬಲರಾಂಪುರ: 1957 ಮತ್ತು 1967
ಲಕ್ನೋ: 1991 ರಿಂದ 2004 ರವರೆಗೆ ಸತತ ಐದು ಬಾರಿ ಗೆಲುವು.
ನವದೆಹಲಿ: 1977 ಮತ್ತು 1980 ರಲ್ಲಿ ಗೆಲುವು.
ಒಟ್ಟಾರೆಯಾಗಿ, ಅವರು ನಾಲ್ಕು ರಾಜ್ಯಗಳ ಆರು ವಿಭಿನ್ನ ಲೋಕಸಭಾ ಸ್ಥಾನಗಳಿಂದ ಸ್ಪರ್ಧಿಸಿದರು. ಲೋಕಸಭೆಯಷ್ಟೆ ಅಲ್ಲದೇ, 1962 ರಲ್ಲಿ ಉತ್ತರ ಪ್ರದೇಶದಿಂದ ಮತ್ತು 1986 ರಲ್ಲಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದರು.
ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ
1924 ರ ಡಿಸೆಂಬರ್ 25 ರಂದು ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ಅವರು 1996 ಮತ್ತು 2004 ರ ನಡುವೆ ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 2018 ಆಗಸ್ಟ್ 16 ರಂದು ನಿಧನರಾದರು.
ಅಟಲ್ಜಿ ಜನ್ಮದಿನದ ಹಿನ್ನಲೆಯಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ದೇಶವಾಸಿಗಳ ಹೃದಯದಲ್ಲಿ ನೆಲೆಸಿರುವ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜಿ ಅವರಿಗೆ ಜನ್ಮ ವಾರ್ಷಿಕೋತ್ಸವದಂದು ನನ್ನ ಗೌರವಯುತ ನಮನಗಳು. ಅವರನ್ನು ಯಾವಾಗಲೂ ಅದ್ಭುತ ವಾಗ್ಮಿ ಮತ್ತು ಉತ್ಸಾಹಭರಿತ ಕವಿಯಾಗಿ ಸ್ಮರಿಸಲಾಗುತ್ತದೆ. ಅವರ ವ್ಯಕ್ತಿತ್ವ, ಕೆಲಸ ಮತ್ತು ನಾಯಕತ್ವವು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಮಾರ್ಗದರ್ಶಕ ಬೆಳಕಾಗಿ ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಇಂದು ಲಕ್ನೋಗೆ ಭೇಟಿ ನೀಡಲಿದ್ದು, ಅಲ್ಲಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿ, ರಾಷ್ಟ್ರ ಪ್ರೇರಣಾ ಸ್ಥಳವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರ ಪ್ರೇರಣಾ ಸ್ಥಳವನ್ನು 230 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗಿದ್ದು, ಇದು 65 ಎಕರೆಗಳಷ್ಟು ವಿಸ್ತಾರವಾಗಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿಯ ಮೂಲಗಳು ತಿಳಿಸಿವೆ(ಏಜೆನ್ಸೀಸ್).