ಆಂಧ್ರಪ್ರದೇಶ: ತಿರುಪತಿ ತಿರುಮಲ ದೇಗುಲಕ್ಕೆ ಬರೋಬ್ಬರಿ 121 ಕೆಜಿ ತೂಕದ 45 ಚಿನ್ನಾಭರಣಗಳು ಉಡುಗೊರೆಯಾಗಿ ನೀಡಿದ ವ್ಯಕ್ತಿಯ ಬಗ್ಗೆ ಇದೀಗ ಸಾವಿರಾರು ಭಕ್ತಾಧಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದೇವರಿಗೆ ಅರ್ಪಿಸಿದ ಆತ ಯಾರು? ಎಲ್ಲಿಯವರು? ಎಂಬ ಹಲವು ಪ್ರಶ್ನೆಗಳು ಸದ್ಯ ಜನರಲ್ಲಿ ಕಾಡತೊಡಗಿವೆ.
121 ಕೆಜಿ ತೂಕದ 45 ಚಿನ್ನಾಭರಣಗಳ ಒಟ್ಟ ಮೌಲ್ಯ ಸುಮಾರು 200 ಕೋಟಿ ರೂ. ಎನ್ನಲಾಗಿದ್ದು, ಆಂಧ್ರ ಸಿಎಂ ಚಂದ್ರಬಾಬು ಸಮ್ಮುಖದಲ್ಲಿ ದಾನಿಗಳು ಈ ಆಭರಣಗಳನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಅರ್ಪಿಸಿದ್ದಾರೆ. ಇದರಲ್ಲಿ, ಸ್ವಾಮಿಗೆ ಕಿರೀಟ, ಶಂಖ ಚಕ್ರಗಳು, ಸೊಂಟದವರೆಗಿನ ಹಸ್ತಗಳು, ವಡ್ಡನಾಮಗಳು, ಪಾದುಕೆಗಳು ಸೇರಿದಂತೆ 45 ವಿವಿಧ ಬಗೆಯ ಆಭರಣಗಳನ್ನು ಶ್ರೀವರಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಟಿಟಿಡಿ ಮಾಹಿತಿಯ ಪ್ರಕಾರ, ದೇಗುಲದ ಇತಿಹಾಸದಲ್ಲೇ ಇಲ್ಲಿಯವರೆಗೆ ದಾಖಲೆಯಾಗಿರುವ ಚಿನ್ನಾಭರಣಗಳ ಕೊಡುಗೆಯಲ್ಲಿ ಯಾರೊಬ್ಬರು ಈ ಪಾಟಿ ಚಿನ್ನವನ್ನು ದೇಣಿಗೆ ರೂಪದಲ್ಲಿ ನೀಡಿಲ್ಲ ಎಂದು ಹೇಳಲಾಗಿದೆ. ಈ ವಿಚಾರ ಹೊರಬೀಳುತ್ತಿದ್ದಂತೆ ಸದ್ಯ ದೇಶಾದ್ಯಂತ ಭಾರಿ ಚರ್ಚೆ ಶುರುವಾಗಿದ್ದು, ಟಿಟಿಡಿಗೆ ಇಷ್ಟೊಂದು ದೊಡ್ಡ ಮೊತ್ತದ ಚಿನ್ನ ಕಾಣಿಕೆ ನೀಡಿದವರು ಯಾರು? ಇದರ ಹಿಂದಿರುವ ಉದ್ದೇಶವೇನು? ಎಂದು ನೆಟ್ಟಿಗರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ವರದಿಗಳ ಪ್ರಕಾರ, ತಿರುಮತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನಾಭರಣಗಳನ್ನು ನೀಡಿದ ದಾನಿ ವರ್ಧಮಾನ್ ಜೈನ್ ಎಂಬುವವರು. ಅವರು ಪ್ರಮುಖ ಕೈಗಾರಿಕೋದ್ಯಮಿ ಆಗಿದ್ದು, ಆ್ಯಕ್ಸೆಸ್ ಹೆಲ್ತ್ಕೇರ್ನ ಸಹ-ಸಂಸ್ಥಾಪಕ ಮತ್ತು ಉಪಾಧ್ಯಕ್ಷರು ಎನ್ನಲಾಗಿದೆ. ವ್ಯಾಪಾರ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೆನ್ನೈ ಮೂಲದ ವ್ಯಾಪಾರ ಸಮೂಹ ಇವರದ್ದಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಲೇ ಆಧ್ಯಾತ್ಮಿಕತೆ ಮತ್ತು ಸಮಾಜ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುವ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ವರ್ಧಮಾನ್ ಈಗ ದೇಗುಲಕ್ಕೆ ಕ್ವಿಂಟಾಲ್ ಮೀರಿದಷ್ಟು ಚಿನ್ನವನ್ನು ಅರ್ಪಿಸಿದ್ದಾರೆ.
ವರ್ಧಮಾನ್ ಜೈನ್ ಅವರು ಚೆನ್ನೈನ ಪ್ರತಿಷ್ಠಿತ ಲೊಯೊಲಾ ಕಾಲೇಜಿನಲ್ಲಿ ಪದವಿ ಪಡೆದವರು. ತದನಂತರ, ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋದರು ಮತ್ತು ಟೆಕ್ಸಾಸ್ ವಿಶ್ವವಿದ್ಯಾಲಯದಿಂದ (ಆಸ್ಟಿನ್) ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ವರ್ಧಮಾನ್ ಜೈನ್ ಅವರು ಈ ಹಿಂದೆ ಡೆಲ್ ಸರ್ವಿಸಸ್ ಬಿಪಿಒನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಆ ಸಮಯದಲ್ಲಿ, ಅವರು ಕಂಪನಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿಸಿದರು. ಅವರು ಆರೋಗ್ಯ ಬಿಪಿಒ ಕ್ಷೇತ್ರವನ್ನು ಪ್ರವೇಶಿಸಿದರು ಮತ್ತು ಆ್ಯಕ್ಸೆಸ್ ಹೆಲ್ತ್ಕೇರ್ ಅನ್ನು ಸ್ಥಾಪಿಸಿದರು. ಎಂಟರ್ಪ್ರೈಸ್ ಆಟೊಮೇಷನ್ ವಲಯದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದಲ್ಲದೆ, ಏಷ್ಯಾ (ಚೆನ್ನೈ) ಇಂಜಿನಿಯರಿಂಗ್ ಕಂಪನಿಯ ನಿರ್ದೇಶಕರೂ ಆಗಿದ್ದಾರೆ. ಅವರು ವಿಷನ್ ಹೆಲ್ತ್ಸೋರ್ಸ್ನ ಸಹ-ಸಂಸ್ಥಾಪಕರೂ ಆಗಿದ್ದಾರೆ ಎಂದು ವರದಿಯಾಗಿದೆ.
ವರ್ಧಮಾನ್ ಜೈನ್ ಅವರು 2019ರಿಂದ ಹಲವಾರು ಸಂದರ್ಭಗಳಲ್ಲಿ ಟಿಟಿಡಿಗೆ ಭಾರಿ ದೇಣಿಗೆಗಳನ್ನು ಕೊಡುತ್ತಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಈ ವರ್ಷ ಮೇ ತಿಂಗಳಲ್ಲಿ ಅವರು ಟಿಟಿಡಿಯ ಸಾರಿಗೆ ಅಗತ್ಯಗಳಿಗಾಗಿ ಎಲೆಕ್ಟ್ರಿಕ್ ಬಸ್ಗಳನ್ನು ಕೊಡುಗೆಯಾಗಿ ನೀಡಿದರು. ದೇಣಿಗೆಯಾಗಿ ವೆಂಕಟೇಶ್ವರ ಭಕ್ತಿ ಚಾನೆಲ್ (SVBC) ಅಭಿವೃದ್ಧಿಗೆ 7 ಕೋಟಿ ರೂ., ಟಿಟಿಡಿ ವ್ಯಾಪ್ತಿಯ ಗೋಶಾಲೆಯಲ್ಲಿ ದನಗಳ ಮೇವು ತಯಾರಿಸುವ ಮಿಕ್ಸಿಂಗ್ ಪ್ಲಾಂಟ್ ಸ್ಥಾಪನೆಗೆ 5 ಕೋಟಿ ರೂ. ಕೊಟ್ಟಿದ್ದಾರೆ.
ಇಷ್ಟೇ ಅಲ್ಲದೇ, ಹುಂಡಿಯಲ್ಲಿ ಭಕ್ತರು ನೀಡುವ ಕಾಣಿಕೆಯನ್ನು ಸುಲಭವಾಗಿ ಬೇರ್ಪಡಿಸಿ, ಎಣಿಸಲು 1 ಕೋಟಿ ರೂ. ಮೌಲ್ಯದ ನಾಣ್ಯ ವಿಂಗಡಣೆ ಯಂತ್ರವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).