ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್
- ಉಪವಾಸ ಹೋರಾಟ ಕೈಗೊಂಡಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅಸ್ವಸ್ಥ
- ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸತ್ಯಾಗ್ರಹ ಹೋರಾಟ
- ಅನಾರೋಗ್ಯದಿಂದ ಸಾವಿನ ದವಡೆಗೆ ಹೋಗಿರುವ ವಾಂಗ್‌ಚುಕ್ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ
Sonam Wangchuk: ಪ್ರಸ್ತುತ, ಲಡಾಖ್ ರಾಜಧಾನಿ ಲೇಹ್ ರಾಜ್ಯ ಸ್ಥಾನಮಾನಕ್ಕಾಗಿ ಮತ್ತು ನೀಟ್ ಪರೀಕ್ಷೆಯಲ್ಲಿ ನಡೆದ ಸೋರಿಕೆ ಪ್ರಕರಣದ ವಿರುದ್ಧ ಉಪವಾಸ ಹೋರಾಟ ಕೈಗೊಂಡಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್, ಕಳೆದ 18 ದಿನಗಳಿಂದ ಊಟ-ನೀರು ಬಿಟ್ಟ ಹಿನ್ನೆಲೆ ಇದೀಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ವಿಷಯ ಸದ್ಯ ದೇಶಾದ್ಯಂತ ಭಾರಿ ಚರ್ಚೆ, ಆಕ್ರೋಶಕ್ಕೆ ಕಾರಣವಾಗಿದೆ.
ನೀಟ್ ಪರೀಕ್ಷೆಯಲ್ಲಿ ಸೋರಿಕೆಗಳು ಹಲವು ಬಾರಿ ರಿಪೀಟ್ ಆಗಿದೆ. ಹೀಗಾದರೆ, ದೇಶಕ್ಕೆ ಎಂತಹ ವೈದ್ಯರು ಸಿಗುತ್ತಾರೆ. ಯಾವ ನಂಬಿಕೆ ಮೇಲೆ ಸರಿಯಾದ ಡಾಕ್ಟರ್ಗಳಿಂದ ಜನರು ಚಿಕಿತ್ಸೆ ಪಡೆಯಲಿದ್ದಾರೆ? ಎಂದು ಪ್ರಶ್ನಿಸಿರುವ ವಾಂಗ್‌ಚುಕ್, ಶಿಕ್ಷಣ ವ್ಯವಸ್ಥೆಯ ನ್ಯೂನತೆಗಳು ಹಾಗೂ ದೇಶದ ವಿವಿಧ ಜ್ವಲಂತ ಸಮಸ್ಯೆಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಇದು ದಿನೇ ದಿನೇ ಅವರ ಆರೋಗ್ಯಕ್ಕೆ ಕುತ್ತು ತಂದಿಡುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ರನ್ನು ಏಕೆ ಕೇಂದ್ರ ಸರ್ಕಾರ ಪ್ರಶ್ನಿಸುತ್ತಿಲ್ಲ. ತಕ್ಷಣಕ್ಕೆ ಜಾರಿಗೆ ಬರುವಂತೆ ಸಚಿವ ಸ್ಥಾನದಿಂದ ಇನ್ನೂ ಕೆಳಗಿಸಿಲ್ಲ ಏಕೆ ಎಂಬ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ದೇಶದ ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳು ಆಗಬೇಕು, ಭ್ರಷ್ಟಾಚಾರಗಳು ಕೊನೆಗೊಳ್ಳಬೇಕು ಮತ್ತು ಈಗಿನ ಶಿಕ್ಷಣ ಸಚಿವರನ್ನು ಕಿತ್ತುಬಿಸಾಡಿ ಎಂದು ವಾಂಗ್‌ಚುಕ್ ಡಿಮಾಂಡ್ ಮಾಡಿದ್ದಾರೆ. ಇಲ್ಲಿಯವರೆಗೆ, ಮೋದಿ ಸರ್ಕಾರ ನಮಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ ಎಂದಿರುವ ಸಿಜೆಪಿ ಪಕ್ಷ, ವಾಂಗ್‌ಚುಕ್ ಅವರ ಆರೋಗ್ಯ ತುಂಬಾ ವೀಕ್ ಆಗಿದೆ ಮತ್ತು 24 ಗಂಟೆಗಳು ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.
ಪ್ರಸ್ತುತ ಅವರ ತೂಕ 57.15 ಕೆಜಿಗೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ 400 ಗ್ರಾಂಗಳಷ್ಟು ಕುಸಿತವಾಗಿದೆ. ಉಪವಾಸ ಆರಂಭದಿಂದಲೂ ಅವರ ಒಟ್ಟು ತೂಕ ಇಳಿಕೆ 8.9 ಕೆಜಿಗೆ ಕಡಿಮೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಂವಾದದಲ್ಲಿ ಭಾಗಿಯಾಗಲು ಏಕೆ ನಿರಾಕರಿಸುತ್ತಿದ್ದಾರೆ? ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಇನ್ನೂ ಏಕೆ ವಿಚಾರಣೆಗೆ ಒಳಪಡಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ
ಸೋನಮ್ ವಾಂಗ್‌ಚುಕ್ ಪರವಾಗಿ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ರಾಜ್ಯವು ಕನಿಷ್ಠ ಕಾಳಜಿ ಮತ್ತು ಸಂವೇದನೆಯನ್ನು ತೋರಿಲ್ಲ. ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಕಾರ್ಯಕರ್ತನಿಗೆ ಬಲವಂತವಾಗಿ ಆಹಾರ ಒದಗಿಸಲು ನಿರ್ದೇಶನಗಳು ತುರ್ತಾಗಿ ಅಗತ್ಯವಿದೆ. ಇಲ್ಲದಿದ್ದಲ್ಲಿ, ಇನ್ನೆರೆಡು ದಿನಗಳಲ್ಲಿ ಅವರು ಸಾವಿಗೀಡಾಗುತ್ತಾರೆ ಎಂದು ವಿವರಿಸಲಾಗಿದೆ. ಈ ಅರ್ಜಿಯನ್ನು ನೋಡಿದ ಕೋರ್ಟ್, ನಾಳೆ (ಜು.16) ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಅಷ್ಟಕ್ಕೂ ಯಾರು ಈ ವ್ಯಕ್ತಿ?
ಸೋನಮ್ ಅವರು ಲಡಾಖಿ ಇಂಜಿನಿಯರ್, ಸಂಶೋಧಕ ಮತ್ತು ಈಗ ಮಾತೃಭೂಮಿಯ ರಾಜಕೀಯ ಕಾರ್ಯಕರ್ತ. 1966ರಲ್ಲಿ ಜನಿಸಿದ ಇವರು, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳಿಗಾಗಿ SECMOL ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಭಾರತೀಯ ಸೈನಿಕರಿಗೆ ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿರುವ ಹಿಮ ಸ್ತೂಪಗಳ ನಿರ್ಮಾಣ ಸೇರಿ ಭಾರತೀಯ ಸೇನೆಗಾಗಿ ಸೋನಮ್ ಹಲವಾರು ನಾವೀನ್ಯತೆಗಳನ್ನು ಸಹ ರಚಿಸಿದ್ದಾರೆ. ಅವರು ಲಡಾಖ್‌ನಲ್ಲಿ ನಡೆಯುತ್ತಿರುವ ಶೈಕ್ಷಣಿಕ ಸುಧಾರಣೆಗಳಿಗೆ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಲಡಾಖ್‌ನ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇದು ಸ್ಥಳೀಯ ಅಗತ್ಯತೆಗಳು ಮತ್ತು ಪರಿಸರ ಸ್ನೇಹಿ ವಿಧಾನಗಳಿಗೆ ಅನುಗುಣವಾಗಿ ಲಡಾಖ್‌ನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ತರಬೇತಿಯನ್ನು ಒದಗಿಸುತ್ತದೆ. ಶಿಕ್ಷಣ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಪ್ರವರ್ತಕರಾಗಿರುವ ವಾಂಗ್‌ಚುಕ್, ಲಡಾಖ್‌ಗೆ ಪೂರ್ಣ ರಾಜ್ಯತ್ವವನ್ನು ಕೋರುವ ಮೂಲಕ ರಾಜಕೀಯ ವಲಯಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.
'3 ಈಡಿಯಟ್ಸ್' ಚಿತ್ರಕ್ಕೇನು ಸಂಬಂಧ?
ಬಾಲಿವುಡ್ನ ಬ್ಲಾಕ್ಬಸ್ಟರ್ '3 ಈಡಿಯಟ್ಸ್' ಚಿತ್ರಕ್ಕೂ ಏನು ಸಂಬಂಧ? ಎಂಬ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಹೀಗಿದೆ. ಅಮಿರ್ ಖಾನ್ ಅಭಿನಯದ '3 ಈಡಿಯಟ್ಸ್' ಚಿತ್ರ ನೋಡಿದ್ದೀರಾ? ಶಿಕ್ಷಣ ವ್ಯವಸ್ಥೆಯ ವಿರುದ್ಧ ಹೋರಾಡಿದ ಅಸಾಧಾರಣ ಬುದ್ಧಿಜೀವಿ ಫುನ್ಸುಖ್ ವಾಂಗ್ಡು ಪಾತ್ರವನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದು. ಈ ಪಾತ್ರವನ್ನು ಬಾಲಿವುಡ್ ನಟ ಅಮೀರ್ ಖಾನ್ ಚಿತ್ರದಲ್ಲಿ ನಾಯಕನಾಗಿ ನಿರ್ವಹಿಸಿದ್ದಾರೆ. ಅವರ ಪಾತ್ರಕ್ಕೆ ಸಿನಿಪ್ರಿಯರಿಂದ ನಿರೀಕ್ಷೆಗೂ ಮೀರಿದ ಮೆಚ್ಚುಗೆಗಳು ಹರಿದುಬಂದವು. ಈ ಪಾತ್ರವು ಕೇವಲ ಸಿನಿಮಾಗೆ ಕಾಲ್ಪನಿಕವಾಗಿ ರೂಪಿಸಿದ್ದಲ್ಲ. ಬದಲಿಗೆ ವಾಂಗ್‌ಚುಕ್ ಅವರ ಬದುಕನ್ನೇ ಆಧರಿಸಿದ್ದು ಎಂಬುದು ಹಲವರಿಗೆ ಗೊತ್ತಿರದ ಸಂಗತಿ.