ಯುವಕ ನಿಸರ್ಗ ಅಧಿಕಾರಿ  
ದೇಶ

ಯಾರು ಈ ನಿಸರ್ಗ ಅಧಿಕಾರಿ? CBSE OSM ವ್ಯವಸ್ಥೆ ಬಯಲಿಗೆಳೆದ ಕಿಲಾಡಿಗೆ ಐಐಟಿ-ಕಾನ್ಪುರದಲ್ಲಿ ಉದ್ಯೋಗ

ಪ್ರಮುಖ ಮುಖ್ಯಾಂಶಗಳು

  • ಸಿಬಿಎಸ್ಸಿಯಲ್ಲಿ ದೋಷಗಳನ್ನು ಬೆಳಕಿಗೆ ತಂದ 19ರ ಯುವಕ
  • ಕೇವಲ 19ನೇ ವಯಸ್ಸಿಗೆ ಐಐಟಿ ಕಾನ್ಪುರದಲ್ಲಿ ಉದ್ಯೋಗ
  • ಸೈಬರ್ ಭದ್ರತೆಯಲ್ಲಿ ಅಪರೂಪದ ಅವಕಾಶ ಈ ಕಿಲಾಡಿಗೆ
ನವದೆಹಲಿ: ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ಆಯೋಮಯ. ಶರವೇಗದಲ್ಲಿ ಸಾಗುತ್ತಿರುವ ಇಂಟರ್​ನೆಟ್​ ಲೋಕದಲ್ಲಿ ಎಲ್ಲರೂ ಸಾಗುವುದು ಕಷ್ಟಸಾಧ್ಯವಾದರೂ ಮುಂದೋಗಬೇಕಿರುವುದು ಅನಿವಾರ್ಯ. ಸಾಕಷ್ಟು ಆನ್​ಲೈನ್​ ಗೋಲ್​ಮಾಲ್​, ವಂಚನೆ ಪ್ರಕರಣಗಳು ನಡೆಯುತ್ತಿರುವ ಮಧ್ಯೆ ಇಲ್ಲೊಬ್ಬ 19 ವರ್ಷದ ಯುವಕ, ತನ್ನ ಬುದ್ಧಿವಂತಿಕೆ, ಜಾಣ್ಮೆಯ ಕೆಲಸದಿಂದ ಐಐಟಿ ಕಾನ್ಪುರದಲ್ಲಿ ಉದ್ಯೋಗವನ್ನೇ ಗಿಟ್ಟಿಸಿಕೊಂಡಿದ್ದಾನೆ.
ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಈಗ ನಿಸರ್ಗ ಅಧಿಕಾರಿ ಸಾಬೀತುಪಡಿಸಿದ್ದಾರೆ. ತಂತ್ರಜ್ಞಾನದಲ್ಲಿ ಆಸಕ್ತಿ ಮತ್ತು ಕಠಿಣವಾಗಿ ಕಲಿಯುವ ಬಯಕೆಯಿದ್ದರೆ, ನೀವು ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಅವಕಾಶಗಳನ್ನು ಪಡೆಯಬಹುದು ಎಂಬ ಮಾತನ್ನು ತಮ್ಮ ಪ್ರಯಾಣದ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. ಇತ್ತೀಚೆಗೆ CBSE ಆನ್​ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯಲ್ಲಿನ ದೋಷಗಳನ್ನು ಗುರುತಿಸಿ ಅಧಿಕಾರಿಗಳ ಗಮನಕ್ಕೆ ತಂದ ನಿಸರ್ಗ, ಈಗ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಟಿ ಕಾನ್ಪುರದಲ್ಲಿ ಉದ್ಯೋಗ ಪಡೆಯುವ ಮೂಲಕ ದೇಶದ ಜನತೆಯ ಗಮನ ಸೆಳೆದಿದ್ದಾರೆ.

ಸೈಬರ್ ಭದ್ರತಾ ಕ್ಷೇತ್ರದಲ್ಲಿ ಅಪರೂಪದ ಅವಕಾಶ

ನಿಸರ್ಗ ಅಧಿಕಾರಿ ಅವರನ್ನು ಐಐಟಿ ಕಾನ್ಪುರದ ಸೈಬರ್ ರಕ್ಷಣಾ ಸಂಶೋಧನಾ ಕೇಂದ್ರ C3i ಹಬ್​ನಲ್ಲಿ ಓಪನ್ ಸೋರ್ಸ್ ಇಂಟೆಲಿಜೆನ್ಸ್ ಮತ್ತು ಥ್ರೆಟ್ ಇಂಟೆಲಿಜೆನ್ಸ್ ಇಂಜಿನಿಯರ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಮಹೀಂದ್ರ ಅಗರ್ವಾಲ್, ನಿಸರ್ಗ ಅವರನ್ನು ಅಸಾಧಾರಣ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕ. ಆತನ ಸೇರ್ಪಡೆ ಸೈಬರ್ ಭದ್ರತಾ ಸಂಶೋಧನೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಕೊಂಡಾಡಿದರು.

ಚಿಕ್ಕ ವಯಸ್ಸಿನಲ್ಲಿಯೇ ಟೆಕ್ನಿಕಲ್​ ಭೇದಿಸುವ ಜಾಣ್ಮೆ

ಈ ವರ್ಷ ಇಂಟರ್ಮೀಡಿಯೇಟ್ ಮುಗಿಸಿದ ನಿಸರ್ಗ, ಆರನೇ ವಯಸ್ಸಿನಲ್ಲಿಯೇ ಕೋಡಿಂಗ್ ಕಲಿಯಲು ಪ್ರಾರಂಭಿಸಿದರು. 6ನೇ ತರಗತಿಯಿಂದಲೇ ಸೈಬರ್ ಭದ್ರತೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡ ಅವರು, 'ಕ್ಯಾಪ್ಚರ್ ದಿ ಫ್ಲಾಗ್' ನಂತಹ ಹ್ಯಾಕಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ಹಲವಾರು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.

ನಿರೀಕ್ಷೆಗೆ ತಕ್ಕಂತಿಲ್ಲ ಸಂಬಳ

ಅಂತೆಯೇ, ಇತ್ತೀಚೆಗೆ CBSE OSM ಪೋರ್ಟಲ್‌ನಲ್ಲಿನ ನ್ಯೂನತೆಗಳನ್ನು ಗುರುತಿಸಿ CERT-Inನ ಗಮನಕ್ಕೆ ತಂದಿದ್ದಕ್ಕಾಗಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದಾರೆ. ಪ್ರಸ್ತುತ ಪೂರ್ಣ ಸಮಯದ ಸೈಬರ್ ಭದ್ರತಾ ಹುದ್ದೆ ಸಿಕ್ಕಿದ್ದಕ್ಕೆ ಸಂತಸ ಪಟ್ಟಿರುವ ಅವರು, ಸಂಬಳ ನಿರೀಕ್ಷೆಗೆ ತಕ್ಕಂತೆ ದೊರಕ್ಕಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).