Neeraj Kumar Sinha > ಬೂತ್ ಮಟ್ಟದಿಂದ ಬೆಳೆದ ಯುವ ನಾಯಕನಿಗೆ ಲಕ್!.
Neeraj Kumar Sinha: ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದ್ದು, ಅಭಿಷೇಕ್ ಕುಮಾರ್ ಬದಲಿಗೆ ನೀರಜ್ ಕುಮಾರ್ ಸಿನ್ಹಾ ಅವರನ್ನು ಕಣಕ್ಕಿಳಿಸಿದೆ. ನಾಮಪತ್ರ ಸಲ್ಲಿಸಿದ ಮರುದಿನವೇ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಬಿಜೆಪಿ ರಾಜ್ಯ ನಾಯಕರಿಗೆ ಪತ್ರ ಬರೆದ ಅಭಿಷೇಕ್ ಕುಮಾರ್, ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
ಅಭಿಷೇಕ್ ಕುಮಾರ್ ಹಿಂದೆ ಸರಿದಿದ್ದೇಕೆ?
ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿದ ಅಭಿಷೇಕ್ ಕುಮಾರ್, ಬಂಕಿಪುರ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಬಿಜೆಪಿ ಕೇಂದ್ರ ಮತ್ತು ರಾಜ್ಯ ನಾಯಕತ್ವಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆದರೆ, ಕೌಟುಂಬಿಕ ಕಾರಣಗಳಿಂದಾಗಿ ನನಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ವಿನಮ್ರವಾಗಿ ತಿಳಿಸಲು ಬಯಸುತ್ತೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಸೇವೆಯನ್ನು ಮುಂದುವರಿಸಲಿದ್ದೇನೆ ಎಂದು ಹೇಳಿದ್ದಾರೆ.
ತಂದೆಯ ಆ ತಪ್ಪಿಗೆ ಬಲಿಯಾಯ್ತಾ ಮಗನ ಟಿಕೆಟ್..?
ಅಭಿಷೇಕ್ ಕುಮಾರ್ ಅವರ ಈ ಅಚ್ಚರಿಯ ನಿರ್ಧಾರ ಬಿಹಾರದ ರಾಜಕೀಯ ವಲಯದಲ್ಲಿ ಎಲ್ಲರನ್ನೂ ಗೊಂದಲಕ್ಕೀಡು ಮಾಡಿದೆ. ಕೌಟುಂಬಿಕ ಕಾರಣಗಳಿಂದಾಗಿ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅಭಿಷೇಕ್ ಹೇಳಿದರೂ ಕೂಡ, ಇದರ ಹಿಂದೆ ಬೇರೆ ಕಥೆಯೇ ಇದೆ ಎಂದು ನಂಬಲರ್ಹ ಮೂಲಗಳು ಇಂಡಿಯಾ ಟಿವಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಮೂಲಗಳ ಪ್ರಕಾರ, ಅವರ ಕುಟುಂಬಕ್ಕೆ ಬಹುಕೋಟಿ ಮೇವು ಹಗರಣದ ಜೊತೆ ಇರುವ ಸಂಬಂಧದಿಂದಾಗಿ ಬಿಜೆಪಿ ಕೊನೆ ಕ್ಷಣದಲ್ಲಿ ಈ ಬದಲಾವಣೆ ಮಾಡಿದೆ ಎನ್ನಲಾಗಿದೆ.
ಬಂಟಿ ತಂದೆ ರವೀಂದ್ರ ಪ್ರಸಾದ್ ಅವರು ಮಗಧ್ ಕೆಮಿಕಲ್ಸ್ ಕಾರ್ಪೊರೇಷನ್'ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಅವರು ಮೇವು ಹಗರಣದಲ್ಲಿ ದೋಷಿಯಾಗಿದ್ದಾರೆ. ಸರ್ಕಾರಿ ಅಧಿಕಾರಿಗಳೊಂದಿಗೆ ಸಂಚು ರೂಪಿಸಿ, ನಕಲಿ ಬಿಲ್‌ಗಳ ಮೂಲಕ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಇವರ ಮೇಲಿತ್ತು. 2022 ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಮೇವು ಹಗರಣದಲ್ಲಿ ಶಿಕ್ಷೆ ವಿಧಿಸಿದ 75 ಜನರಲ್ಲಿ ರವೀಂದ್ರ ಪ್ರಸಾದ್ ಕೂಡ ಒಬ್ಬರಾಗಿದ್ದಾರೆ. ಸಿಬಿಐ 2001 ಮತ್ತು 2003 ರ ನಡುವೆ ದಾಖಲಿಸಿದ್ದ ಮೂರು ಚಾರ್ಜ್‌ಶೀಟ್‌ಗಳಲ್ಲಿ ಪ್ರಸಾದ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಈ ಅಪರಾಧಕ್ಕಾಗಿ ಅವರಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು ಎಂದು ತಿಳಿದುಬಂದಿದೆ.
ಇದರ ಜೊತೆಗೆ, ಅಭಿಷೇಕ್ ಕುಮಾರ್ ಸಿನ್ಹಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತಮ್ಮ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚಿದ್ದಾರೆ ಎನ್ನಲಾಗಿದೆ. ತಮ್ಮ ನಾಮಪತ್ರದ ದಾಖಲೆಗಳಲ್ಲಿ ತಾವು 10ನೇ ತರಗತಿ ಪಾಸ್ ಎಂದು ಘೋಷಿಸಿಕೊಂಡಿದ್ದರಾದರೂ, ಅದರಲ್ಲೂ ಕೆಲವು ಗಂಭೀರ ವ್ಯತ್ಯಾಸಗಳು ಕಂಡುಬಂದಿದ್ದವು. ಹೀಗಾಗಿ ಉಪಚುನಾವಣೆಗೂ ಮುನ್ನ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದ ಬಿಜೆಪಿ, ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನೇ ಬದಲಾಯಿಸಿದೆ ಎಂದು ಮೂಲಗಳು ಸೇರಿಸಿವೆ.
ಯಾರೀ ನೀರಜ್ ಕುಮಾರ್ ಸಿನ್ಹಾ?
ಬಿ.ಎ ಪದವೀಧರರಾಗಿರುವ ನೀರಜ್ ಕುಮಾರ್ ಸಿನ್ಹಾ, 2006 ರಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು. ಕಾಲಕ್ರಮೇಣ ಬೂತ್ ಅಧ್ಯಕ್ಷರಾಗಿ, ನರೇಂದ್ರ ಭಾರತಿ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಇವರು, ಪ್ರಸ್ತುತ ನರೇಂದ್ರ ಭಾರತಿ ಮಂಡಲದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಕುಟುಂಬವು ಬಿಜೆಪಿಯ ಸಿದ್ಧಾಂತಿಕ ಮೂಲವಾದ ಭಾರತೀಯ ಜನಸಂಘದೊಂದಿಗೆ ದೀರ್ಘಕಾಲದ ನಂಟು ಹೊಂದಿದೆ. ಇವರ ಚಿಕ್ಕಪ್ಪ ದಿವಂಗತ ನರೇಂದ್ರ ಭಾರತಿ ಅವರು ಜನಸಂಘದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, 1984 ರಲ್ಲಿ ನಿಧನರಾದರು. ಅವರ ಸೇವೆಯ ಸ್ಮರಣಾರ್ಥ ಸ್ಥಳೀಯ ಬಿಜೆಪಿ ಸಾಂಸ್ಥಿಕ ಘಟಕಕ್ಕೆ ನರೇಂದ್ರ ಭಾರತಿ ಮಂಡಲ ಎಂದೇ ಹೆಸರಿಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ರಾಜ್ಯಸಭೆಗೆ ಆಯ್ಕೆಯಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಬಂಕಿಪುರ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಜುಲೈ 13 ಕೊನೆಯ ದಿನವಾಗಿದೆ. ಜುಲೈ 30 ರಂದು ಮತದಾನ ನಡೆಯಲಿದ್ದು, ಆಗಸ್ಟ್ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್).