ಬೀದಿ ದೀಪ, ಸೊಳ್ಳೆ ಕಾಟ, ಹಸಿವಿನ ಸಂಕಟದ ಮಧ್ಯೆ 98 ರಷ್ಟು ಅಂಕ: ಸ್ಲಮ್ ಹುಡುಗಿಯ ಸಾಧನೆಗೆ ದೇಶವೇ ಫಿದಾ! Chandni Vishwakarma  
ದೇಶ

ಬೀದಿ ದೀಪ, ಸೊಳ್ಳೆ ಕಾಟ, ಹಸಿವಿನ ಸಂಕಟದ ಮಧ್ಯೆ 98 ರಷ್ಟು ಅಂಕ: ಸ್ಲಮ್ ಹುಡುಗಿಯ ಸಾಧನೆಗೆ ದೇಶವೇ ಫಿದಾ! Chandni Vishwakarma

ಪ್ರಮುಖ ಮುಖ್ಯಾಂಶಗಳು

  • ಬಡ ಮಕ್ಕಳಲ್ಲೂ ಅಗಾಧವಾದ ಬುದ್ಧಿವಂತಿಕೆ ಇರುತ್ತದೆ ಅನ್ನೋದಕ್ಕೆ ಈ ಹುಡುಗಿಯೇ ಸಾಕ್ಷಿ
  • ಮೂಲಭೂತ ಅವಶ್ಯಕತೆಗಳನ್ನೂ ಪೂರೈಸಲಾಗದ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಹುಡುಗಿ
  • ಇಂದು ಊಹಿಸಲಾಗದ ರೀತಿಯಲ್ಲಿ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ ಸಾಧಕಿ
  • ವಾಣಿಜ್ಯ ವಿಭಾಗದಲ್ಲಿ 500ಕ್ಕೆ 494 ಅಂಕಗಳನ್ನು ಗಳಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ ಚಾಂದನಿ
Chandni Vishwakarma : ಕೊಳಚೆ ಪ್ರದೇಶಗಳಲ್ಲಿ ಬೆಳೆಯುವ ಬಡ ಮಕ್ಕಳಲ್ಲೂ ಅಗಾಧವಾದ ಬುದ್ಧಿವಂತಿಕೆ ಇರುತ್ತದೆ ಅನ್ನೋದಕ್ಕೆ ಈ ಮೇಲಿನ ಫೋಟೋದಲ್ಲಿರುವ ಹುಡುಗಿ ಮತ್ತೊಂದು ಪುರಾವೆಯಾಗಿದ್ದಾಳೆ. ತನ್ನ ಮೂಲಭೂತ ಅವಶ್ಯಕತೆಗಳನ್ನೂ ಪೂರೈಸಲಾಗದ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಈ ಹುಡುಗಿ ಇಂದು ಊಹಿಸಲಾಗದ ರೀತಿಯಲ್ಲಿ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಬಹುಶಃ ಈ ಹುಡುಗಿ ಭವಿಷ್ಯದಲ್ಲಿ ಮತ್ತೊಬ್ಬ ಸ್ಲಮ್‌ಡಾಗ್ ಮಿಲಿಯನೇರ್ ಆದರು ಅಚ್ಚರಿಪಡಬೇಕಿಲ್ಲ. ಹಾಗಾದರೆ, ಈ ಹುಡುಗಿ ಯಾರು? ಈಕೆಯ ಹಿನ್ನೆಲೆ ಏನು? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಅಂದಹಾಗೆ, ಈ ಸಾಧಕಿಯ ಹೆಸರು ಚಾಂದನಿ ವಿಶ್ವಕರ್ಮ. ವಯಸ್ಸು 18. ಭೋಪಾಲ್‌ನ ಭೀಮ್ ನಗರ ಎಂಬ ಕೊಳಚೆ ಪ್ರದೇಶದ ಹುಡುಗಿ ಈಕೆ. 2026ರ ಮಧ್ಯಪ್ರದೇಶ ಮಂಡಳಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಈಕೆ ಪಡೆದ ಅಂಕಗಳನ್ನು ತಿಳಿದರೆ, ನೀವು ಹುಬ್ಬೇರಿಸದೇ ಇರಲಾರಿರಿ. ತೀವ್ರ ಬಡತನದ ನಡುವೆಯೂ ಕಷ್ಟಪಟ್ಟು ಅಧ್ಯಯನ ಮಾಡಿ, ಯಶಸ್ವಿಯಾದ ಈಕೆಯ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ.
ಚಾಂದಿನಿಯ ತಂದೆ ದಿನಗೂಲಿ ಕೆಲಸಗಾರ. ಅವರು ಬಡಗಿಯಾಗಿ ಕೆಲಸ ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಾರೆ. ಅವರ ಆದಾಯವು ಮನೆಯ ಸಾಮಾನ್ಯ ಖರ್ಚಿಗೂ ಸಾಕಾಗುವುದಿಲ್ಲ. ನಿಜ ಹೇಳಬೇಕೆಂದರೆ, ಸಣ್ಣ ಅಗತ್ಯಗಳಿಗೂ ಸಾಲುವುದಿಲ್ಲ. ಮನೆಯಲ್ಲಿ ಎಲ್ಲಾ ಆರ್ಥಿಕ ತೊಂದರೆಗಳ ಹೊರತಾಗಿಯೂ, ಚಾಂದನಿ ತಮ್ಮ ಅಧ್ಯಯನದ ಮೇಲೆ ಅಚಲವಾಗಿ ಗಮನಹರಿಸಿದರು. ಕಡು ಬಡತನ ಲೆಕ್ಕಿಸದೇ ಓದೇ ಮೊದಲು ಎಂಬ ಗಟ್ಟಿ ನಿಲುವು ತೆಳೆದಳು. ತನ್ನ ಹಾದಿಯಲ್ಲಿ ಎದುರಾದ ಯಾವುದೇ ಕಷ್ಟಗಳಿಗೂ ಚಾಂದನಿ ಕರಗಲಿಲ್ಲ.
12ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ವಿವಿಧ ತರಬೇತಿ ಕೇಂದ್ರಗಳು ಮತ್ತು ಇತರ ಸಂಪನ್ಮೂಲಗಳನ್ನು ಅವಲಂಬಿಸಿದರು. ಆದರೆ, ಚಾಂದನಿ ಮಾತ್ರ ಬಡ ಮಕ್ಕಳಿಗಾಗಿಯೇ ಇರುವ ಉಚಿತ ಶಾಲೆ ಗುರುದೇವಗುಪ್ತ ಶಿಕ್ಷಾ ಕೇಂದ್ರದಲ್ಲಿ ಅಧ್ಯಯನ ಮಾಡಿದರು. ತಮ್ಮ ಕಳಪೆ ಜೀವನ ಪರಿಸ್ಥಿತಿಗಳಿಂದಾಗಿ, ಬೀದಿ ದೀಪಗಳು ಮತ್ತು ಸೊಳ್ಳೆಗಳ ಕಾಟದ ನಡುವೆ ಕಠಿಣ ಮತ್ತು ದಣಿವರಿಯಿಲ್ಲದೆ ಅಧ್ಯಯನ ಮಾಡಿದರು ಚಾಂದನಿ.
ಚಾಂದನಿ ಪಟ್ಟ ಕಷ್ಟವು ಇಂದು ಪ್ರತಿಫಲವನ್ನು ನೀಡಿದ್ದು, ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಹೌದು, ಮಧ್ಯಪ್ರದೇಶ ಇಂಟರ್ ಬೋರ್ಡ್ ಪರೀಕ್ಷೆಯಲ್ಲಿ ಶೇ. 98.8 ರಷ್ಟು ಅಂಕಗಳೊಂದಿಗೆ ಚಾಂದನಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 500 ಅಂಕಗಳಲ್ಲಿ 494 ಅಂಕಗಳನ್ನು (98.8%) ಗಳಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಅಂದಹಾಗೆ, ಚಾಂದನಿ ಅವರ ಗೆಲುವು ಸಾಧಾರಣ ಗೆಲುವಲ್ಲ, ಅದೊಂದು ಅಸಾಧಾರಣ ಗೆಲುವು. ಬಡತನ ಹಿನ್ನೆಲೆಯ ಹುಡುಗಿಯೊಬ್ಬಳು ಸಾಕಷ್ಟು ಕೊರತೆಗಳ ನಡುವೆ ಐಷಾರಾಮಿ ಕಾಲೇಜುಗಳಲ್ಲಿ ಓದುತ್ತಿರುವ ಸಕಲ ಸೌಕರ್ಯಗಳನ್ನೂ ಹೊಂದಿರುವ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಉನ್ನತ ಸ್ಥಾನ ಪಡೆದಿರುವುದು ನಿಜಕ್ಕೂ ಅದ್ಭುತ ಸಾಧನೆಯಾಗಿದೆ, (ಏಜೆನ್ಸೀಸ್​).