ಯಾರಿಗೆ ಕೆಟ್ಟ ದಿನಗಳು ಶುರುವಾಗಿವೆ ಗೊತ್ತಲ್ಲ? ಹಿಮಂತ ಪೋಸ್ಟ್‌ಗೆ ಸುವೇಂದು ಸಖತ್ ರಿಪ್ಲೈ!
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪದಗ್ರಹಣ ಮಾಡಿದ ಹಿಮಂತ ಬಿಸ್ವ ಶರ್ಮಾ ಮತ್ತು ಬಂಗಾಳದ ನೂತನ ಸಾರಥಿ ಸುವೇಂದು ಅಧಿಕಾರಿ(Himanta-Suvendu) ಅವರ ನಡುವಿನ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದು ಈಗ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಇಬ್ಬರೂ ನಾಯಕರು ಯಾರ ಹೆಸರನ್ನೂ ಎತ್ತದಿದ್ದರೂ, ಅವರ ಗುರಿ ಯಾರ ಮೇಲೆ ಎಂಬುದು ಮಾತ್ರ ಗುಟ್ಟಾಗಿ ಉಳಿದಿಲ್ಲ.
ಹಿಮಂತ ಶರ್ಮಾ ಅವರ ಆ 'ಕ್ರಿಪ್ಟಿಕ್' ಪೋಸ್ಟ್!
ಅಸ್ಸಾಂನ ಗುವಾಹಟಿಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಸುವೇಂದು ಅಧಿಕಾರಿ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡ ಹಿಮಂತ ಬಿಸ್ವ ಶರ್ಮಾ, ಕೆಟ್ಟ ದಿನಗಳು ಬರಲಿವೆ. ನಿಮಗೇ ಗೊತ್ತಲ್ಲ ಅವರು ಯಾರು ಅಂತ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತರಹೇವಾರಿ ಚರ್ಚೆಗಳಿಗೆ ಗ್ರಾಸವಾಗಿದೆ.
ಸುವೇಂದು ಅಧಿಕಾರಿ ಅವರ ಸ್ಫೋಟಕ ಪ್ರತಿಕ್ರಿಯೆ
ಹಿಮಂತ ಶರ್ಮಾ ಅವರ ಈ ಪೋಸ್ಟ್‌ಗೆ ಅಷ್ಟೇ ವೇಗವಾಗಿ ಪ್ರತಿಕ್ರಿಯಿಸಿದ ಬಂಗಾಳ ಸಿಎಂ ಸುವೇಂದು ಅಧಿಕಾರಿ, ಊಹಿಸುವುದಕ್ಕೆ ಯಾವುದೇ ಬಹುಮಾನದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಈ ಇಬ್ಬರು ನಾಯಕರ ಈ ಸಂಭಾಷಣೆಯು ವಿರೋಧ ಪಕ್ಷದ ನಾಯಕರಿಗೆ ಮತ್ತು ನುಸುಳುಕೋರರಿಗೆ ನೀಡಿರುವ ನೇರ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಯಾರು ಆ..?
ಇಬ್ಬರೂ ನಾಯಕರು ಯಾರ ಹೆಸರನ್ನೂ ಪ್ರಸ್ತಾಪಿಸದಿದ್ದರೂ, ರಾಜಕೀಯ ವಿಶ್ಲೇಷಕರ ಪ್ರಕಾರ ಈ ಗುರಿ ಇಬ್ಬರ ಮೇಲಿದೆ.
ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ: ಬಂಗಾಳದಲ್ಲಿ 15 ವರ್ಷಗಳ ಆಡಳಿತ ಅಂತ್ಯಗೊಂಡ ಬೆನ್ನಲ್ಲೇ ಸುವೇಂದು ಅವರ ಈ ಮಾತುಗಳು ಮಮತಾ ಬ್ಯಾನರ್ಜಿ ಅವರ ರಾಜಕೀಯ ಭವಿಷ್ಯದ ಕುರಿತಾಗಿವೆ ಎನ್ನಲಾಗುತ್ತಿದೆ.
ಅಕ್ರಮ ನುಸುಳುಕೋರರು: ಹಿಮಂತ ಶರ್ಮಾ ಮತ್ತು ಸುವೇಂದು ಅಧಿಕಾರಿ ಇಬ್ಬರೂ ಅಕ್ರಮ ನುಸುಳುವಿಕೆಯ ವಿರುದ್ಧ ಪ್ರಬಲ ನಿಲುವು ಹೊಂದಿದ್ದಾರೆ. ಅಸ್ಸಾಂ ಮತ್ತು ಬಂಗಾಳದ ಗಡಿ ಭಾಗಗಳಲ್ಲಿ ಜನಸಂಖ್ಯಾ ಸಮತೋಲನವನ್ನು ಕದಡುತ್ತಿರುವ ಶಕ್ತಿಗಳಿಗೆ ಈಗ ಕೆಟ್ಟ ದಿನಗಳು ಆರಂಭವಾಗಿವೆ ಎಂಬುದು ಈ ಪೋಸ್ಟ್‌ನ ಅಂತರಾರ್ಥವಾಗಿದೆ.
ಸುವೇಂದು ಅವರ ಮೊದಲ 'ಮಾಸ್ಟರ್ ಸ್ಟ್ರೋಕ್'
ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಸುವೇಂದು ಅಧಿಕಾರಿ ಅವರು ಕೈಗೊಂಡ ಮೊದಲ ಪ್ರಮುಖ ನಿರ್ಧಾರವೆಂದರೆ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ನಿರ್ಮಾಣ ಮಾಡಲು ಜಾಗ ನೀಡಿದರು.
ಗಡಿ ಭದ್ರತಾ ಪಡೆಗೆ (BSF) ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ವೇಗಗೊಳಿಸಲು ಅವರು ಆದೇಶಿಸಿದ್ದಾರೆ.
ನುಸುಳುವಿಕೆ ಮತ್ತು ಕಳ್ಳಸಾಗಣೆಯನ್ನು ತಡೆಗಟ್ಟಲು ಗಡಿಯಲ್ಲಿರುವ ಎಲ್ಲಾ ಕಿಂಡಿಗಳನ್ನು ಮುಚ್ಚುವುದು ಸುವೇಂದು ಸರ್ಕಾರದ ಮೊದಲ ಆದ್ಯತೆಯಾಗಿದೆ.
ಅಸ್ಸಾಂನಲ್ಲಿ ಹಿಮಂತ ಹವಾ
ಸತತ ಮೂರನೇ ಬಾರಿಗೆ ಅಸ್ಸಾಂನಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಿಮಂತ ಬಿಸ್ವ ಶರ್ಮಾ, ಅಕ್ರಮ ಒತ್ತುವರಿ ಮತ್ತು ನುಸುಳುಕೋರರ ಬೆನ್ನೆಲುಬು ಮುರಿಯುವುದಾಗಿ ಚುನಾವಣಾ ಪ್ರಚಾರದ ವೇಳೆ ಘೋಷಿಸಿದ್ದರು. ಈಗ ಸುವೇಂದು ಅವರ ಬೆಂಬಲದೊಂದಿಗೆ ಪೂರ್ವ ಭಾರತದಲ್ಲಿ ಬಿಜೆಪಿಯ ಪ್ರಭಾವವನ್ನು ಮತ್ತಷ್ಟು ಗಟ್ಟಿಗೊಳಿಸಲು ಅವರು ಸಜ್ಜಾಗಿದ್ದಾರೆ.
ಬಂಗಾಳ ಮತ್ತು ಅಸ್ಸಾಂ ನಡುವಿನ ಈ ಡಬಲ್ ಎಂಜಿನ್ ಜೋಡಿಯು ಪೂರ್ವ ಭಾರತದ ರಾಜಕೀಯ ಮತ್ತು ಭದ್ರತಾ ಚಿತ್ರಣವನ್ನು ಹೇಗೆ ಬದಲಿಸಲಿದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ. ಸುವೇಂದು ಮತ್ತು ಹಿಮಂತ ಅವರ ಈ ಸ್ನೇಹ ಮತ್ತು ಕಾರ್ಯತಂತ್ರವು ವಿರೋಧ ಪಕ್ಷಗಳ ನಿದ್ದೆಗೆಡಿಸಿರುವುದಂತೂ ನಿಜ,(ಏಜೆನ್ಸೀಸ್).