- ಸಂಬಳ ಪಡೆಯುವ ನೌಕರರು ವೈಯಕ್ತಿಕ ಕಾರು ಸಾಲದ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿಲ್ಲ.
- ಸ್ವಂತ ಉದ್ಯೋಗ ಅಥವಾ ವೃತ್ತಿಪರರು ಕಾರು ಸಾಲದ ಬಡ್ಡಿಯನ್ನು ವ್ಯವಹಾರದ ವೆಚ್ಚವಾಗಿ ತೋರಿಸಿ ತೆರಿಗೆ ಉಳಿಸಬಹುದು.
- ಪಾವತಿಸಿದ ಬಡ್ಡಿಯ ಮೊತ್ತವನ್ನು ತೆರಿಗೆಗೆ ಒಳಪಡುವ ಆದಾಯದಿಂದ ಕಳೆಯಲು ಅವಕಾಶವಿದೆ.
- ಕಾರಿನ ಸವಕಳಿ ದರವನ್ನು ಆಧರಿಸಿ ಹೆಚ್ಚುವರಿ ತೆರಿಗೆ ಲಾಭ ಪಡೆಯಬಹುದು.
Car Loan Tax Benefits: ಬದುಕೋಕೆ ಒಂದು ಮನೆ. ಓಡಾಡೋಕೆ ಒಂದು ಕಾರು ಇದ್ದರೆ ಸಾಕು ಅನ್ನೋದು ಮಧ್ಯಮ ವರ್ಗದ ಜನರ ಸಾಮಾನ್ಯ ಆಸೆ. ಆದರೆ, ಕಾರು ಕೊಂಡುಕೊಳ್ಳಲು ಹಣ ಹೊಂದಿಸುವುದರಲ್ಲೇ ಅಥವಾ ಕೊಂಡುಕೊಂಡರೂ EMI ಕಟ್ಟುವುದರಲ್ಲೇ ಜೀವನ ಸವೆಸಿಬಿಡುತ್ತಾರೆ. ಮತ್ತೊಂದು ವಿಚಾರ ಎಂದರೆ, ಮನೆ ಖರೀದಿಸಿದಾಗ ಸಿಗುವ ತೆರಿಗೆ ಲಾಭಗಳು ಕಾರು ಖರೀದಿಸಿದಾಗ ಸಿಗುವುದಿಲ್ಲ ಎಂಬ ಭಾವನೆ ಅನೇಕರಲ್ಲಿದೆ. ಹೀಗಾಗಿ, ಕೆಲವರು ಈ ಕಾರಿನ ಸಹವಾಸವೇ ಬೇಡ ಎಂದು ತಮ್ಮ ಆಸೆಯನ್ನು ಹಾಗೇಯೇ ಬಚ್ಚಿಟ್ಟುಕೊಂಡುಬಿಡುತ್ತಾರೆ. ಅಂತವರಿಗೆ ಒಂದು ಗುಡ್ನ್ಯೂಸ್ ಸಿಕ್ಕಿದೆ.
ಹೌದು, ಭಾರತೀಯ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ನೀವು ವೃತ್ತಿಪರರಾಗಿದ್ದರೆ ಅಥವಾ ಸ್ವಂತ ಉದ್ಯೋಗ ಹೊಂದಿದ್ದರೆ, ಕಾರು ಸಾಲದ ಮೇಲೆ ತೆರಿಗೆ ಉಳಿತಾಯ ಮಾಡಲು ಅವಕಾಶಗಳಿವೆ. ಹೇಗೆ ಅನ್ನೋದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಯಾರಿಗೆಲ್ಲ ಲಾಭ ಸಿಗಲಿದೆ?
ಸಂಬಳ ಪಡೆದು ಜೀವನ ಸಾಗಿಸುವ ಉದ್ಯೋಗಿಗಳು ತಮ್ಮ ವೈಯಕ್ತಿಕ ಬಳಕೆಯ ಕಾರಿನ ಸಾಲದ ಮೇಲೆ ಯಾವುದೇ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ. ಆದರೆ, ಸ್ವಯಂ ಉದ್ಯೋಗಿ ಅಥವಾ ವೃತ್ತಿಪರರಾಗಿದ್ದರೆ ನೀವು ಈ ಲಾಭವನ್ನು ಪಡೆಯಬಹುದು.
ಉದ್ಯಮಿಗಳಿಗೆ ಕಾರು ಖರೀದಿ ಹೇಗೆ ಲಾಭ?
ನೀವು ನಿಮ್ಮ ಉದ್ಯೋಗದ ವಿಚಾರಕ್ಕಾಗಿ ಅಥವಾ ವ್ಯವಹಾರಕ್ಕಾಗಿ ಕಾರು ಖರೀದಿಸಿ, ಬಳಕೆ ಮಾಡುವವರಾಗಿರಬೇಕು. ಆಗ ಕಾರು ಸಾಲದ ಮೇಲೆ ಪಾವತಿಸುವ 'ಬಡ್ಡಿ'ಯನ್ನು ನಿಮ್ಮ ವ್ಯವಹಾರದ ವೆಚ್ಚ ಎಂದು ತೋರಿಸಬಹುದು. ಈ ಬಡ್ಡಿಯ ಮೊತ್ತವನ್ನು ನಿಮ್ಮ ಒಟ್ಟು ತೆರಿಗೆಗೆ ಒಳಪಡುವ ಆದಾಯದಿಂದ ಕಳೆಯಬಹುದು, ಇದರಿಂದ ನಿಮ್ಮ ತೆರಿಗೆ ಹೊರೆ ಕಡಿಮೆಯಾಗುತ್ತದೆ.
ತೆರಿಗೆ ಉಳಿತಾಯದ ಮತ್ತೊಂದು ಪ್ರಮುಖ ಅಂಶವೆಂದರೆ ಸವಕಳಿ ಅಥವಾ 'ಡೆಪ್ರಿಸಿಯೇಷನ್' ವ್ಯವಹಾರದ ಉದ್ದೇಶಕ್ಕಾಗಿ ಬಳಸುವ ಕಾರಿನ ಮೌಲ್ಯವು ಪ್ರತಿ ವರ್ಷ ಕಡಿಮೆಯಾಗುತ್ತಾ ಹೋಗುತ್ತದೆ. ಈ ಸವಕಳಿಯನ್ನು ಸಹ ವ್ಯವಹಾರದ ನಷ್ಟ ಅಥವಾ ವೆಚ್ಚವೆಂದು ಪರಿಗಣಿಸಿ ತೆರಿಗೆ ವಿನಾಯಿತಿ ಪಡೆಯಬಹುದು. ಪ್ರಸ್ತುತ ನಿಯಮಗಳ ಪ್ರಕಾರ, ವಾಣಿಜ್ಯ ಬಳಕೆಯ ಕಾರುಗಳ ಮೇಲೆ ವಾರ್ಷಿಕವಾಗಿ ಶೇ.15ರಷ್ಟು ಸವಕಳಿ ಲಾಭವನ್ನು ಪಡೆಯಲು ಅವಕಾಶವಿದೆ.
ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸರ್ಕಾರವು ಸೆಕ್ಷನ್ 80EEB ಅಡಿಯಲ್ಲಿ ವಿಶೇಷ ರಿಯಾಯಿತಿ ನೀಡಿತ್ತು. ಇದರ ಅಡಿಯಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸಿದವರು ಸಾಲದ ಬಡ್ಡಿಯ ಮೇಲೆ 1.5 ಲಕ್ಷ ರೂಪಾಯಿಗಳವರೆಗೆ ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿತ್ತು. ಗಮನಿಸಿ, ಈ ಸೌಲಭ್ಯವು ಮಾರ್ಚ್ 31, 2023 ರ ಮೊದಲು ಮಂಜೂರಾದ ಸಾಲಗಳಿಗೆ ಅನ್ವಯಿಸುತ್ತದೆ.
ಕಾರು ಸಾಲದ ತೆರಿಗೆ ಲಾಭ ಪಡೆಯಲು ಕಾರು ವ್ಯವಹಾರದ ಹೆಸರಿನಲ್ಲಿ ಅಥವಾ ಉದ್ಯಮಿಯ ಹೆಸರಿನಲ್ಲಿ ನೋಂದಣಿಯಾಗಿರಬೇಕು ಮತ್ತು ಅದನ್ನು ಪ್ರಮುಖವಾಗಿ ಉದ್ಯೋಗಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ಬಳಸುತ್ತಿರಬೇಕು, (ಏಜೆನ್ಸೀಸ್).