ವಿಕ್ರಮ್ ನಂದೋಡಿ, ಜೋರ್ಹತ್
ರಾಜ್ಯದಲ್ಲಿ ಮಹತ್ವದ ರಾಜಕೀಯ ತಿರುವು ಸಂಭವಿಸಿ ಒಂದು ದಶಕವಾಗಿದೆ. 2016ರ ಅಸ್ಸಾಂ ವಿಧಾನಸಭಾ ಚುನಾವಣೆಯು ಈಶಾನ್ಯ ರಾಜ್ಯದ ರಾಜಕೀಯದಲ್ಲಿ ಮಹತ್ವದ ತಿರುವು ನೀಡಿತು. 15 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿ ಬಿಜೆಪಿ ಅಧಿಕಾರಿಕ್ಕೆ ಬಂದಿತ್ತು. ಕಳೆದ ಎರಡು ಚುನಾವಣೆಯಲ್ಲಿ (2016, 2021) ಗೆದ್ದಿರುವ ಬಿಜೆಪಿ ಈಗ ಹ್ಯಾಟ್ರಿಕ್ ಗೆಲುವು ಸಾಧಿಸಲು ಶ್ರಮಿಸುತ್ತಿದೆ. ಸರ್ಕಾರದ ಅಭಿವೃದ್ಧಿ ಕೆಲಸ, ಮುಖ್ಯಮಂತ್ರಿ ಹಿಮಂತ್ ಬಿಸ್ವಾ ನಾಯಕತ್ವ ಹಾಗೂ ಕ್ಷೇತ್ರ ವಿಂಗಡಣೆಯಂತಹ ವಿಚಾರಗಳು ಬಿಜೆಪಿಗೆ ಈ ಬಾರಿ ಒಂದಿಷ್ಟು ಲಾಭ ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗಿದೆ.
ಒಂದೇ ಹಂತದಲ್ಲಿ ಅಸ್ಸಾಮಿನ 126 ಕ್ಷೇತ್ರಗಳಿಗೆ ಇಂದು (ಏಪ್ರಿಲ್ 9) ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ ಅಸ್ಸೋಂ ಗಣಪರಿಷತ್ (ಎಜಿಪಿ) ಮತ್ತು ಬೊಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಪಕ್ಷ ಈ ಬಾರಿಯ ಚುನಾವಣಾ ಅಖಾಡದಲ್ಲಿ ಅಪ್ಪರ್ ಅಸ್ಸಾಂ, ಉತ್ತರ ಅಸ್ಸಾಂ, ಕೇಂದ್ರ ಅಸ್ಸಾಂ ಮೇಲಿನ ಕ್ಷೇತ್ರಗಳಲ್ಲಿ ಜಯ ಸಾಧಿಸುವ ಇರಾದೆಯೊಂದಿಗೆ ಕೆಳ ಅಸ್ಸಾಂ ಭಾಗದಲ್ಲಿಯೂ ಪಕ್ಷದ ಬಾವುಟ ಹಾರಿಸುವ ಪ್ರಯತ್ನದಲ್ಲಿವೆ.
ಕೆಳ ಅಸ್ಸಾಂ ಭಾಗದಲ್ಲಿ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರಗಳ ಸಂಖ್ಯೆ ಈ ಹಿಂದೆ 35 ಇತ್ತಾದರೂ, ಕ್ಷೇತ್ರ ವಿಂಗಡಣೆ ಬಳಿಕ ಈ ಸಂಖ್ಯೆ 24ಕ್ಕೆ ಇಳಿದಿದೆ. ಅಲ್ಲಿಗೆ 11 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ ಎಂಬುವ ಪರಿಸ್ಥಿತಿ ಇಲ್ಲದಂತಾಗಿದೆ.
ಇನ್ನು ಕಾಂಗ್ರೆಸ್ ಪಕ್ಷವು ರೈಜೋರ್ ದಳ, ಅಸ್ಸೋಮ್ ಜಾತೀಯ ಪರಿಷತ್ ಜತೆಗಿನ ಮೈತ್ರಿ ಮಾಡಿಕೊಂಡಿದ್ದು, ತನ್ನ ಭದ್ರಕೋಟೆ ಎಂದೆನಿಸಿಕೊಂಡಿರುವ ಕೆಳ ಅಸ್ಸಾಂನಲ್ಲಿ ಈ ಬಾರಿ ಒಂದಿಷ್ಟು ಕ್ಷೇತ್ರಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. 2023ರಲ್ಲಿ ನಡೆಸಲಾಗಿರುವ ಕ್ಷೇತ್ರ ವಿಂಗಡಣೆಯೂ ಇದಕ್ಕೆ ಪುಷ್ಠಿ ನೀಡಿರುವುದು ಒಂದೆಡೆಯಾದರೆ, ಈ ಬಾರಿ ಕಾಂಗ್ರೆಸ್, ಎಐಯುಡಿಎಫ್ ಪಕ್ಷದೊಂದಿಗಿನ ಮೈತ್ರಿ ಕಡಿದುಕೊಂಡಿರುವುದು ಅಲ್ಪಸಂಖ್ಯಾತರ ಮತ ವಿಭಜನೆಯ ಆತಂಕವನ್ನು ಸೃಷ್ಟಿಸಿದೆ.
ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು, ಜನಸಂಖ್ಯಾ ಬದಲಾವಣೆ ಮತ್ತು ಸ್ಥಳೀಯ ಭಾಷೆ, ಸಂಸ್ಕೃತಿ ರಕ್ಷಣೆಯ ವಿಚಾರಗಳು ಈ ಬಾರಿಯ ಚುನಾವಣೆಯಲ್ಲಿ ತೀವ್ರ ಪರಿಣಾಮ ಬೀರಿವೆ. ಸಿಎಂ ಹಿಮಂತ್ ಬಿಸ್ವಾ ಶರ್ಮ, ಮಿಯಾ (ಬಾಂಗ್ಲಾದೇಶಿ ಮೂಲದ ಮುಸ್ಲಿಮರು) ವಿರುದ್ಧ ತೀವ್ರ ನಿಲುವು ತೆಗೆದುಕೊಂಡು ಸ್ಥಳೀಯ ಮತದಾರರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ನ ಬೂತ್ ಮಟ್ಟದ ಸಂಘಟನೆ ಈ ಬಾರಿಯ ಚುನಾವಣೆಯಲ್ಲಿ ಬಲಿಷ್ಠವಾಗಿ ಕೆಲಸ ಮಾಡಿದ್ದರೆ, ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಸಂಘಟನೆ ವಿಚಾರವಾಗಿ ಎಡವಿದೆ.
ವಿವಾದಿತ ಹಾಗೂ ಪ್ರೀತಿಪಾತ್ರ ಸಿಎಂ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸಿಎಂ ಹಿಮಂತ್ ಕೇಂದ್ರ ಬಿಂದುವಾಗಿದ್ದರೆ, ವಿರೋಧ ಪಕ್ಷಗಳಿಗೆ ವಿವಾದಿತ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಜನತೆ ಶರ್ಮರನ್ನು ಪ್ರೀತಿಪಾತ್ರರಾದವರು ಎಂದು ಬಣ್ಣಿಸಿದರೆ, ವಿರೋಧ ಪಕ್ಷ ಹಾಗೂ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದ ಮತದಾರರು, ಮೂಲ ಬಿಜೆಪಿಗರು ಸಹ ಇವರಷ್ಟು ಹಿಂದುತ್ವ ಪಾಲನೆ ಮಾಡುತ್ತಾರೆಯೋ ಇಲ್ಲವೋ ತಿಳಿದಿಲ್ಲ. ಆದರೆ ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗಿರುವ ಹಿಮಂತ್ ಬಿಸ್ವಾ ಮಾತ್ರ ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗೊಗೊಯ್ಗೂ ಗೆಲುವು ಸುಲಭವಲ್ಲ
2024ರ ಲೋಕಸಭಾ ಚುನಾವಣೆಯಲ್ಲಿ ಜೋರ್ಹತ್ ಲೋಕಸಭಾ ಕ್ಷೇತ್ರದಿಂದ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಈ ಬಾರಿ ಜೋರ್ಹತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಬಿಜೆಪಿಯಿಂದ ಹಿತೇಂದ್ರ ಗೋಸ್ವಾಮಿ ಅವರನ್ನು ಎದುರಿಸುತ್ತಿದ್ದಾರೆ. ಗೋಸ್ವಾಮಿ 2006 ಮತ್ತು 2011ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಣಾ ಗೋಸ್ವಾಮಿ ವಿರುದ್ಧ ಸೋಲನುಭವಿಸಿದ್ದರೂ 2016 ಮತ್ತು 2021ರಲ್ಲಿ ಅದೇ ಪ್ರತಿಸ್ಪರ್ಧಿ ವಿರುದ್ದ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಗೌರವ್ ಗೊಗೊಯ್ ಕಣದಲ್ಲಿದ್ದು, ಕ್ಷೇತ್ರದಲ್ಲಿನ ಮತದಾರರು ಇಬ್ಬರೂ ಅಭ್ಯರ್ಥಿಗಳು ಉತ್ತಮರೇ. ಯಾರಿಗೆ ಗೆಲುವು ದೊರೆತರೂ ಮತಗಳ ಅಂತರ ಎರಡರಿಂದ ಎರಡೂವರೆ ಸಾವಿರ ಮಾತ್ರ ಎಂದು ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.