Giriraj Singh | ರಾಹುಲ್ ಗಾಂಧಿ ವೈರಲ್ ಫೋಟೋ ಶೇರ್ ಮಾಡಿ 'ಯಾರೀ ಮಹಿಳೆ ಮತ್ತು ಮಗು' ಎಂದ ಕೇಂದ್ರ ಸಚಿವ
ರಾಜಕೀಯ ನಾಯಕರ ವೈಯಕ್ತಿಕ ಕ್ಷಣಗಳು ಸಾರ್ವಜನಿಕ ವಲುಯದಲ್ಲಿ ನಿಗೂಢವಾಗಿ ಉಳಿಯುವುದು ತೀರಾ ಅಪರೂಪ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಜೆಯ ಸಂದರ್ಭದಲ್ಲಿ ದೋಣಿಯೊಂದರಲ್ಲಿ ಮಹಿಳೆ ಮತ್ತು ಮಗುವಿನೊಂದಿಗೆ ಕುಳಿತಿರುವ ಫೋಟೋವನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ (Giriraj Singh) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ನಂತರ, ಅದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಗಿರಿರಾಜ್ ಸಿಂಗ್ ಅವರು ಎಕ್ಸ್‌ನಲ್ಲಿ, ರಾಹುಲ್ ಜಿ, ಈ ಫೋಟೋವನ್ನು ಎಲ್ಲಿ ತೆಗೆಯಲಾಗಿದೆ, ಯಾವಾಗ ತೆಗೆಯಲಾಗಿದೆ ಮತ್ತು ನಿಮ್ಮೊಂದಿಗೆ ಈ ಫೋಟೋದಲ್ಲಿ ಇರುವ ಜನರು ಯಾರು..? ಇದನ್ನು ತಿಳಿದುಕೊಳ್ಳಲು ನನಗೆ ತೀವ್ರ ಕುತೂಹಲವಿದೆ! ಎಂದು ಪೋಸ್ಟ್ ಮಾಡಿದ್ದರು.
ರಾಹುಲ್ ಗಾಂಧಿ ವಿದೇಶಿ ಪ್ರವಾಸಗಳ ಬಗ್ಗೆ ಬಿಜೆಪಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದೆ. ಜೂನ್ ಮತ್ತು ಜುಲೈ ನಡುವೆ ರಾಹುಲ್ ನಡೆಸಿದ ಮೂರು ವಾರಗಳ ವಿದೇಶಿ ಪ್ರವಾಸದ ಬಗ್ಗೆಯೂ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಗಿರಿರಾಜ್ ಸಿಂಗ್ ಹಂಚಿಕೊಂಡಿರುವ ಈ ಚಿತ್ರವು ಅವರ ಇತ್ತೀಚಿನ ಪ್ರವಾಸದ್ದೇ ಅಥವಾ ಹಳೆಯದ್ದೇ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಯಿತು. ಕೇಂದ್ರ ಸಚಿವರು ಹಂಚಿಕೊಂಡಿರುವ ಚಿತ್ರದಲ್ಲಿ, ರಾಹುಲ್ ಗಾಂಧಿ ಅವರೊಂದಿಗೆ ತಲೆಗೆ ಸ್ಕಾರ್ಫ್ ಹಾಗೂ ಕೂಲಿಂಗ್ ಗ್ಲಾಸ್ ಧರಿಸಿದ ಮಹಿಳೆ ಮತ್ತು ಮಗು ದೋಣಿಯಲ್ಲಿ ಕುಳಿತಿರುವುದು ಕಂಡುಬರುತ್ತದೆ. ನೀಲಿ ಬಣ್ಣದ ಸ್ವಿಮ್ ಡ್ರೆಸ್ ಧರಿಸಿದ ಮಗು ರಾಹುಲ್ ಮತ್ತು ಮಹಿಳೆಯ ನಡುವೆ ಕುಳಿತಿದೆ.
ಕಾಂಗ್ರೆಸ್ ನೀಡಿದ ಸ್ಪಷ್ಟನೆ ಏನು..?
ಈ ಫೋಟೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕಾಂಗ್ರೆಸ್ ಪಕ್ಷವು ತಕ್ಷಣವೇ ಸ್ಪಷ್ಟನೆ ನೀಡಿದ್ದು, ಫೋಟೋದಲ್ಲಿ ಕಂಡುಬರುವ ಮಹಿಳೆ ಮತ್ತು ಮಗು ರಾಹುಲ್ ಗಾಂಧಿ ಅವರ ಆಪ್ತ ಸ್ನೇಹಿತನ ಹೆಂಡತಿ ಮತ್ತು ಮಗ ಎಂದು ಕಾಂಗ್ರೆಸ್ ತಿಳಿಸಿದೆ. ಗಿರಿರಾಜ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ, ಅವರನ್ನು ಕೀಳು ಮನಸ್ಥಿತಿಯ ವ್ಯಕ್ತಿ ಎಂದು ಕರೆದಿದ್ದಾರೆ.
ಫೋಟೋದಲ್ಲಿ ಇರುವವರು ರಾಹುಲ್ ಅವರ ಸ್ನೇಹಿತನ ಹೆಂಡತಿ ಮತ್ತು ಮಗು. ಅವರೆಲ್ಲರೂ ಒಟ್ಟಾಗಿ ಕುಟುಂಬ ಸಮೇತ ರಜಾದಿನಗಳನ್ನು ಕಳೆಯಲು ಹೋಗಿದ್ದರು. ಆದರೆ, ಆ ಫೋಟೋದಲ್ಲಿ ಸ್ನೇಹಿತನಿಲ್ಲ ಅಷ್ಟೇ. ನೀವು ಕೀಳು ಮನಸ್ಥಿತಿಯ ವ್ಯಕ್ತಿಯಾಗಿದ್ದು, ಒಬ್ಬ ಪುರುಷ ಮತ್ತು ಮಹಿಳೆ ಒಟ್ಟಿಗೆ ಇರುವುದನ್ನು ಕಂಡರೆ ತಕ್ಷಣವೇ ನೀಚ ಆಲೋಚನೆಗಳನ್ನು ಮಾತ್ರ ಮಾಡುತ್ತೀರಿ. ನಿಮ್ಮ ಸ್ವಂತ ಹತಾಶೆಗಳು ನಿಮ್ಮನ್ನು ಆವರಿಸಲು ಬಿಡಬೇಡಿ ಎಂದು ಶ್ರೀನಾಟೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ನ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಅವಿ ದಾಂಡಿಯಾ ಇನ್ನಷ್ಟು ವಿವರಗಳನ್ನು ನೀಡುತ್ತಾ, ಈ ಫೋಟೋವನ್ನು ಅಮೆರಿಕದ ಟೆಕ್ಸಾಸ್‌ನಲ್ಲಿರುವ ರೇ ರಾಬರ್ಟ್ಸ್ ಸರೋವರದಲ್ಲಿ ತೆಗೆಯಲಾಗಿದೆ, ಗಿರಿರಾಜ್ ಸಿಂಗ್ ಅವರೇ, ಇದು ನಿಜವೋ ಅಲ್ಲವೋ ಎಂದು ನೀವೇ ಸ್ವತಃ ತನಿಖೆ ಮಾಡಿ ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ. ಅತ್ತ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಕೇಂದ್ರ ಸಚಿವರಿಗೆ ವ್ಯಂಗ್ಯದ ಸಂದೇಶ ರವಾನಿಸಿದ್ದು, ವೃದ್ಧಾಪ್ಯದಲ್ಲಿ ಇಷ್ಟೊಂದು ಕುತೂಹಲ ಒಳ್ಳೆಯದಲ್ಲ, ತಕ್ಷಣವೇ ಒಬ್ಬ ಒಳ್ಳೆಯ ವೈದ್ಯರನ್ನು ಸಂಪರ್ಕಿಸಿ ಎಂದು ಟಾಂಗ್ ನೀಡಿದ್ದಾರೆ.
ರಾಹುಲ್ ಪ್ರವಾಸಗಳ ಬಗ್ಗೆ ಬಿಜೆಪಿ ಪ್ರಶ್ನೆಗಳ ಸುರಿಮಳೆ
ಇತ್ತೀಚಿನ ವಿದೇಶಿ ಪ್ರವಾಸಗಳ ವಿಷಯದಲ್ಲಿ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ತನ್ನ ವಾಗ್ದಾಳಿಯನ್ನು ಚುರುಕುಗೊಳಿಸಿರುವ ಸಮಯದಲ್ಲೇ ಈ ಫೋಟೋ ವಿವಾದ ಹೊರಬಿದ್ದಿದೆ. ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಲು ಕೆಲವೇ ದಿನಗಳ ಮೊದಲು ರಾಹುಲ್ ಭಾರತಕ್ಕೆ ಮರಳಿದ್ದರು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕಳೆದ ತಿಂಗಳು ಟ್ವೀಟ್ ಮಾಡಿ, ಜೂನ್ 22 ರಿಂದ ಜುಲೈ 13 ರ ನಡುವಿನ ರಾಹುಲ್ ಗಾಂಧಿ ವಿದೇಶಿ ಪ್ರವಾಸವು ರಹಸ್ಯವಾಗಿಯೇ ಉಳಿದಿದೆ. ಅವರು ಎಲ್ಲಿಗೆ ಹೋಗಿದ್ದರು..? ಯಾರನ್ನು ಭೇಟಿಯಾದರು..? ಅವರ ಪ್ರವಾಸ ಮತ್ತು ವಾಸ್ತವ್ಯಕ್ಕೆ ಯಾರು ಹಣಕಾಸಿನ ನೆರವು ನೀಡಿದರು..? ಎಂದು ಪ್ರಶ್ನಿಸಿದ್ದರು.
ಲೋಕಸಭೆಯ ವಿರೋಧ ಪಕ್ಷದ ನಾಯಕರ ಈ ವಿದೇಶಿ ಭೇಟಿಗಳು ದೇಶದ ರಾಜಕೀಯ ಅಥವಾ ಆಯಕಟ್ಟಿನ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಭೇಟಿಗಳನ್ನು ಒಳಗೊಂಡಿವೆಯೇ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದು ಮಾಳವಿಯಾ ಒತ್ತಾಯಿಸಿದ್ದರು. ಮುಂಬೈ ಬಿಜೆಪಿ ಅಧ್ಯಕ್ಷ ಅಮಿತ್ ಸಾಟಮ್ ಒಂದು ಹೆಜ್ಜೆ ಮುಂದೆ ಹೋಗಿ, ರಾಹುಲ್ ತಮ್ಮ ವಿದೇಶಿ ಭೇಟಿಗಳ ಸಮಯದಲ್ಲಿ ಭಾರತದ ಶತ್ರುಗಳನ್ನು ಭೇಟಿಯಾಗುತ್ತಿದ್ದಾರೆ ಮತ್ತು ದೇಶದಲ್ಲಿ ಗೊಂದಲಗಳನ್ನು ಸೃಷ್ಟಿಸಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದ್ದರು.
ಬಿಜೆಪಿಯ ಆರೋಪದ ಪ್ರಕಾರ, ರಾಹುಲ್ ಗಾಂಧಿ ಅವರು ಲಂಡನ್, ನ್ಯೂಯಾರ್ಕ್, ಇಟಲಿ, ಜರ್ಮನಿ, ಖತಾರ್, ವಿಯೆಟ್ನಾಂ, ಕಾಂಬೋಡಿಯಾ, ಮಾಲ್ಡೀವ್ಸ್, ದುಬೈ ಮತ್ತು ಓಮನ್‌ಗೆ ಕೈಗೊಂಡ ರಹಸ್ಯ ಭೇಟಿ ಸೇರಿದಂತೆ ಒಟ್ಟು 54 ವಿದೇಶಿ ಪ್ರವಾಸಗಳನ್ನು ಮಾಡಿದ್ದಾರೆ. ಈ ಪ್ರವಾಸಗಳ ಒಟ್ಟು ಅಂದಾಜು ವೆಚ್ಚ ಸುಮಾರು 60 ಕೋಟಿ ರೂಪಾಯಿ ಎಂದು ಹೇಳಿರುವ ಬಿಜೆಪಿ, ಅವರ ಘೋಷಿತ ಆದಾಯಕ್ಕೂ ಮತ್ತು ಪ್ರವಾಸದ ವೆಚ್ಚಕ್ಕೂ ಭಾರಿ ವ್ಯತ್ಯಾಸವಿದೆ ಎಂದು ದೂರಿದೆ.
ಕಳೆದ 10 ವರ್ಷಗಳಲ್ಲಿ ರಾಹುಲ್ ಅವರು ಪ್ರಮಾಣಪತ್ರದ ಮೂಲಕ ಘೋಷಿಸಿಕೊಂಡ ಒಟ್ಟು ಆದಾಯ ಕೇವಲ 11 ಕೋಟಿ ರೂಪಾಯಿ ಆಗಿದ್ದು, ಇದು ದೇಶದ ಮುಂದಿರುವ ಬೃಹತ್ ಫಂಡಿಂಗ್ ಹಗರಣವಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಜೊತೆಗೆ 2025ರ ಸಿಆರ್‌ಪಿಎಫ್ ಪತ್ರವನ್ನು ಉಲ್ಲೇಖಿಸಿರುವ ಬಿಜೆಪಿ, ರಾಹುಲ್ ಗಾಂಧಿ ಅವರು ತಮ್ಮ ಹಲವು ವಿದೇಶಿ ಪ್ರವಾಸಗಳ ವೇಳೆ ಕಡ್ಡಾಯ ಭದ್ರತಾ ನಿಯಮಾವಳಿಗಳನ್ನು ಸಹ ಪಾಲಿಸಿಲ್ಲ ಎಂದು ಆರೋಪಿಸಿದೆ(ಏಜೆನ್ಸೀಸ್).