ನವದೆಹಲಿ: ಆಗಸ್ಟ್ 15ರ ಸ್ವಾತಂತ್ರೋತ್ಸವದ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ದಿಮಾಗಿ ನಕ್ಸಲ್(Dimagi Naxal) ಎಂಬ ಪದವನ್ನು ಬಳಿಸಿದ ಬಳಿಕ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪಷ್ಟನೆ ನೀಡಿದ್ದಾರೆ. ಆದರೆ(ಆ. 29) ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ ತನ್ನ ಸಂಪಾದಕೀಯದಲ್ಲಿ ಮತ್ತಷ್ಟು ವಿವರಣೆ ನೀಡಿದೆ.
ನಿಯತಕಾಲಿಕೆ ಸಂಪಾದಕ ಪ್ರಫುಲ್ ಕೇತ್ಕರ್ ಬರೆದಿರುವ ಸಂಪಾದಕೀಯದಲ್ಲಿ, ಯುಪಿಎ ಸರ್ಕಾರದ ಅವಧಿಯಲ್ಲಿ ನೀತಿ ನಿರ್ಧಾರಗಳ ಕುರಿತು ಸೋನಿಯಾ ಗಾಂಧಿ ನೇತೃತ್ವದ ಸಮಾಲೋಚನಾ ಸಂಸ್ಥೆಯಾದ ರಾಷ್ಟ್ರೀಯ ಸಲಹಾ ಮಂಡಳಿಯನ್ನು ದಿಮಾಗಿ ನಕ್ಸಲ್ ಆಡಳಿತವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಒಂದು ಉದಾಹರಣೆ ಎಂದು ಬಣ್ಣಿಸಿದ್ದಾರೆ.
ಈ ಪದವನ್ನು ಪ್ರಧಾನಿಯವರು ಬಳಸುತ್ತಿದ್ದಂತೆ ಕೆಲವರು ಕೋಪಗೊಂಡು ಬೌದ್ಧಿಕ ವಿರೋಧಿ ಎಂದು ಕರೆದಿದ್ದಾರೆ. ಆದರೆ ಅದೇ ಮನಸ್ಥಿತಿ ಕೆಲವರು ಅದನ್ನು ಪ್ರತಿರೋಧದ ವಿಧಾನವನ್ನಾಗಿ ಮಾಡುವ ಮೂಲಕ ಗೌರವದ ಬ್ಯಾಡ್ಜ್ ಆಗಿ ಪರಿವರ್ತಿಸಿಕೊಂಡರು ಎಂದು ಟೀಕಿಸಲಾಗಿದೆ.
ನಕ್ಸಲಿಸಂ ಅಥವಾ ಮಾವೋವಾದ ಎಂಬ ಹಿಂಸಾತ್ಮಕ ಮತ್ತು ವಿನಾಶಕಾರಿ ಸಿದ್ಧಾಂತ ನಂಬುವವರಿಗೆ 'ದಿಮಾಗಿ ನಕ್ಸಲ್' ಎಂಬ ಪದ ಹೊಸದಲ್ಲ, ಅವಮಾನಕರವೂ ಅಲ್ಲ. ಸಶಸ್ತ್ರ ಹೋರಾಟದ ಮೂಲಕ ಭಾರತದ ಅಧಿಕಾರವನ್ನು ವಶಪಡಿಸಿಕೊಳ್ಳುವುದು ಅವರ ಗುರಿಯಾಗಿದೆ. ಯುದ್ಧಗಳನ್ನು ನಡೆಸುವ ಮೂಲಕ ಭಾರತೀಯ ಸೇನೆ, ಪೊಲೀಸ್ ಪಡೆ ಮತ್ತು ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ನಾಶಪಡಿಸುವುದು ಅವರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದೆ.
ಸಶಸ್ತ್ರ ದಂಗೆ ವಿಫಲವಾದ ಬಳಿಕ, ಈ ಸಿದ್ಧಾಂತದ ದಿಮಾಗಿ ಆವೃತ್ತಿಯು ಮುಂಚೂಣಿಗೆ ಬಂದಿದೆ ಎಂದು ಪ್ರತಿಪಾದಿಸಿದ್ದು, ಇವರು ನಗರಗಳಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಾ, ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕ ವರ್ಗ, ರೈತರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹೆಸರಿನಲ್ಲಿ ವಿವಿಧ ಸಂಘಟನೆಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಆರೋಪಿಸಿದೆ.
ತಮ್ಮದೇ ಆದ ವೇದಿಕೆಯ ಮೂಲಕ ವಿಭಾಗೀಯ ಕಾರ್ಯ ನಡೆಸಲು ಅವಕಾಶವಿಲ್ಲದ ಕಡೆಗಳಲ್ಲಿ, ಅವರು ಇತರ ಸಂಘಟನೆಗಳೊಳಗೆ ನುಸುಳಿ ಅತ್ಯಂತ ರಹಸ್ಯ ರೀತಿಯಲ್ಲಿ ಕಾರ್ಯಸೂಚಿಯನ್ನು ರೂಪಿಸುತ್ತಾರೆ. ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರ್ಕಾರದ ರಾಷ್ಟ್ರೀಯ ಸಲಹಾ ಮಂಡಳಿಯು ಆಡಳಿತ ವ್ಯವಸ್ಥೆಯನ್ನು ದಿಮಾಗಿ ನಕ್ಸಲರು ವಶಪಡಿಸಿಕೊಂಡಿದ್ದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಆಡಳಿತ ಯಂತ್ರ, ನೀತಿ ನಿರೂಪಣಾ ವ್ಯವಸ್ಥೆ, ನ್ಯಾಯಾಂಗ, ಶಿಕ್ಷಣ ಕ್ಷೇತ್ರ, ಮಾಧ್ಯಮ ಮತ್ತು ಸ್ವಯಂಸೇವಾ ಸಂಸ್ಥೆಗಳ ಒಳಗೆ ನುಸುಳುವ ದಿಮಾಗಿ ನಕ್ಸಲರ ಕಲ್ಪನೆಯು ಅವರ ಕ್ರಾಂತಿಕಾರಿ ತಂತ್ರದ ಒಂದು ಭಾಗವಾಗಿದೆ. ಅವರು ಬಂದೂಕುಗಳನ್ನು ಹಿಡಿಯುವುದಿಲ್ಲ, ಬದಲಾಗಿ ಬುದ್ಧಿಜೀವಿಗಳು, ಪ್ರಶಸ್ತಿ ವಿಜೇತ ಸಾಹಿತಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು, ಸ್ವತಂತ್ರ ಪತ್ರಕರ್ತರು, ಸೆಲೆಬ್ರಿಟಿಗಳು ಮತ್ತು ಪರಿಸರವಾದಿಗಳನ್ನು ಬಳಸಿಕೊಳ್ಳುತ್ತಾರೆ ಎಂದು ಉಲ್ಲೇಖಿಸಿದೆ (ಏಜೆನ್ಸೀಸ್).