Doctor White Coat  
ದೇಶ

ವೈದ್ಯರಿಗೆ ಬಿಳಿ, ವಕೀಲರಿಗೆ ಕಪ್ಪು ಕೋಟ್​! ಈ ಬಣ್ಣಗಳ ಹಿಂದಿರುವ ಅಸಲಿ ರಹಸ್ಯವೇನು?

ಬೆಂಗಳೂರು: ನಾವು ಆಸ್ಪತ್ರೆಗೆ ಹೋದಾಗ ವೈದ್ಯರು ಬಿಳಿ ಕೋಟ್‌ನಲ್ಲಿ ಮಿಂಚುತ್ತಿದ್ದರೆ, ನ್ಯಾಯಾಲಯದಲ್ಲಿ ವಕೀಲರು ಕಪ್ಪು ಕೋಟ್‌ನಲ್ಲಿ ಗಂಭೀರವಾಗಿ ಕಾಣಿಸುತ್ತಾರೆ. ಇದು ಕೇವಲ ಫ್ಯಾಷನ್ ಅಥವಾ ಸಮವಸ್ತ್ರವಲ್ಲ; ಇದರ ಹಿಂದೆ ಶತಮಾನಗಳ ಇತಿಹಾಸ, ವಿಜ್ಞಾನ ಮತ್ತು ಸಾಂಕೇತಿಕ ಅರ್ಥಗಳಿವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ಮಾಹಿತಿ ಭಾರಿ ವೈರಲ್ ಆಗುತ್ತಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.

ವೈದ್ಯರು 'ಬಿಳಿ' ಕೋಟ್ ಧರಿಸುವುದು ಏಕೆ?

ವೈದ್ಯಕೀಯ ಕ್ಷೇತ್ರದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ. ಬಿಳಿ ಬಣ್ಣದ ಮೇಲೆ ಸಣ್ಣ ಕಲೆ ಬಿದ್ದರೂ ತಕ್ಷಣವೇ ಕಾಣಿಸುತ್ತದೆ. ಇದು ವೈದ್ಯರು ತಮ್ಮನ್ನು ತಾವು ಸದಾ ಶುಚಿಯಾಗಿಟ್ಟುಕೊಳ್ಳಲು ಮತ್ತು ರೋಗಿಗಳಿಗೆ ಸೋಂಕು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ. ಬಿಳಿ ಬಣ್ಣವು ಶಾಂತಿ, ಸೌಮ್ಯತೆ ಮತ್ತು ಶುದ್ಧತೆಯ ಸಂಕೇತ. ಆಸ್ಪತ್ರೆಗೆ ಬರುವ ರೋಗಿಗಳು ಮಾನಸಿಕವಾಗಿ ಉದ್ವಿಗ್ನರಾಗಿರುತ್ತಾರೆ. ಬಿಳಿ ಬಣ್ಣವು ಅವರಲ್ಲಿ ಧನಾತ್ಮಕ ಭಾವನೆ ಮತ್ತು ನಂಬಿಕೆಯನ್ನು ಮೂಡಿಸುತ್ತದೆ.
ವಿಜ್ಞಾನದ ಪ್ರಕಾರ ಬಿಳಿ ಬಣ್ಣವು ಬೆಳಕನ್ನು ಪ್ರತಿಫಲಿಸುತ್ತದೆ ಮತ್ತು ಶಾಖವನ್ನು ಹೀರಿಕೊಳ್ಳುವುದಿಲ್ಲ. ಇದು ಆಸ್ಪತ್ರೆಯಂತಹ ಒತ್ತಡದ ಪರಿಸರದಲ್ಲಿ ವೈದ್ಯರ ದೇಹದ ತಾಪಮಾನವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಇತಿಹಾಸ: 19ನೇ ಶತಮಾನದ ಅಂತ್ಯದವರೆಗೆ ವೈದ್ಯರು ಕಪ್ಪು ಬಣ್ಣದ ಬಟ್ಟೆ ಧರಿಸುತ್ತಿದ್ದರು. ಆದರೆ, ವೈದ್ಯಕೀಯ ಕ್ಷೇತ್ರವು ಹೆಚ್ಚು ವೈಜ್ಞಾನಿಕವಾದಂತೆ, ನೈರ್ಮಲ್ಯದ ಸಂಕೇತವಾಗಿ 1915ರ ಸುಮಾರಿಗೆ ಬಿಳಿ ಬಣ್ಣವನ್ನು ಅಳವಡಿಸಿಕೊಳ್ಳಲಾಯಿತು ಎಂದು ಹೇಳಲಾಗುತ್ತಿದೆ.

ವಕೀಲರು 'ಕಪ್ಪು' ಕೋಟ್ ಧರಿಸುವುದು ಏಕೆ?

ಕಪ್ಪು ಬಣ್ಣವು ಅಧಿಕಾರ, ಘನತೆ ಮತ್ತು ಶಿಸ್ತಿನ ಸಂಕೇತವಾಗಿದೆ. ನ್ಯಾಯಾಲಯದಲ್ಲಿ ವಕೀಲರ ವಾದವು ಗಂಭೀರತೆಯಿಂದ ಕೂಡಿರಬೇಕು ಎಂಬುದನ್ನು ಇದು ಬಿಂಬಿಸುತ್ತದೆ. ನ್ಯಾಯ ದೇವತೆ ಕುರುಡು ಎಂದು ಹೇಳಲಾಗುತ್ತದೆ. ಅಂದರೆ, ನ್ಯಾಯದ ಮುಂದೆ ಎಲ್ಲರೂ ಸಮಾನರು. ಕಪ್ಪು ಬಣ್ಣವು ಭೇದ-ಭಾವವನ್ನು ಮಾಡುವುದಿಲ್ಲ. ಎದುರಾಳಿ ಯಾರೇ ಆಗಿರಲಿ, ವಕೀಲರು ಕೇವಲ ಕಾನೂನಿನ ಆಧಾರದ ಮೇಲೆ ವಾದಿಸಬೇಕು ಎಂಬುದು ಇದರ ಅರ್ಥ.
ಐತಿಹಾಸಿಕ ಕಾರಣ: 17 ನೇ ಶತಮಾನದಲ್ಲಿ ಬ್ರಿಟಿಷ್ ರಾಜ ಚಾರ್ಲ್ಸ್ II ರ ಮರಣದ ನಂತರ, ಅವರ ಸಾವಿಗೆ ಸಂತಾಪ ಸೂಚಿಸಲು, ರಾಜಮನೆತನವು ಶೋಕಾಚರಣೆಯ ಅಂಗವಾಗಿ ಕಪ್ಪು ಬಟ್ಟೆ ಧರಿಸಲು ಆದೇಶಿಸಿತ್ತು. ಅಂದಿನಿಂದ ವಕೀಲರಿಗೆ ಕಪ್ಪು ಕೋಟ್ ಒಂದು ಅಲಿಖಿತ ನಿಯಮವಾಗಿ ಮುಂದುವರಿಯಿತು.

ಕುತ್ತಿಗೆಗೆ ಧರಿಸುವ ಆ 'ಬಿಳಿ ಪಟ್ಟಿ' (Neckband) ವಿಶೇಷವೇನು?

ವಕೀಲರು ಧರಿಸುವ ಎರಡು ಬಿಳಿ ಪಟ್ಟಿಗಳು ಬ್ರಿಟಿಷ್ ಸಂಪ್ರದಾಯದಿಂದ ಬಂದಿದ್ದು, ಇವುಗಳನ್ನು "ಟ್ಯಾಬ್ಸ್" ಎಂದು ಕರೆಯುತ್ತಾರೆ. ಇವು ನ್ಯಾಯಾಲಯದ ಮೇಲೆ ವಕೀಲರು ಹೊಂದಿರುವ ನಿಷ್ಠೆ ಮತ್ತು ಪಾರದರ್ಶಕತೆಯನ್ನು ಪ್ರತಿನಿಧಿಸುತ್ತವೆ,(ಏಜೆನ್ಸೀಸ್​).