Gen Z MPs & MLAs 
ದೇಶ

ದೇಶದಲ್ಲೇ ಅತಿ ಹೆಚ್ಚು 'ಜೆನ್​ ಝೀ' ಜನಪ್ರತಿನಿಧಿಗಳು ಇರುವುದು ಯಾವ ಪಕ್ಷದಲ್ಲಿ ಗೊತ್ತಾ..? ಇಲ್ಲಿದೆ ನೋಡಿ ಕಂಪ್ಲೀಟ್​ ರಿಪೋರ್ಟ್! | Gen Z MPs & MLAs

ರಾಷ್ಟ್ರ ರಾಜಕೀಯದಲ್ಲಿ 25 ರಿಂದ 29 ವರ್ಷದೊಳಗಿನ ಯುವಕರು, ಅಂದರೆ ಜನರೇಶನ್ ಝೆಡ್ (Gen Z) ಪೀಳಿಗೆಯ ಜನಪ್ರತಿನಿಧಿಗಳ ಪ್ರಾತಿನಿಧ್ಯವು ದೇಶದ ಯುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಹೊಸ ಸಂಚಲನ ಮೂಡಿಸಿದೆ. ಪ್ರಸ್ತುತ ದೇಶಾದ್ಯಂತ ಒಟ್ಟು 26 Gen Z ಜನ ಶಾಸಕರು ಮತ್ತು ಸಂಸದರಿದ್ದು, ಇವರಲ್ಲಿ 6 ಜನರು ಸಂಸತ್ತಿನ ಲೋಕಸಭಾ ಸದಸ್ಯರಾಗಿದ್ದರೆ, ಉಳಿದ 20 ಜನರು ವಿವಿಧ ರಾಜ್ಯಗಳ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಲೋಕಸಭೆಯಲ್ಲಿ ಯುವ ಮುಖಗಳಿಗೆ ಆದ್ಯತೆ ನೀಡುವಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದ್ದು, ಒಟ್ಟು 3 ಯುವ ಸಂಸದರನ್ನು ಹೊಂದಿದೆ. ಅದರಲ್ಲೂ ರಾಜ್ಯದವರೇ ಆದ ಬೀದರ್​ ಸಂಸದ ಸಾಗರ್ ಖಂಡ್ರೆ, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ರಾಜಸ್ತಾನದ ಸಂಜನಾ ಜಾತವ್ ಅವರಂತಹ ಯುವ ನಾಯಕರು ಸಂಸತ್ತನ್ನು ಪ್ರವೇಶಿಸುವ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಾಂಗ್ರೆಸ್ ನಂತರದ ಸ್ಥಾನದಲ್ಲಿ ಸಮಾಜವಾದಿ ಪಾರ್ಟಿ (SP) ಇದ್ದು, 2 ಯುವ ಸಂಸದರನ್ನು (ಪುಷ್ಪೇಂದ್ರ ಸರೋಜ ಹಾಗೂ ಪ್ರಿಯಾ ಸರೋಜ) ಹೊಂದಿದೆ. ಲೋಕ ಜನಶಕ್ತಿ ಪಾರ್ಟಿ ರಾಮ್ ವಿಲಾಸ್ (LJP) 1 ಯುವ ಸಂಸದರನ್ನು (ಶಾಂಭವಿ ಚೌಧರಿ) ಹೊಂದುವ ಮೂಲಕ ಸಂಸತ್ತಿನಲ್ಲಿ ಯುವ ಶಕ್ತಿಯ ಉಪಸ್ಥಿತಿಯನ್ನು ದಾಖಲಿಸಿದೆ. ಆದರೆ, ರಾಜ್ಯ ಶಾಸನಸಭೆಗಳ (ವಿಧಾನಸಭೆ) ಮಟ್ಟದಲ್ಲಿ ಚಿತ್ರಣ ವಿಭಿನ್ನವಾಗಿದ್ದು, ಭಾರತೀಯ ಜನತಾ ಪಾರ್ಟಿ ಅಗ್ರಸ್ಥಾನದಲ್ಲಿದೆ. ಬಿಜೆಪಿ ಒಟ್ಟು 5 ಜೆನ್​ ಝೀ ಶಾಸಕರನ್ನು ಹೊಂದುವ ಮೂಲಕ ರಾಜ್ಯ ಮಟ್ಟದ ನಾಯಕತ್ವದಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ.
ಈ ಪಟ್ಟಿಯಲ್ಲಿ 4 ಜೆನ್​ ಝೀ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದರೆ, ತಮಿಳುನಾಡಿನಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಸಿಎಂ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ಪಕ್ಷವು 3 ಯುವ ಶಾಸಕರನ್ನು ಗೆಲ್ಲಿಸಿಕೊಳ್ಳುವ ಮೂಲಕ ಪ್ರಾದೇಶಿಕ ರಾಜಕೀಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಉಳಿದಂತೆ ಎಐಎಡಿಎಂಕೆ, ಡಿಎಂಕೆ, ಜೆಡಿಯು, ಎನ್​ಸಿಪಿ(ಶರದ್​​ ಬಣ), ಜನಸೇನಾ ಪಾರ್ಟಿ ಹಾಗೂ ಮೇಘಾಲಯದ ಎರಡು ಪ್ರಾದೇಶಿಕ ಪಕ್ಷಗಳು ತಲಾ ಒಬ್ಬೊಬ್ಬ ಜೆನ್​ ಝೀ ಶಾಸಕರನ್ನು ಹೊಂದಿವೆ. ಈ ಅಂಕಿ ಅಂಶವು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಾರ್ಟಿ ಯುವ ಮತದಾರರನ್ನು ತಲುಪಲು ಸಂಸತ್ತಿನ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದರೆ, ಬಿಜೆಪಿ ಮತ್ತು ನೂತನ ಪ್ರಾದೇಶಿಕ ಪಕ್ಷಗಳು ರಾಜ್ಯ ಶಾಸನಸಭೆಗಳ ಮಟ್ಟದಲ್ಲಿ ಯುವ ನಾಯಕರ ತಳಹದಿಯನ್ನು ಗಟ್ಟಿಮಾಡಿಕೊಳ್ಳುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ(ಏಜೆನ್ಸೀಸ್​).