ಸಂಖ್ಯಾಬಲವಿಲ್ಲದಿದ್ದರೂ ವಿರೋಧಿಸುತ್ತೇವೆ – ರಾಹುಲ್ ಗಾಂಧಿ  
ದೇಶ

ನಮ್ಮ ಬಳಿ ಸಂಖ್ಯಾಬಲ ಇರಲಿ ಬಿಡಲಿ....ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಬಗ್ಗೆ ರಾಹುಲ್​ ಮಾತು! | Rahul Gandhi

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಗೆ ಸಂಸತ್ತಿನಲ್ಲಿ ತೀವ್ರ ಪ್ರತಿರೋಧ ಒಡ್ಡಲು ಪ್ರತಿಪಕ್ಷಗಳ ಪಾಳಯ ಸಜ್ಜಾಗಿದೆ. ಮುಂದಿನ ವಾರ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಈ ವಿವಾದಾತ್ಮಕ ವಿಷಯವೇ ಪ್ರಮುಖವಾಗಿ ಪ್ರತಿಧ್ವನಿಸಲಿದೆ. ಮಸೂದೆಯನ್ನು ಅಂಗೀಕರಿಸಲು ಅಗತ್ಯವಿರುವ ಸಂಖ್ಯಾಬಲ ತನಗಿದೆ ಎಂಬ ವಿಶ್ವಾಸದಲ್ಲಿ ಆಡಳಿತಾರೂಢ ಬಿಜೆಪಿ ಇದ್ದರೆ, ಯಾವುದೇ ಬೆಲೆ ತೆತ್ತಾದರೂ ಈ ಪ್ರಸ್ತಾವಿತ ಮಸೂದೆಯನ್ನು ವಿರೋಧಿಸಲೇಬೇಕು ಎಂದು ಕಾಂಗ್ರೆಸ್ ತನ್ನ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.

ಪಕ್ಷದ ಸಂಸದೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಂಖ್ಯಾಬಲವಿಲ್ಲದಿದ್ದರೂ ವಿರೋಧಿಸುತ್ತೇವೆ – ರಾಹುಲ್ ಗಾಂಧಿ

ಸಭೆಯ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಿರೋಧ ಪಕ್ಷಗಳ ಬಳಿ ಸಂಖ್ಯಾಬಲ ಇದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ, ನಾವು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಅತ್ಯಂತ ತೀವ್ರವಾಗಿ ವಿರೋಧಿಸುತ್ತೇವೆ. ನಮ್ಮ ನಿರ್ಧಾರ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬಿಜೆಪಿಯು ಕೇವಲ ತನ್ನ ರಾಜಕೀಯ ಲಾಭಕ್ಕಾಗಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಮರುಪರಿಚಯಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕಾಂಗ್ರೆಸ್​ನ ಪ್ರಮುಖ ಬೇಡಿಕೆಗಳೇನು?

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಸಭೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಕಾಂಗ್ರೆಸ್ ಸಂಸದರು ಭಾಗವಹಿಸಿದ್ದರು ಎಂದು ತಿಳಿಸಿದರು. ಅಲ್ಲದೆ, ಶನಿವಾರವೂ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ ಎಂದರು.

ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ಗೊಗೊಯ್, ಮೊದಲಿನಿಂದಲೂ ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಮೊದಲನೆಯದಾಗಿ, ಲೋಕಸಭೆಯ ಪ್ರಸ್ತುತ ಸ್ಥಾನಗಳ ಬಲವನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಎರಡನೆಯದಾಗಿ, ಪ್ರಸ್ತುತ ಇರುವ ಸ್ಥಾನಗಳ ಸಂಖ್ಯೆಯಲ್ಲೇ ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು. ಮೂರನೆಯದಾಗಿ, ಮುಂದಿನ 25 ವರ್ಷಗಳ ಕಾಲ ಲೋಕಸಭೆಯಲ್ಲಿ ವಿವಿಧ ರಾಜ್ಯಗಳ ಸ್ಥಾನಗಳ ಅನುಪಾತವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು. ಇದು ನಮ್ಮ ಸ್ಪಷ್ಟ ಬೇಡಿಕೆಯಾಗಿದೆ ಎಂದು ಹೇಳಿದರು.

ಚುನಾವಣಾ ಆಯೋಗದ ವಿರುದ್ಧ ಗೊಗೊಯ್ ವಾಗ್ದಾಳಿ

ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಕ್ಷೇತ್ರ ಪುನರ್ವಿಂಗಡಣೆಯ ಅಗತ್ಯವಿಲ್ಲ ಎಂದು ಗೌರವ್ ಗೊಗೊಯ್ ಪ್ರತಿಪಾದಿಸಿದರು. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಮೂಲಕ, ಮತದಾರ ಎಲ್ಲಿ ಮತ ಚಲಾಯಿಸಬೇಕು ಎಂಬುದನ್ನು ನಿರ್ದೇಶಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಇದೆಲ್ಲವನ್ನೂ ಚುನಾವಣಾ ಆಯೋಗದ ಮೂಲಕ ಮಾಡಿಸಲಾಗುತ್ತಿದೆ. ಸರ್ಕಾರವು ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದು, ಜನರಿಗೆ ಅನ್ಯಾಯ ಎಸಗಿದೆ. ಹೀಗಿರುವಾಗ ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಅವರಿಂದ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ಜೋರ್ಹತ್ ಸಂಸದ ಗೊಗೊಯ್ ಪ್ರಶ್ನಿಸಿದ್ದಾರೆ.

ಮಸೂದೆ ಪರ ನಿಂತ ಶರದ್ ಪವಾರ್ ಬಣ!

ತನ್ನ ಪ್ರಮುಖ ಬೇಡಿಕೆಗಳು ಈಡೇರಿದರೆ ಬೆಂಬಲ ನೀಡಲು ಸಿದ್ಧವಿರುವುದಾಗಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಚಂದ್ರ ಪವಾರ್ ಬಣ) ಹೇಳಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲಾ ರಾಜ್ಯಗಳಲ್ಲೂ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಏಕರೂಪವಾಗಿ ಶೇ. 50ರಷ್ಟು ಹೆಚ್ಚಳವಾಗಬೇಕು ಮತ್ತು ಯಾವುದೇ ರಾಜ್ಯದ ಪ್ರಸ್ತುತ ಪ್ರಾತಿನಿಧ್ಯ ಕಡಿಮೆಯಾಗಬಾರದು ಎಂಬುದು ಪಕ್ಷದ ಪ್ರಮುಖ ನಿಲುವಾಗಿದೆ.

ಶರದ್ ಪವಾರ್ ಅವರೊಂದಿಗಿನ ಚರ್ಚೆಯ ವಿವರ ಹಂಚಿಕೊಂಡ ನಾಯಕ ಜಿತೇಂದ್ರ ಆವ್ಹಾಡ್, ಇದು ನಮ್ಮ ಪಕ್ಷದ ಅಧಿಕೃತ ನಿಲುವಿನ ಕುರಿತ ಚರ್ಚೆಯಾಗಿರಲಿಲ್ಲ. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಸಾಂವಿಧಾನಿಕ ಅಗತ್ಯವಾಗಿದೆ ಎಂಬ ಸಾಮಾನ್ಯ ಅಭಿಪ್ರಾಯ ವ್ಯಕ್ತವಾಗಿತ್ತು. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲಾಗಿದ್ದು, ನಾವು ಖಂಡಿತವಾಗಿಯೂ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

ಮಸೂದೆಯ ನಿರ್ದಿಷ್ಟ ನಿಬಂಧನೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪಕ್ಷವು ಅದನ್ನು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ನಾವು ಮಸೂದೆಯನ್ನು ಖಂಡಿತವಾಗಿ ಅಧ್ಯಯನ ಮಾಡುತ್ತೇವೆ, ಅದರಲ್ಲಿ ಯಾವುದೇ ಸಂದೇಹವಿಲ್ಲ. ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಸುಪ್ರಿಯಾ ಸುಳೆ ತೆಗೆದುಕೊಳ್ಳುವ ನಿರ್ಧಾರದಂತೆಯೇ ಎಲ್ಲವೂ ನಡೆಯಲಿದೆ ಎಂದು ಆವ್ಹಾಡ್ ತಿಳಿಸಿದ್ದಾರೆ(ಏಜೆನ್ಸೀಸ್​).